Asianet Suvarna News Asianet Suvarna News

ಕುಡಿದು ಸಾವಿಗೆ ಕಾರಣವಾಗುವ ಅಪಘಾತ: ದೋಷಿಗೆ 7 ವರ್ಷ ಜೈಲು

- ಎಚ್ಚರಿಕೆಯ ಗಂಟೆ ಶೀಘ್ರದಲ್ಲೇ ಕಾಯ್ದೆ ಅಂಗೀಕಾರ 

- ಎಲ್ಲ ಬಗೆಯ ವಾಹನಗಳಿಗೆ ನೋಂದಣಿ ವೇಳೆ ಆಜೀವ ವಿಮೆ ಕಡ್ಡಾಯ 

- ಟ್ರಾಫಿಕ್ ಪೊಲೀಸರಿಗೆ ಧರಿಸುವ ಕ್ಯಾಮೆರಾ

seven years imprisonment for death due to drunk and drive accidents

ನವದೆಹಲಿ: ಮದ್ಯ ಸೇವಿಸಿ ವಾಹನ ಚಾಲನೆ ಮಾಡಿ ಸಾವಿಗೆ ಕಾರಣವಾಗಬಲ್ಲ ಅಪಘಾತಗಳನ್ನುಂಟು ಮಾಡುವವರಿಗೆ ಏಳು ವರ್ಷ ಜೈಲು ಶಿಕ್ಷೆ ವಿಧಿಸಲು ಕೇಂದ್ರ ಸರ್ಕಾರ ಸಜ್ಜಾಗುತ್ತಿದೆ. ಇದೇ ವೇಳೆ, ಎಲ್ಲ ಬಗೆಯ ವಾಹನಗಳು ನೋಂದಣಿ ವೇಳೆ ಆಜೀವ 'ಥರ್ಡ್ ಪಾರ್ಟಿ ಇನ್ಶೂರೆನ್ಸ್' ಮಾಡಿಸುವುದನ್ನು ಕಡ್ಡಾಯ ಮಾಡಲು ಹೊರಟಿದೆ.

ಕಳೆದ ವರ್ಷ ಲೋಕಸಭೆಯಲ್ಲಿ ಅಂಗೀಕಾರವಾಗಿ ರಾಜ್ಯಸಭೆಯ ಆಯ್ಕೆ ಸಮಿತಿ ಮುಂದಿದ್ದ ಮೋಟಾರು ವಾಹನ (ತಿದ್ದುಪಡಿ) ಮಸೂದೆಯನ್ನು ಶುಕ್ರವಾರ ರಾಜ್ಯಸಭೆಗೆ ಒಪ್ಪಿಸಲಾಗಿದೆ. ಯಾವುದೇ ತಿದ್ದುಪಡಿ ಮಾಡದೇ ಈ ವಿಧೇಯಕವನ್ನು ಮಂಡನೆ ಮಾಡುವಂತೆ ಆಯ್ಕೆ ಸಮಿತಿ ಸಲಹೆ ಮಾಡಿದ್ದು, ಸಂಸತ್ತಿನ ಹಾಲಿ ಚಳಿಗಾಲದ ಅಧಿವೇಶನದಲ್ಲೇ ಅಂಗೀಕರಿಸಲು ಸರ್ಕಾರ ಹೊರಟಿದೆ ಎಂದು ವರದಿಗಳು ತಿಳಿಸಿವೆ.

ಮದ್ಯಪಾನ ಮಾಡಿ ವಾಹನ ಚಾಲನೆ ಮಾಡುವ ಮೂಲಕ ಅಮಾಯಕರ ಸಾವಿಗೆ ಕಾರಣವಾಗುವ ಅಪಘಾತ ನಡೆಸಿದವರಿಗೆ ಸದ್ಯ ಐಪಿಸಿ ಸೆಕ್ಷನ್ 304 ಎ (ನಿರ್ಲಕ್ಷ್ಯದಿಂದ ಉಂಟು ಮಾಡಿದ ಸಾವು) ಅಡಿ ಶಿಕ್ಷೆ ವಿಧಿಸಲಾಗುತ್ತಿದೆ. ಗರಿಷ್ಠ ೨ ವರ್ಷ ಜೈಲು ಅಥವಾ ದಂಡ ಅಥವಾ ಎರಡನ್ನೂ ವಿಧಿಸಲು ಆ ಕಾಯ್ದೆಯಡಿ ಅವಕಾಶವಿದೆ. ಇದು ಯಾವುದಕ್ಕೂ ಸಾಲುವುದಿಲ್ಲ ಎಂದು ಈಗಾಗಲೇ ಸುಪ್ರೀಂಕೋರ್ಟ್ ಹೇಳಿದೆ. ಇಂತಹ ಅಪಘಾತಗಳನ್ನು 'ಉದ್ದೇಶಪೂರ್ವ ಕವಲ್ಲದ ಕೊಲೆ’ ಎಂದು ಪರಿಗಣಿಸಿ 10 ವರ್ಷ ಜೈಲು ಶಿಕ್ಷೆ ವಿಧಿಸಲು ಸಂಸತ್ತಿನ ಸ್ಥಾಯಿ ಸಮಿತಿ ಈ ಹಿಂದೆಯೇ ತಿಳಿಸಿದೆ. ಆದರೆ ರಾಜ್ಯಸಭೆ ಆಯ್ಕೆ ಸಮಿತಿ ಏಳು ವರ್ಷ ಶಿಕ್ಷೆ ವಿಧಿಸಲು ಶಿಫಾರಸು ಮಾಡಿದೆ. 

ವಿಮೆ ಎಂಬುದು ಕಡ್ಡಾಯವೇ ಆಗಿದ್ದರೂ ದೇಶಾ ದ್ಯಂತ ರಸ್ತೆಯಲ್ಲಿ ಸಂಚರಿಸುವ ಅರ್ಧದಷ್ಟು ವಾಹನಗಳಿಗೆ ವಿಮೆಯೇ ಇಲ್ಲ. ಆ ಪೈಕಿ ಹೆಚ್ಚಿನ ಪ್ರಮಾಣ ದ್ವಿಚಕ್ರವಾಹನಗಳದ್ದಾಗಿದೆ. ಇಂತಹ ವಾಹನಗಳಿಂದ ಅಪಘಾತ ಉಂಟಾದರೆ, ಮೃತಪಡುವ ವ್ಯಕ್ತಿಯ ಬಂಧುಗಳಿಗೆ ಯಾವುದೇ ಪರಿಹಾರ ಸಿಗುವುದಿಲ್ಲ. ಅದನ್ನು ತಪ್ಪಿಸುವ ಸಲುವಾಗಿ ಎಲ್ಲ ವಾಹನಗಳು ನೋಂದಣಿ ವೇಳೆ ಆಜೀವ ಥರ್ಡ್ ಪಾರ್ಟಿ ಇನ್ಶೂರೆನ್ಸ್ ಮಾಡಿಸುವುದನ್ನು ಕಡ್ಡಾಯಗೊಳಿಸುವಂತೆ ಶಿಫಾರಸು ಮಾಡಲಾಗಿದೆ.

ಬೆಂಗಳೂರು ಮಾದರಿ 'ಧರಿಸುವ ಕ್ಯಾಮೆರಾ':

ಇದೇ ವೇಳೆ, ಸಂಚಾರಿ ಪೊಲೀಸರು ಹಾಗೂ ಆರ್‌ಟಿಒ ಅಧಿಕಾರಿಗಳ ಭ್ರಷ್ಟಾಚಾರದ ಕಡಿವಾಣಕ್ಕೆ ಆ ಅಧಿಕಾರಿಗಳಿಗೆ ಧರಿಸಬಲ್ಲ ಕ್ಯಾಮೆರಾ ನೀಡುವಂತೆ ಸಮಿತಿ ಸೂಚನೆ ನೀಡಿದೆ. ಈಗಾಗಲೇ ಈ ವ್ಯವಸ್ಥೆ ಬೆಂಗಳೂರಿನಲ್ಲಿದೆ ಎಂಬುದು ಗಮನಾರ್ಹ. ಭ್ರಷ್ಟಾಚಾರ ಕುರಿತು ಅಧ್ಯಯನ ನಡೆಸುವ ಸಂಸ್ಥೆ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್ ವರದಿ ಪ್ರಕಾರ, ದೇಶಾದ್ಯಂತ ವಿವಿಧ ಆರ್‌ಟಿಒಗಳು ಲಾರಿ ಮಾಲೀಕರು/ ಚಾಲಕರಿಂದ ವಾಹನ ನೋಂದಣಿ, ತೆರಿಗೆ, ಪರ್ಮಿಟ್ ವ್ಯವಸ್ಥೆಯನ್ನೂ ಗಣನೆಗೆ ತೆಗೆದು ಕೊಂಡರೆ ಲಂಚದ ಪ್ರಮಾಣ 23 ಸಾವಿರ ಕೋಟಿ ರು.ಗೆ ಏರಿಕೆಯಾಗುವ ಅಂದಾಜಿದೆ. ಇದರ ಕಡಿವಾಣಕ್ಕೆ ಚಾಲನಾ ಪರವಾನಗಿ ಪರೀಕ್ಷೆ ಆನ್‌ಲೈನ್‌ನಲ್ಲೇ ನಡೆಸಬೇಕು ಎಂದು ಸಲಹೆ ಮಾಡಲಾಗಿದೆ.

ಇದೇ ವೇಳೆ, ವಾಹನ ವಿತರಕರಿಂದಲೇ ನೊಂದಣಿ ವ್ಯವಸ್ಥೆ ಹಾಗೂ ಆರ್‌ಟಿಒಗಳ ಎದುರು ವಾಹನ ಹಾಜರುಪಡಿಸುವ ವ್ಯವಸ್ಥೆಯನ್ನು ತಪ್ಪಿಸಿದರೆ ನಾಗರಿಕರಿಗೂ ತೊಂದರೆ ಕಡಿಮೆಯಾಗುತ್ತದೆ, ಭ್ರಷ್ಟಾಚಾರವೂ ತಗ್ಗುತ್ತದೆ ಎಂದು ಹೇಳಿದೆ.
 

Follow Us:
Download App:
  • android
  • ios