ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿಯ  ಜೋಗುಳದ ಹಾಡು ‘ಹರಿವರಾಸನಂ'ನಲ್ಲಿ ಬದಲಾವಣೆ ಮಾಡಲು ತಿರುವಾಂಕೂರು ದೇವಸ್ವಂ ಮಂಡಳಿ  ನಿರ್ಧರಿಸಿದೆ.

ತಿರುವನಂತಪುರಂ (ನ.20): ಶಬರಿಮಲೆಯ ಶ್ರೀ ಅಯ್ಯಪ್ಪ ಸ್ವಾಮಿಯ ಜೋಗುಳದ ಹಾಡು ‘ಹರಿವರಾಸನಂ'ನಲ್ಲಿ ಬದಲಾವಣೆ ಮಾಡಲು ತಿರುವಾಂಕೂರು ದೇವಸ್ವಂ ಮಂಡಳಿ ನಿರ್ಧರಿಸಿದೆ.

ಹಾಡಿನ ಮೂಲ ರೂಪದಲ್ಲಿರುವ ಕೆಲ ಶಬ್ದಗಳನ್ನು ತೆಗೆದು, ತಪ್ಪಾಗಿ ಉಚ್ಚಾರಣೆಯಾಗಿರುವ ಪದಗಳನ್ನು ಸರಿಪಡಿಸಲು ನಿರ್ಧರಿಸಲಾಗಿದೆ. ‘ಹರಿವರಾಸನಂ' ಮೂಲ ಹಾಡನ್ನು 1975ರಲ್ಲಿ ತೆರೆ ಕಂಡಿದ್ದ "ಸ್ವಾಮಿ ಅಯ್ಯಪ್ಪನ್‌' ಚಿತ್ರಕ್ಕಾಗಿ ಖ್ಯಾತ ಗಾಯಕ ಕೆ.ಜೆ.ಯೇಸುದಾಸ್‌ ಹಾಡಿದ್ದರು. ಅಲ್ಲದೇ ಈ ಹಿಂದೆ ಯೇಸುದಾಸ್‌ ಅವರೇ ಸಾಹಿತ್ಯದಲ್ಲಿ ಬದಲಾಗಬೇಕು ಎಂದು ಸಲಹೆ ನೀಡಿದ್ದರು.

ಸದ್ಯ ಯೇಸುದಾಸ್‌ ಅಮೆರಿಕ ಪ್ರವಾಸದಲ್ಲಿದ್ದಾರೆ. ಮಾಸಾಂತ್ಯಕ್ಕೆ ಕೇರಳಕ್ಕೆ ಮರಳಲಿದ್ದು, ಆಗ ಹಾಡನ್ನು ಮತ್ತೂಮ್ಮೆ ರೆಕಾರ್ಡ್‌ ಮಾಡುವ ಬಗ್ಗೆ ಅವರ ಜತೆ ಚರ್ಚಿಸಬಹುದು ಎಂದು ಟಿಡಿಬಿಯ ಹೊಸ ಅಧ್ಯಕ್ಷ ಎ.ಪದ್ಮಕುಮಾರ್‌ ತಿಳಿಸಿದ್ದಾರೆ.