ಖಾಸಗಿ ವಲಯದ ಬ್ಯಾಂಕುಗಳು, ರಾಷ್ಟ್ರೀಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಗ್ರಾಮೀಣ ವಲಯದ ಬ್ಯಾಂಕುಗಳ ಮ್ಯಾನೇಜ್‌ಮೆಂಟ್‌'ಗಳು ಒಂದೊಂದು ರೀತಿಯ ದರಗಳನ್ನು ವಿಧಿಸಲಿವೆ. ಖರೀದಿ ವೇಳೆ ಸ್ವೈಪಿಂಗ್‌ ಮಷಿನ್‌ ಬಳಸಿದರೆ, ಎಂಡಿಆರ್‌ ಜತೆಗೆ ಸೇವಾ ತೆರಿಗೆಯನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ.

ವರದಿ: ಎನ್‌.ಎಲ್‌. ಶಿವಮಾದು, ಕನ್ನಡಪ್ರಭ

ಬೆಂಗಳೂರು: ನೋಟು ಅಮಾನ್ಯ ಮಾಡಿದ ದಿನದಿಂದ ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಕೇಂದ್ರ ಸರ್ಕಾರದ ಆದೇಶದಂತೆ ರಿಯಾಯಿತಿ ನೀಡಿದ್ದ ಬ್ಯಾಂಕುಗಳು, ಆರ್‌ಬಿಐ ಸುತ್ತೋಲೆ ಪ್ರಕಾರ ಹೊಸ ವರ್ಷದ ಮೊದಲ ದಿನದಿಂದ ಎಂದಿನಂತೇ ಸೇವಾ ತೆರಿಗೆ ವಿಧಿಸಲಿವೆ. ಡೆಬಿಟ್‌ ಹಾಗೂ ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಕಳೆದ 50 ದಿನಗಳಿಂದ ವಿನಾಯ್ತಿ ನೀಡಲಾಗಿದ್ದ ಸೇವಾ ತೆರಿಗೆಯನ್ನು ಹೊಸ ವರ್ಷದ ಮೊದಲ ದಿನದಿಂದಲೇ ಗ್ರಾಹಕರಿಗೆ ಮತ್ತೆ ವಿಧಿಸಲಾಗುತ್ತದೆ. ಪ್ರತಿ ವ್ಯವಹಾರಕ್ಕೆ ಕನಿಷ್ಠ ಶೇ.3ರಷ್ಟುಸೇವಾ ತೆರಿಗೆ ಅನ್ವಯವಾಗಲಿದ್ದು, ಈ ಹೊರೆಯನ್ನು ಗ್ರಾಹಕರು ಭರಿಸುವುದು ಅನಿವಾರ್ಯವಾಗಲಿದೆ.

ನೋಟು ಅಮಾನ್ಯದಿಂದ ಚಿಲ್ಲರೆ ಸಮಸ್ಯೆ ತಲೆದೋರಿದ್ದರಿಂದ ಪರಿಸ್ಥಿತಿ ನಿಯಂತ್ರಿಸಲು ಕೇಂದ್ರ ಸರ್ಕಾರ ಆನ್‌ಲೈನ್‌ ವ್ಯವಹಾರ, ಕ್ರೆಡಿಟ್‌, ಡೆಬಿಟ್‌ ಕಾರ್ಡ್‌ ಬಳಸುವಂತೆ ಮನವಿ ಮಾಡಿತ್ತು. ಇದನ್ನು ಉತ್ತೇಜಿಸುವ ಸಲುವಾಗಿ 50 ದಿನಗಳಿಂದ ಯಾವುದೇ ವ್ಯವಹಾರಕ್ಕೆ ಸೇವಾ ತೆರಿಗೆಗೆ ವಿನಾಯ್ತಿ ನೀಡಿತ್ತು. ಇದೀಗ ವಿನಾಯ್ತಿ ಅವಧಿ ಮುಕ್ತಾಯವಾಗಿರುವ ಹಿನ್ನೆಲೆಯಲ್ಲಿ ಸೇವಾ ತೆರಿಗೆ ಪಾವತಿಸಬೇಕಾಗುತ್ತದೆ.

ಪ್ರತಿ ಬ್ಯಾಂಕುಗಳು ಗ್ರಾಹಕರ ಮೇಲೆ ವಿಧಿಸಬೇಕಿರುವ ಗ್ರಾಹಕ ರಿಯಾಯಿತಿ ದರವನ್ನು (ಎಂಡಿಆರ್‌) ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ನಿಗದಿಗೊಳಿಸಿದೆ. ಆದರೆ, ಖಾಸಗಿ ವಲಯದ ಬ್ಯಾಂಕುಗಳು, ರಾಷ್ಟ್ರೀಯ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ಗ್ರಾಮೀಣ ವಲಯದ ಬ್ಯಾಂಕುಗಳ ಮ್ಯಾನೇಜ್‌ಮೆಂಟ್‌'ಗಳು ಒಂದೊಂದು ರೀತಿಯ ದರಗಳನ್ನು ವಿಧಿಸಲಿವೆ. ಖರೀದಿ ವೇಳೆ ಸ್ವೈಪಿಂಗ್‌ ಮಷಿನ್‌ ಬಳಸಿದರೆ, ಎಂಡಿಆರ್‌ ಜತೆಗೆ ಸೇವಾ ತೆರಿಗೆಯನ್ನು ಗ್ರಾಹಕರು ಪಾವತಿಸಬೇಕಾಗುತ್ತದೆ.

ಆರ್‌'ಬಿಐ ಕಚೇರಿಯತ್ತ ಧಾವಿಸಿದ ಜನಸಾಗರ:
ಬ್ಯಾಂಕುಗಳಲ್ಲಿ ಹಣ ಜಮೆ ಮಾಡುವುದಕ್ಕೆ ಶುಕ್ರವಾರ ಕೊನೆಯ ದಿನವಾಗಿತ್ತು. ವಿನಿಮಯಕ್ಕೂ ಕೊನೆಯ ದಿನವೆಂದು ತಿಳಿದ ಜನರು, ನಗರದ ನೃಪತುಂಗ ರಸ್ತೆಯಲ್ಲಿರುವ ಆರ್‌ಬಿಐ ಪ್ರಾದೇಶಿಕ ಕಚೇರಿಯತ್ತ ಧಾವಿಸಿದ್ದರು. ಪ್ರತಿ ದಿನ ಮಧ್ಯಾಹ್ನ 2.30ರವರೆಗೆ ವಿನಿಮಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೆ ಕೊನೆಯ ದಿನವೆಂಬ ತಪ್ಪು ಗ್ರಹಿಕೆಯಿಂದಾಗಿ ಭಾರಿ ಸಂಖ್ಯೆಯಲ್ಲಿ ವಿನಿಮಯಕ್ಕೆ ಜನ ಆಗಮಿಸಿದ್ದರಿಂದ ಶುಕ್ರವಾರ ಮಧ್ಯಾಹ್ನ 3.15ರವರೆಗೂ ವಿನಿಮಯಕ್ಕೆ ಅವಕಾಶ ಕಲ್ಪಿಸಲಾಯಿತು. ನಂತರ ಬಂದ ಕೆಲ ಗ್ರಾಹಕರು, ವಿನಿಮಯಕ್ಕೆ ಸಾಧ್ಯವಾಗದೆ ಹಿಂತಿರುಗಿದರು. ಆರ್‌ಬಿಐನಲ್ಲಿ ಮಾ.31ರವರೆಗೂ ಅಮಾನ್ಯ ನೋಟು ವಿನಿಮಯಕ್ಕೆ ಅವಕಾಶವಿದೆ.

ಎಂದಿನಂತೆಯೇ ಕಾರ್ಯನಿರ್ವಹಿಸಿದ ಬ್ಯಾಂಕ್'ಗಳು:
ಈಗಾಗಲೇ ಗ್ರಾಹಕರು ತಮ್ಮ ಬಳಿ ಇದ್ದ ಅಮಾನ್ಯ ನೋಟುಗಳನ್ನು ಬ್ಯಾಂಕುಗಳಿಗೆ ಜಮೆ ಮಾಡಿದ್ದರಿಂದ ಕೊನೆಯ ಎರಡು ದಿನಗಳಲ್ಲಿ ಬ್ಯಾಂಕ್‌ ವ್ಯವಹಾರದಲ್ಲಿ ಪ್ರಮುಖ ಬದಲಾ​ವಣೆಗಳು ಕಂಡುಬಂದಿಲ್ಲ. ಎಂದಿನಂತೆ ಸಹಜ ಸ್ಥಿತಿಯಲ್ಲಿಯೇ ಬ್ಯಾಂಕುಗಳು ಕಾರ್ಯ ನಿರ್ವಹಿಸಿದವು.

ಆರ್‌'ಬಿಐ ಮುಂದೆಯೇ ಕಪ್ಪು- ಬಿಳಿ ವ್ಯವಹಾರ:
ಪ್ಯಾನ್‌ ಕಾರ್ಡ್‌ ಮರೆತು ಬಂದಿದ್ದ ಜನರಿಂದ ಆರ್‌'ಬಿಐ ಪ್ರಾದೇಶಿಕ ಕಚೇರಿ ಮುಂದೆಯೇ ಶುಕ್ರವಾರ ಕಮೀಷನ್‌ ದಂಧೆ ನಡೆಯುತ್ತಿತ್ತು. ಗ್ರಾಹಕರ ಸೋಗಿನಲ್ಲಿದ್ದ ಕೆಲವರು, ಮತ್ತೊಬ್ಬರಿಂದ ವಿನಿಮಯ ಮಾಡಿಸಿಕೊಡುವ ಕಾರ್ಯದಲ್ಲಿ ತೊಡಗಿದ್ದರು.

ಆರ್‌ಬಿಐ ಸುತ್ತೋಲೆ ಪ್ರಕಾರ ಹೊಸ ವರ್ಷದಿಂದ ಈ ಮೊದಲು ವಿಧಿಸುತ್ತಿದ್ದಂತೆ ಗ್ರಾಹಕರ ರಿಯಾಯಿತಿ ದರ ಮತ್ತು ಸೇವಾ ತೆರಿಗೆಯನ್ನು ಕಾರ್ಡ್‌ ಬಳಕೆದಾರರಿಗೆ ವಿಧಿಸಲಾಗುವುದು.
- ರಾಮಚಂದ್ರ ಭಟ್‌, ಹಿರಿಯ ಪ್ರಬಂಧಕ ಕಾರ್ಪೋರೇಷನ್‌ ಬ್ಯಾಂಕ್‌

ವಿನಿಮಯಕ್ಕೆಂದು ಆತುರಾತು­ರ­ ವಾಗಿ ಬಂದೆ. ಆದರೆ ಇಂದು ಸಮಯ ಮುಗಿದಿದೆ. ಸೋಮವಾರ ಬನ್ನಿ ಎಂದಿದ್ದಾರೆ. ಹೊಸ ವರ್ಷದಲ್ಲಿ ವಿನಿಮಯ ಸಾಧ್ಯವೇ ಎಂಬ ಗೊಂದಲವಿದೆ. ಸಿಬ್ಬಂದಿಯನ್ನು ಕೇಳಿದರೆ, ತಮಗೇನೂ ಗೊತ್ತಿಲ್ಲ ಎನ್ನುತ್ತಾರೆ.
- ಮುರಳಿ, ಜಯನಗರ ನಿವಾಸಿ

ವಿನಿಮಯಕ್ಕೆ ಕೊನೆಯ ದಿನವೆಂದು ತಿಳಿದು, ಗಾರೆ ಕೆಲಸ ಮಾಡುವುದನ್ನು ಬಿಟ್ಟು ಬಂದೆ. ಮಾ.31ರವರೆಗೂ ಸಮಯಾ​ವಕಾಶವಿದೆ ಎಂದು ಇಲ್ಲಿಗೆ ಬಂದ ನಂತರ ಗೊತ್ತಾಯಿತು. ಹೆಚ್ಚಿನ ಜನ ಇಲ್ಲದೇ ಇರುವುದರಿಂದ ಬೇಗ ವಿನಿಮಯ ಮಾಡಿಕೊಂಡೆ.
- ಏಳುಮಲೈ, ಕೂಲಿ ಕಾರ್ಮಿಕ

ತುಂಡಾಗಿರುವ ರೂ.500 ನೋಟು ವಿನಿಮಯ ಸಾಧ್ಯವಿಲ್ಲ. ಪ್ಯಾನ್‌ ನಂಬರ್‌ ನೀಡಿದರೆ, ಬ್ಯಾಂಕ್‌ ಖಾತೆಗೆ ಜಮೆ ಮಾಡುವುದಾಗಿ ಆರ್‌ಬಿಐ ಸಿಬ್ಬಂದಿ ಹೇಳುತ್ತಿದ್ದಾರೆ. ಇಂದಿಗೂ ಪ್ಯಾನ್‌ ಕಾರ್ಡನ್ನೇ ಮಾಡಿಸಿಕೊಂಡಿಲ್ಲ. ನನಗಿನ್ನು ಹಣ ಸಿಗುವುದಿಲ್ಲ ಎನಿಸುತ್ತಿದೆ. 
- ಅಲೆಗ್ಸಾಂಡರ್‌, ರೈತ

ನೋಟು ಅಮಾನ್ಯ ಕ್ರಮ ಸರಿಯಾಗಿದೆ. ಆದರೆ, ಜಾರಿಗೆ ತಂದ ರೀತಿ ಸರಿಯಿಲ್ಲ. 50 ದಿನ ಕಳೆದರೂ ಸಾಮಾನ್ಯರ ಕೈಗೆ ನಗದು ಸಿಗುತ್ತಿಲ್ಲ. ಸಮಸ್ಯೆ ಬಗೆಹರಿದು ಸಹಜ ಸ್ಥಿತಿ ಎಂದು ಬರುವುದೋ ಎಂದು ಕಾತುರನಾಗಿದ್ದೇನೆ.
- ಪ್ರದೀಪ್‌, ಖಾಸಗಿ ಸಂಸ್ಥೆ ಉದ್ಯೋಗಿ

(epaper.kannadaprabha.in)