ಶ್ರೀನಗರ, [ಜೂ.27]: ಜಮ್ಮ ಮತ್ತು ಕಾಶ್ಮೀರದ ಶೋಪಿಯಾನ್​ ಜಿಲ್ಲೆಯಲ್ಲಿ ಶಾಲಾ ಮಿನಿ ಬಸ್​ವೊಂದು ಕಣಿವೆಗೆ ಉರುಳಿಬಿದ್ದ ಪರಿಣಾಮ 11 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. 

ವಿದ್ಯಾಸಂಸ್ಥೆಯೊಂದರ ಮಿನಿಬಸ್​ ಇಂದು [ಗುರುವಾರ] ಪೂಂಚ್​ನ ಬಫ್ಲಿಯಾಜ್​ನ ಮತ್ತು ಶೋಫಿಯಾನ್​ ಸಂಪರ್ಕಿಸುವ ಮುಘಲ್​ ರಸ್ತೆಯ ಪೀರ್​ ಕಿ ಗಲಿ ಎಂಬಲ್ಲಿ ಕಣಿವೆಗೆ ಉರುಳಿ ಬಿದ್ದಿದೆ. ಪರಿಣಾಮ 9 ವಿದ್ಯಾರ್ಥಿನಿಯರು ಸೇರಿ 11 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ.  ಇನ್ನು ಘಟನೆಯಲ್ಲಿ 7 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿದ್ದು, ಗಾಯಾಳುಗಳನ್ನು ಶೋಫಿಯಾನ್​ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಮ್ಮು- ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್  ತೀವ್ರ ಸಂತಾಪ ವ್ಯಕ್ತಪಡಿಸಿದ್ದು, ಮೃತರ ಕುಟುಂಬಸ್ಥರಿಗೆ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.