ಪಾಟ್ನಾ(ಡಿ.08): ರಾಜಸ್ತಾನ ಮುಖ್ಯಮಂತ್ರಿ ವಸುಂಧರಾ ರಾಜೇ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ್ದ ಜೆಡಿಯು ಮಾಜಿ ನಾಯಕ  ಶರದ್ ಯಾದವ್  ಕ್ಷಮೆ ಕೋರುವುದಾಗಿ ಹೇಳಿದ್ದಾರೆ.

ಶರದ್ ಯಾದವ್ ಅವಹೇಳನಕಾರಿ ಹೇಳಿಕೆ ವಿರುದ್ಧ ಚುನಾವಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು  ವಸಂಧರಾ ರಾಜೇ ಒತ್ತಾಯಿಸಿದ್ದರು.

ರಾಜೇ ಅವರ ಹೇಳಿಕೆಯನ್ನು ಗಮನಿಸಿದ್ದೇನೆ.  ತಮ್ಮಿಬ್ಬರ ನಡುವಿನ ಸಂಬಂಧ ತೀರಾ ಹಳೆಯದಾಗಿದ್ದು, ತಮ್ಮ ಹೇಳಿಕೆಯಿಂದ ನೋವಾಗಿದ್ದರೆ ಕ್ಷಮೆ ಯಾಚಿಸುವುದಾಗಿ ಯಾದವ್ ಸುದ್ದಿಗಾರರಿಗೆ ಹೇಳಿದ್ದಾರೆ. ಈ ಸಂಬಂಧ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ.

ಮಾಜಿ ರಾಜ್ಯಸಭಾ ಸದಸ್ಯರಾಗಿರುವ ಶರದ್ ಯಾದವ್, ರಾಜಸ್ತಾನದಲ್ಲಿ ಎಲ್‌ಜೆಡಿ ಪರ ಚುನಾವಣಾ ಪ್ರಚಾರದ ವೇಳೆಯಲ್ಲಿ  ವಸಂಧರಾ ರಾಜೇ ಸ್ಥೂಲಕಾಯದ  ಬಗ್ಗೆ ಮಾತನಾಡಿದರಲ್ಲದೇ, ಅವರನ್ನು ವಿಶ್ರಾಂತಿಗೆ ಕಳುಹಿಸುವಂತೆ ಜನರಲ್ಲಿ ಮನವಿ ಮಾಡಿಕೊಂಡಿದ್ದರು.

ಈ ಬಗ್ಗೆ ತೀವ್ರ ಟೀಕೆಗಳು ಕೇಳಿಬಂದ ನಂತರ ಇದೊಂದು ಹಾಸ್ಯ, ವಸುಂಧರಾ ರಾಜೇ ಅವರನ್ನು ನೋವಿಸುವ ಉದ್ದೇಶವಿರಲಿಲ್ಲ ಎಂದು ಹೇಳಿದ್ದರು.