ಕುಡಿದ ಅಮಲಿನಲ್ಲಿ 17 ವರ್ಷ ಹಿಂದಿನ ಕೊಲೆಗಳ ರಹಸ್ಯ ಬಯಲು | ಪ್ರೇಯಸಿ ಸಂಗ ಬಯಸಿದವರ ಹತ್ಯೆಗೈದು ರೈಲ್ವೆ ಹಳಿಗೆ ಎಸೆಯುತ್ತಿದ್ದ ಗಾರೆ ಮೇಸ್ತ್ರಿ

ಬೆಂಗಳೂರು: ತನ್ನ ಪ್ರೇಯಸಿಯ ಸಾಂಗತ್ಯ ಬಯಸಿದವರನ್ನು ಸ್ನೇಹಿತರ ಜತೆ ಸೇರಿ ಸರಣಿ ಹತ್ಯೆ ಮಾಡಿದ್ದ ಗಾರೆ ಮೇಸ್ತ್ರಿಯೊಬ್ಬ ಹದಿನೈದು ವರ್ಷಗಳ ಬಳಿಕ ಆ ‘ಹತ್ಯೆ ರಹಸ್ಯ'ವನ್ನು ಮದ್ಯದಂಗಡಿಯಲ್ಲಿ ಬಾಯ್ಬಿಟ್ಟಿದ್ದಾನೆ. ಈಗ ಆತ ಹಂತಕ ಪಡೆ ಜೊತೆ ಸಿಸಿಬಿ ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾನೆ.

ಕೆಂಗೇರಿ ಉಪನಗರದ ಗಾಂಧಿನಗರ ಶೇಖರ್‌, ಆರುಂಧತಿನಗರದ ವೆಂಕಟೇಶ್‌, ಕುಮಾರ್‌ ಅಲಿ ಯಾಸ್‌ ಜಿರಲೆ, ಗಣೇಶ್‌, ಎನ್‌. ನಾಗೇಂದ್ರ ಕುಮಾರ್‌ ಅಲಿಯಾಸ್‌ ಕುಮಾರ್‌, ದಾಸನಪುರ ಸಮೀಪದ ನಗರೂರು ಕಾಲೋನಿಯ ರಾಜು ಹಾಗೂ ರಾಮೋಹಳ್ಳಿಯ ವಿನಾಯಕನಗರದ ನಾಗೇಂದ್ರ ಬಂಧಿತರು. 6 ತಿಂಗಳ ಹಿಂದೆ ವಾಸು ಎಂಬಾತನ ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಜೈಲಿನಿಂದ ಹೊರಬಂದಿದ್ದ ಶೇಖರ್‌ ಹಾಗೂ ಆತನ ಸಹಚರರು, ಇತ್ತೀಚಿಗೆ ಕೆಂಗೇರಿ ಬಾರ್‌ನಲ್ಲಿ ಒಟ್ಟಾಗಿ ಮದ್ಯ ಸೇವಿಸುತ್ತಿದ್ದರು. ಕುಡಿದ ಅಮಲಿನಲ್ಲಿ ಆ ಗೆಳೆಯರು, ತಾವು 17 ವರ್ಷಗಳ ಹಿಂದೆ ನಡೆಸಿದ್ದ ‘ಸರಣಿ ಕೊಲೆ ಗಳ' ಕುರಿತು ಮಾತನಾಡಿ ಸಿಸಿಬಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.

ಈ ಏಳು ಮಂದಿ ಆರೋಪಿಗಳು ವಿರುದ್ಧ ಐದು ಕೊಲೆ ಪ್ರಕರಣಗಳು ದಾಖಲಾಗಿವೆ. ಈ ಪೈಕಿ 2003 ಹಾಗೂ 2014ರ ಕೊಲೆ ಪ್ರಕರಣದಲ್ಲಿ ಪೊಲೀಸರ ಬಲೆಗೆ ಸಿಲುಕಿದ್ದರೂ ಆರೋಪಿಗಳು, 2001ರಲ್ಲಿ ತಾವು ಎಸಗಿದ್ದ ಸರಣಿ ಹತ್ಯೆಗಳ ಬಗ್ಗೆ ಬಾಯ್ಬಿಟ್ಟಿರಲಿಲ್ಲ. ದಶಕಗಳ ಬಳಿಕ ಮದ್ಯದ ಅಮಲಿನಲ್ಲಿ ಸತ್ಯ ಹೊರ ಹಾಕಿ ಅವರು ಮತ್ತೆ ಜೈಲು ಸೇರುವಂತಾಗಿದೆ.

ಇನ್ನು ಆರೋಪಿಗಳ ಪೈಕಿ ವೆಂಕಟೇಶ್‌, ಶೇಖರ್‌ ನಿರ್ಮಾಣ ಹಂತದ ಕಟ್ಟಡ ಮೇಸ್ತ್ರಿಗಳಾಗಿದ್ದು, ಇನ್ನುಳಿದವರು ಅವರಲ್ಲಿ ಕೆಲಸಗಾರರಾಗಿದ್ದರು. ಹಾಗಾಗಿ ಹಲವು ವರ್ಷಗಳಿಂದ ಆರೋಪಿಗಳು ಪರಿಚಯಸ್ಥರಾಗಿದ್ದರು. ಈ ಗೆಳೆತನದ ಹಿನ್ನೆಲೆಯಲ್ಲಿ ಪಾತಕ ಕೃತ್ಯದಲ್ಲೂ ಅವರೆಲ್ಲ ಒಗ್ಗೂಡಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ. ನಿರಂತರ ಹತ್ಯೆಗಳನ್ನು ನಡೆಸಿ ದ್ದರೂ ತಮ್ಮ ಸುಳಿವು ಪೊಲೀಸರಿಗೆ ಸಿಗದಂತೆ ಮಾಡಲು ಹಂತಕರು ಆಯ್ದುಕೊಂಡಿದ್ದು ರೈಲ್ವೆ ಹಳಿಗಳನ್ನು. ತಾವು ಕೊಲೆ ಮಾಡಿದ ಬಳಿಕ ಮೃತದೇ ಹಗಳನ್ನು ರೈಲ್ವೆ ಟ್ರ್ಯಾಕ್‌ ಮೇಲೆ ಬಿಸಾಡಿ ಅದನ್ನು ‘ಅಪರಿಚಿತ ವ್ಯಕ್ತಿಗಳ ಅಸಹಜ ಸಾವು' ಎಂದು ಪೊಲೀಸರ ದಾಖಲೆ ಸೇರುವಂತೆ ಮಾಡಿದ್ದ ಆರೋಪಿಗಳ ಕುತೂಹಲಕಾರಿ ಸಂಚು ಬಯಲಾಗಿದೆ.

1ಪ್ರೇಯಸಿ ಪತಿಯ ಕೊಲೆ
2001ರಲ್ಲಿ ಗಾರೆ ಮೇಸ್ತ್ರಿ ವೆಂಕಟೇಶ್‌ ಪ್ರೀತಿಸುತ್ತಿದ್ದ ಯುವತಿ ಜತೆ ಗಾರೆ ಕೆಲಸಗಾರ ಯಲ್ಲಪ್ಪ ವಿವಾಹವಾಗಿದ್ದ. ಆದರೆ, ಮದುವೆ ನಂತ ರವೂ ಪ್ರಿಯತಮೆಯ ಜತೆ ಆತನ ಸ್ನೇಹ ಕಡಿತವಾ ಗಿರಲಿಲ್ಲ. ಮದುವೆ ನಂತರ ಯಲ್ಲಪ್ಪ, ಪ್ರತಿ ದಿನ ಪತ್ನಿಯನ್ನು ಹಿಂಸಿಸುತ್ತಿದ್ದ. ಅತ್ತ ತಾನು ಪ್ರೀತಿಸಿದವಳನ್ನು ಮದುವೆಯಾದ ಎಂದು ಯಲ್ಲಪ್ಪನ ವಿರುದ್ಧ ವæಂಕಟೇಶ್‌ ಕತ್ತಿ ಮಸೆಯುತ್ತಿದ್ದ. ಜತೆಗೆ ಪ್ರಿಯತಮೆಗೆ ಕಿರುಕುಳ ನೀಡುತ್ತಿದ್ದ ವಿಷಯ ಗೊತ್ತಾಗಿ ಮತ್ತಷ್ಟುಕೆರಳಿದ್ದ. ಕೊನೆಗೆ ಗೆಳೆಯರಾದ ಶೇಖರ್‌, ಕುಮಾರ್‌ ಜತೆ ಸೇರಿಕೊಂಡು ಯಲ್ಲಪ್ಪನನ್ನು ಕೊಲೆ ಮಾಡಿದ್ದ. ಬಳಿಕ ಮೃತಹೇಹವನ್ನು ಕೆಂಗೇರಿ ಸಮೀಪದ ರೈಲ್ವೆ ಹಳಿ ಮೇಲೆ ಬಿಸಾಡಿ ರೈಲ್ವೆ ಅಪಘಾತ ಎಂಬಂತೆ ಬಿಂಬಿಸಿದ್ದರು. ರೈಲ್ವೆ ಪೊಲೀಸ್‌ ಠಾಣೆಯಲ್ಲಿ ‘ಅಪರಿಚಿತ ವ್ಯಕ್ತಿ ಅಸಹಜ ಸಾವು ಪ್ರಕರಣ' ಎಂದು ದಾಖಲಾಗಿತ್ತು.

2 ಪ್ರಿಯತಮೆ ಗೆಳೆಯನ ಕೊಲೆ
ಯಲ್ಲಪ್ಪನ ಕೊಲೆಗೈದ ಬಳಿಕ ವೆಂಕಟೇಶ್‌, ತನ್ನ ಪ್ರಿಯತಮೆ (ಯಲ್ಲಪ್ಪನ ಪತ್ನಿ) ಜತೆ ವಿವಾಹವಾದ. ಆದರೆ, ಈ ಕೌಟುಂಬಿಕ ಬದುಕು ತುಂಬಾ ದಿನ ಸುಖಮಯವಾಗಿರಲಿಲ್ಲ. ಪತಿ ಸಾವಿನ ಬಳಿಕ ಪ್ರಿಯಕರನ ಜತೆ ಸಪ್ತಪದಿ ತುಳಿದಿದ್ದ ಆಕೆ, ಕೆಲವೇ ದಿನಗಳಲ್ಲಿ ರಮೇಶ್‌ ಎಂಬಾತನ ಜತೆ ಸ್ನೇಹ ಬೆಳೆಸಿದ್ದಳು. ಈ ಅಕ್ರಮ ಸಂಬಂಧ ವಿಚಾರ ವೆಂಕಟೇಶ್‌ನಿಗೆ ಗೊತ್ತಾಗಿ ಸಂಬಂಧ ಕಡಿದುಕೊಳ್ಳುವಂತೆ ಸೂಚಿಸಿದ್ದರೂ ಪತ್ನಿ ಮುಂದುವರಿಸಿದ್ದರಿಂದ ವೆಂಕಟೇಶ್‌ ಕೆರಳಿದ್ದನು. ಅದರಂತೆ 2002ರಲ್ಲಿ ಗೆಳೆಯರಾದ ಶೇಖರ್‌, ರಾಜ, ನಾಗೇಂದ್ರಕುಮಾರ್‌ ಜತೆ ಸೇರಿ ರಮೇಶ್‌ ಕೊಲೆಗೆ ಸಂಚು ರೂಪಿಸಿದ್ದ. ಪೂರ್ವನಿಯೋಜಿತದಂತೆ ನಾಗೇಂದ್ರನ ಮೂಲಕ ರಮೇಶ್‌ನನ್ನು ಕೆಂಗೇರಿ ಹೊರವಲಯಕ್ಕೆ ಕರೆಸಿ ಅಲ್ಲಿ ಆತನನ್ನು ಕೊಂದು ಯಥಾ ಪ್ರಕಾರ ಮೃತದೇಹವನ್ನು ರೈಲ್ವೆ ಹಳಿಗೆ ಎಸೆದಿದ್ದರು.

3 ಪ್ರಿಯತಮೆ ಗೆಳೆಯನ ಸೋದರ ಹತ್ಯೆ
ಎರಡು ಕೊಲೆ ಬಳಿಕ ವೆಂಕಟೇಶ್‌, ಆತನ ಸಹಚರರು, ಮಾಮೂಲಿಯಂತೆ ಬದುಕು ನಡೆಸುತ್ತಿದ್ದರು. 12 ವರ್ಷದ ಬಳಿಕ ರಮೇಶ್‌ ಕೊಲೆ ಬಗ್ಗೆ ಅವನ ಸೋದರ ಸುರೇಶ್‌ಗೆ ಗೊತ್ತಾಯಿತು. ಈ ವಿಷಯ ತಿಳಿದು ಆಕ್ರೋಶಗೊಂಡ ಸುರೇಶ್‌, ಅಣ್ಣನ ಕೊಲೆಗೆ ಪ್ರತಿಕಾರ ತೀರಿಸಲು ಮುಂದಾದ. ತನ್ನ ಸೋದರನ ಹತ್ಯೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಎಂಬ ಕಾರಣಕ್ಕೆ ಶೇಖರ್‌ ಕೊಲೆಗೆ ನಿಶ್ಚಯಿಸಿದ್ದ ಸುರೇಶ್‌, ಈ ಕೃತ್ಯಕ್ಕೆ ಸಹಕರಿಸುವಂತೆ ಶೇಖರನ ಆಪ್ತ ಸ್ನೇಹಿತರಾದ ನಾಗೇಂದ್ರ ಮತ್ತು ಗಣೇಶ್‌ ಅವರಲ್ಲಿ ಮನವಿ ಮಾಡಿದ್ದ. ಆದರೆ ಈ ವಿಚಾರವನ್ನು ಅವರು ಶೇಖರ್‌ಗೆ ಮುಟ್ಟಿಸಿದ್ದರು. ತನ್ನ ಹತ್ಯೆಗೆ ಸುರೇಶ್‌ ಸಿದ್ಧತೆ ನಡೆಸಿರುವ ಸಂಗತಿ ತಿಳಿದು ಕೆರಳಿದ ಶೇಖರ್‌, 2014ರಲ್ಲಿ ಸುರೇಶ್‌ನನ್ನು ಕುಮಾರ, ರಾಜ, ನಾಗೇಂದ್ರ ಜತೆ ಸೇರಿ ಕೊಲೆ ಮಾಡಿದ್ದ. ಬಳಿಕ ಮೃತದೇಹವನ್ನು ಕೆಂಗೇರಿ ಸಮೀಪ ರೈಲ್ವೆ ಹಳಿ ಮೇಲೆ ಎಸೆದಿದ್ದರು. ಇನ್ನು ಕೌಟುಂಬಿಕ ಕಾರಣಗಳಿಗೆ ಸುರೇಶ್‌ ದಂಪತಿ ನಡುವೆ ಮನಸ್ತಾಪವಾಗಿತ್ತು. ಹೀಗಾಗಿ ಪತಿ ತನ್ನಿಂದ ದೂರವಾಗಿದ್ದಾನೆ ಎಂದು ಭಾವಿಸಿ ಮೃತ ಸುರೇಶನ ಪತ್ನಿ, 2ನೇ ವಿವಾಹವಾಗಿ ಬದುಕು ಕಟ್ಟಿಕೊಂಡಿದ್ದಳು.

4 ಅತ್ಯಾಚಾರಿಯ ತಂದೆ ಕೊಲೆ
ಮಧ್ಯೆ ಶೇಖರನ ಸೋದರ ಸಂಬಂಧಿಕನ ಪುತ್ರಿಯ ಮೇಲೆ ಮಣಿಮುತ್ತು ಎಂಬಾತನ ಪುತ್ರ ಅತ್ಯಾಚಾರ ನಡೆಸಿದ್ದ. ಈ ವಿಚಾರ ತಿಳಿದ ಶೇಖರ್‌, ಬಂಧುವಿನ ಪರವಾಗಿ ಮಣಿಮುತ್ತು ಬಳಿ ಮಾತುಕತೆಗೆ ತೆರಳಿದ್ದ. ಆಗ ಮಾತಿಗೆ ಮಾತು ಬೆಳೆದು ಶೇಖರ್‌ಗೆ ಮಣಿಮುತ್ತು ಬೈದು ಕಳುಹಿಸಿದ್ದ. ಇದ ರಿಂದ ಕೆರಳಿದ ಶೇಖರ್‌, ಮಣಿಮುತ್ತುವನ್ನು ಗೆಳೆಯ ರಾದ ಕುಮಾರ್‌, ರಾಜನ ಜತೆ ಸೇರಿ ಕೊಲೆ ಮಾಡಿದ್ದ. ಈ ಪ್ರಕರಣದಲ್ಲಿ ಶೇಖರ್‌ ಮತ್ತು ಕುಮಾರ್‌ ಬಂಧನ ವಾಗಿತ್ತು. ಆದರೆ, 2003ರಿಂದ ತಪ್ಪಿಸಿಕೊಂಡಿದ್ದ ರಾಜ, ಈಗ ಸಿಸಿಬಿಯಿಂದ ಬಂಧಿತರಲ್ಲಿ ಒಬ್ಬ.

5 ಗೆಳೆಯ, ಪ್ರೇಯಸಿಗಾಗಿ ಕೊಲೆ
ಶೇಖರನ ಸ್ನೇಹಿತ ರಾಘವೇಂದ್ರ ಎಂಬಾತ ಫೈನಾನ್ಶಿಯರ್‌ ವಾಸು ಎಂಬಾತನ ಪತ್ನಿ ವೀಣಾ ಜತೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದ. ವಾಸು, ತನ್ನ ಕಚೇರಿಗೆ ಟೈಲ್ಸ್‌ ಹಾಕಿಸುವ ಸಲುವಾಗಿ ರಾಘವೇಂದ್ರನನ್ನು ಸಂಪರ್ಕಿಸಿದ್ದ. ರಾಘವೇಂದ್ರ, ವಾಸು ಮನೆಗೆ ಹೋದವನು ಆತನ ಪತ್ನಿ ಸಂಬಂಧ ಬೆಳೆಸಿದ್ದನು. ‘ಪತಿ ಹತ್ಯೆ ಮಾಡಿ ನಾವು ಮದುವೆ ಆಗೋಣ' ಎಂದು ಹೇಳಿದ ವೀಣಾ, ಪತಿ ಕೊಲೆಗೆ .5 ಲಕ್ಷ ಸುಪಾರಿ ನೀಡಿದ್ದಳು. 2013ರಲ್ಲಿ ತನ್ನ ಗೆಳೆಯ ರಾದ ಶೇಖರ್‌, ಗಣೇಶ್‌, ಸಂಜಯ ಜತೆ ಸೇರಿ ವಾಸು ವನನ್ನು ರಾಘವೇಂದ್ರ ಕೊಲೆ ಮಾಡಿದ್ದ. ಹತ್ಯೆ ಬಳಿಕ ಹೃದಯಾಘಾತದಿಂದ ವಾಸು ಸಾವು ಎಂದು ಖಾಸಗಿ ಆಸ್ಪತ್ರೆ ವೈದ್ಯರಿಂದ ಮರಣೋತ್ತರ ವರದಿ ಪಡೆದು ಹೂತು ಹಾಕಿದ್ದರು. ಈ ಕೃತ್ಯ ನಡೆದು 3 ವರ್ಷದ ನಂತರ ಹಣಕಾಸು ವಿಚಾರವಾಗಿ ರಾಘವೇಂದ್ರ, ಶೇಖರ್‌ ನಡುವೆ ಮನಸ್ತಾಪವಾಯಿತು. ಆಗ ಶೇಖರ್‌ ಮೇಲೆ ಮಚ್ಚಿನಿಂದ ಹಲ್ಲೆ ನಡೆಸಿ ರಾಘವೇಂದ್ರ ಕೊಲೆ ಯತ್ನ ನಡೆಸಿದ್ದ. ಇದರಿಂದ ಕೋಪಗೊಂಡ ಶೇಖರ್‌, ಕೆಂಗೇರಿ ಠಾಣೆಗೆ ತೆರಳಿ ವಾಸು ಕೊಲೆ ರಹಸ್ಯ ಬಯಲುಗೊಳಿಸಿದ್ದ. ಆಗ ರಾಘವೇಂದ್ರ, ಶೇಖರ್‌ನನ್ನು ಬಂಧಿಸಿದ್ದರು.

ಹಳೆ ಹತ್ಯೆಗಳು ಹೊರಬಾರದಂತೆ ಎಚ್ಚರಿಕೆ ವಹಿಸಬೇಕು

ವಾಸು ಕೊಲೆ ಪ್ರಕರಣದಲ್ಲಿ ಜಾಮೀನು ಪಡೆದು ಹೊರ ಬಂದ ಶೇಖರ್‌, ಇತ್ತೀಚಿಗೆ ತನ್ನ ಗೆಳೆಯರ ಜತೆ ಕೆಂಗೇರಿಯ ಬಾರ್‌ಗೆ ಮದ್ಯ ಸೇವನೆಗೆ ಹೋಗಿದ್ದ. ಆಗ ಪಾನಮತ್ತರಾದ ಆ ಗೆಳೆಯರು, ಅಮಲಿನಲ್ಲಿ ವಾಸು ಕೃತ್ಯದಂತೆ ಇನ್ನುಳಿದ ಕೊಲೆ ಪ್ರಕರಣಗಳು ಹೊರಬಾರದಂತೆ ಎಚ್ಚರಿಕೆ ವಹಿಸಬೇಕು ಎಂದಿದ್ದರು. ಈ ವೇಳೆ ಅವರ ಪಕ್ಕದ ಟೇಬಲ್‌ನಲ್ಲಿ ಕುಳಿತಿದ್ದ ಪೊಲೀಸ್‌ ಬಾತ್ಮೀದಾರನಿಗೆ ಶೇಖರ್‌ ಗುಂಪಿನ ಸಂಭಾಷಣೆ ಕಿವಿಗೆ ಬಿದ್ದಿದೆ. ಕೂಡಲೇ ಬಾತ್ಮೀದಾರ, ಸಿಸಿಬಿ ಪೊಲೀಸರಿಗೆ ಮಾಹಿತಿ ನೀಡಿದ್ದ. ಅಲ್ಲದೆ ಮದ್ಯ ಸೇವಿಸಿ ಶೇಖರ್‌ ತೆರಳುವಾಗ ಆತನ ಟಿ.ಟಿ. ವಾಹನ ನೋಂದಣಿ ಸಂಖ್ಯೆಯನ್ನು ಬರೆದಿಟ್ಟುಕೊಂಡಿದ್ದನು.

ಈ ನೊಂದಣಿ ಸಂಖ್ಯೆ ಆಧರಿಸಿ ತನಿಖೆಗಿಳಿದ ಸಿಸಿಬಿ, ಸುಂಕದಟ್ಟೆಯ ಟಿ.ಟಿ. ವಾಹನ ಮಾಲೀಕನನ್ನು ಪತ್ತೆ ಮಾಡಿದರು. ಆದರೆ ಮಾಲೀಕರು, ತಮ್ಮ ಚಾಲಕ ಶೇಖರ್‌ ಶಬರಿಮಲೆ ಪ್ರವಾಸ ಎಂದೂ ವಾಹನ ತೆಗೆದುಕೊಂಡು ಹೋಗಿದ್ದಾನೆ ಎಂದಿದ್ದರು. ಕೊನೆಗೆ ಶೇಖರನನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ರೈಲ್ವೆ ಹಳಿಗಳ ಕೊಲೆ ರಹಸ್ಯ ಬಯಲಾಯಿತು ಎಂದು ಸಿಸಿಬಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.