ರಘು ದೀಕ್ಷಿತ್‌ಗೂ ‘ಮೀ ಟೂ’ ಏಟು | ಇಬ್ಬರು ಗಾಯಕಿಯರಿಂದ ಲೈಂಗಿಕ ಕಿರುಕುಳದ ಆರೋಪ | ಟ್ವೀಟರ್‌ನಲ್ಲಿ ಸ್ಪಷ್ಟನೆ ನೀಡಿ, ಕ್ಷಮೆ ಕೇಳಿದ ಗಾಯಕ
ಬೆಂಗಳೂರು (ಅ. 11): ದೇಶದಲ್ಲಿ ‘ಮೀ ಟೂ’ ಆಂದೋಲನ ತೀವ್ರಗೊಂಡಿರುವಾಗಲೇ ಕನ್ನಡದ ಜನಪ್ರಿಯ ಗಾಯಕ ಹಾಗೂ ಸಂಗೀತ ನಿರ್ದೇಶಕ ರಘು ದೀಕ್ಷಿತ್ ಮೇಲೂ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.
ತಮಿಳಿನ ಹೆಸರಾಂತ ಚಿತ್ರ ಸಾಹಿತಿ ಹಾಗೂ ಲೇಖಕ ವೈರಮುತ್ತು ಮೇಲೆ ಲೈಂಗಿಕ ಕಿರುಕುಳ ಆರೋಪ ಮಾಡಿರುವ ಗಾಯಕಿ ಚಿನ್ಮಯಿ ಶ್ರೀಪಾದ ಈಗ ರಘು ದೀಕ್ಷಿತ್ ಮೇಲೂ ಲೈಂಗಿಕ ಕಿರುಕುಳದ ಆರೋಪ ಹೊರಿಸಿದ್ದಾರೆ.
ಸಂಗೀತ ನಿರ್ದೇಶಕ ರಘು ದೀಕ್ಷಿತ್ ಅವರಿಂದ ತಮಗೆ ಲೈಂಗಿಕ ಕಿರುಕುಳ ಆಗಿರುವ ಸಂಬಂಧ ಇಬ್ಬರು ಅನಾಮಧೇಯ ಮಹಿಳೆಯರು ತಮಗೆ ಪತ್ರ ಬರೆದಿದ್ದಾರೆ ಎಂದು ತಮ್ಮ ಟ್ವೀಟರ್ ಅಕೌಂಟ್‌ನಲ್ಲಿ ಚಿನ್ಮಯಿ ಹೇಳಿಕೊಂಡಿದ್ದಾರೆ.
ಅಲ್ಲದೇ ಅವರಿಬ್ಬರ ಪತ್ರದ ಸ್ಕ್ರೀನ್ ಶಾಟ್‌ಗಳನ್ನು ಹಂಚಿಕೊಂಡಿದ್ದಾರೆ. ಸದ್ಯಕ್ಕೆ ಹಾಗೆ ಹೇಳಿಕೊಂಡವರು ಯಾರು, ಎಲ್ಲಿಯವರು ಎಂಬಿತ್ಯಾದಿ ವಿವರಗಳನ್ನು ಅವರು ಬಹಿರಂಗಪಡಿಸಿಲ್ಲ. ಅನಾಮಧೇಯ ಹೇಳಿಕೆಗಳು ತಮ್ಮ ಟ್ವೀಟರ್ ಅಕೌಂಟ್‌ಗೆ ಬಂದಿವೆ ಎಂದಷ್ಟೇ ಚಿನ್ಮಯಿ ಹೇಳಿದ್ದಾರೆ.
ಮೊದಲ ಮಹಿಳೆಯ ಆರೋಪದ ಪ್ರಕಾರ, ರಘು ದೀಕ್ಷಿತ್ ತಮ್ಮ ಸ್ಟುಡಿಯೋಕ್ಕೆ ಸಾಂಗ್ ರೆಕಾರ್ಡಿಂಗ್ ಉದ್ದೇಶಕ್ಕೆ ಬಂದಿದ್ದ ಗಾಯಕಿಯ ಜೊತೆ ತಮ್ಮ ಪತ್ನಿಯ ಕುರಿತಂತೆ ಕೆಟ್ಟಪದಗಳಲ್ಲಿ ಮಾತನಾಡಿದ್ದಲ್ಲದೇ ಲೈಂಗಿಕ ಕಿರುಕುಳ ನೀಡಿದ್ದಾರೆ. ಇನ್ನೊಬ್ಬ ಗಾಯಕಿಯ ಪ್ರಕಾರ, ಆಕೆ ಸಾಂಗ್ ರೆಕಾರ್ಡಿಂಗ್ ಉದ್ದೇಶಕ್ಕೆ ಸ್ಟುಡಿಯೋಕ್ಕೆ ಹೋದಾಗ ಕಿಸ್ ಕೊಡುವಂತೆ ರಘು ದೀಕ್ಷಿತ್ ಕೇಳಿದ್ದಾರೆ. ಹೀಗೆಂದು ಚಿನ್ಮಯಿ ಟ್ವೀಟ್ ಮಾಡಿದ್ದಾರೆ.
ಅತ್ತ ಗಾಯಕಿ ಚಿನ್ಮಯಿ ಶ್ರೀಪಾದ ಅವರು ಇಬ್ಬರು ಗಾಯಕಿಯರು ಮಾಡಿದ್ದಾರೆನ್ನಲಾದ ಲೈಂಗಿಕ ಕಿರುಕುಳ ಆರೋಪದ ಹೇಳಿಕೆಗಳನ್ನು ಟ್ವೀಟ್ ಮಾಡುತ್ತಿದ್ದಂತೆ ಗಾಯಕ ರಘು ದೀಕ್ಷಿತ್ ಅದಕ್ಕೆ ಪ್ರತಿಕ್ರಿಯಿಸಿ ಟ್ವೀಟರ್‌ನಲ್ಲೇ ಸ್ಪಷ್ಟನೆ ಬಿಡುಗಡೆ ಮಾಡಿದ್ದಾರೆ.
‘ನನ್ನ ಪತ್ನಿಗೆ ನಾನು ಒಳ್ಳೆಯ ಗಂಡನಾಗಿರಲಿಲ್ಲ. ನಮ್ಮ ಸಂಬಂಧ ಸರಿ ಮಾಡಲು ಯತ್ನಿಸಿದೆವು. ಆದರೆ ಸರಿ ಹೋಗಲಿಲ್ಲ. ನಾವಿಬ್ಬರೂ ಪ್ರತ್ಯೇಕವಾಗಿ ಮೂರು ವರ್ಷ ಕಳೆದಿವೆ. ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದೇವೆ. ಈ ಕುರಿತಾಗಿ ಕೌನ್ಸೆಲಿಂಗ್ ಪಡೆಯುತ್ತಿದ್ದೇನೆ’ ಎಂದು ರಘು ಹೇಳಿದ್ದಾರೆ.
