ಬೆಂಗಳೂರು :  ದೂರು ನೀಡಿದ್ದರೂ ತನಗೆ ಲೈಂಗಿಕ ಕಿರುಕುಳ ನೀಡಿದ್ದ ಒಲಾ ಕ್ಯಾಬ್‌ ಚಾಲಕನ ವಿರುದ್ಧ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಆರೋಪಿಸಿ ಮಹಿಳೆಯೊಬ್ಬರು ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್‌, ಎಎನ್‌ಐ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ ಕಂಪನಿಯ ಆಂತರಿಕ ದೂರು ಸಮಿತಿ ಮತ್ತು ಒಲಾ ಕಂಪನಿಯ ವ್ಯವಸ್ಥಾಪಕ ನಿರ್ದೇಶಕರಿಗೆ ನೋಟಿಸ್‌ ಜಾರಿ ಮಾಡಿದೆ.

ಪ್ರಕರಣದ ಸಂತ್ರಸ್ತ ಮಹಿಳೆ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅಲೋಕ್‌ ಅರಾಧೆ ಅವರ ಏಕಸದಸ್ಯ ನ್ಯಾಯಪೀಠ, ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೂ ನೋಟಿಸ್‌ ಜಾರಿಗೊಳಿಸಿತು.

2018ರ ಆಗಸ್ಟ್‌ನಲ್ಲಿ ತಾನು ಕಂಪನಿ ಕೆಲಸಕ್ಕಾಗಿ ಓಲಾ ಕ್ಯಾಬ್‌ನಲ್ಲಿ ಹೋಗುತ್ತಿದ್ದೆ. ಅದರ ಚಾಲಕ ನನಗೆ ಕಾಣುವಂತೆ ಮೊಬೈಲ್‌ನಲ್ಲಿ ಅಶ್ಲೀಲ ದೃಶ್ಯ ವೀಕ್ಷಿಸುತ್ತಾ ಹಸ್ತಮೈಥುನ ಮಾಡಿಕೊಳ್ಳುತ್ತಿದ್ದ. ಈ ಬಗ್ಗೆ ಒಲಾ ಕಂಪನಿಗೆ ದೂರು ನೀಡಿದ್ದೆ. ಆ ಕಂಪನಿಯು ಆ ಚಾಲಕನ್ನು ಕಪ್ಪು ಪಟ್ಟಿಗೆ ಸೇರಿಸಿದ್ದು, ಕೌನ್ಸೆಲಿಂಗ್‌ ಕೊಡಿಸಲಾಗುವುದು ಎಂದು ಹೇಳಿತ್ತು. ತದನಂತರ ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿಯಲ್ಲಿ ಸಂತ್ರಸ್ತ ಮಹಿಳೆ ದೂರಿದ್ದಾರೆ.

ಅಲ್ಲದೆ, ಒಲಾ ಕಂಪನಿಗೆ 2018ರ ಸೆಪ್ಟೆಂಬರ್‌ನಲ್ಲಿ ಲೀಗಲ್‌ ನೋಟಿಸ್‌ ನೀಡಿ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದೆ. ಆತ ತಮ್ಮ ಕಂಪನಿಯ ಕಾಯಂ ಉದ್ಯೋಗಿಯಲ್ಲ. ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾನೆ. ಆದ ಕಾರಣ ಆತನ ವಿರುದ್ಧ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಕಂಪನಿಯು ನನಗೆ ತಿಳಿಸಿತ್ತು. ಬಳಿಕ ಕಂಪನಿಯ ಆಂತರಿಕ ದೂರು ಸಮಿತಿಗೆ ದೂರು ನೀಡಿದ್ದೆ. ಆದರೆ, ಆ ದೂರಿನ ಸಂಬಂಧ ಸೂಕ್ತ ತನಿಖೆ ನಡೆಸಿಲ್ಲ ಎಂದು ಅರ್ಜಿಯಲ್ಲಿ ಸಂತ್ರಸ್ತ ಮಹಿಳೆ ತಿಳಿಸಿದ್ದಾರೆ.