ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಅ. 4ರಂದು ವೀರಶೈವ ಮಠಾಧೀಶರ ಜೊತೆಗೆ ಮಾತುಕತೆ ನಡೆಸುವುದಾಗಿ ತಿಳಿಸಿರುವ ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷರಾಗಿರುವ ಗಣಿ ಸಚಿವ ವಿನಯ್ ಕುಲಕರ್ಣಿ ಶ್ರೀಗಳು ಒಪ್ಪಿದರೆ ಜೊತೆಯಾಗಿ ಹೋಗುತ್ತೇವೆ, ಇಲ್ಲದಿದ್ದರೆ ನಮ್ಮ ದಾರಿ ನಮಗೆ ಎಂದು ಸ್ಪಷ್ಟಪಡಿಸಿದ್ದಾರೆ.

ಹುಬ್ಬಳ್ಳಿ: ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರಕ್ಕೆ ಸಂಬಂಧಿಸಿದಂತೆ ಅ. 4ರಂದು ವೀರಶೈವ ಮಠಾಧೀಶರ ಜೊತೆಗೆ ಮಾತುಕತೆ ನಡೆಸುವುದಾಗಿ ತಿಳಿಸಿರುವ ರಾಷ್ಟ್ರೀಯ ಬಸವ ಸೇನೆ ಅಧ್ಯಕ್ಷರಾಗಿರುವ ಗಣಿ ಸಚಿವ ವಿನಯ್ ಕುಲಕರ್ಣಿ ಶ್ರೀಗಳು ಒಪ್ಪಿದರೆ ಜೊತೆಯಾಗಿ ಹೋಗುತ್ತೇವೆ, ಇಲ್ಲದಿದ್ದರೆ ನಮ್ಮ ದಾರಿ ನಮಗೆ ಎಂದು ಸ್ಪಷ್ಟಪಡಿಸಿದ್ದಾರೆ.

ಇಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಚಿಂತನಾ ಸಭೆಯಲ್ಲಿ ಮಾತನಾಡಿದ ಅವರು ಮಾತುಕತೆ ವೇಳೆ ಜೊತೆಯಾಗಿ ಹೋಗುವ ಬಗ್ಗೆ ಒಪ್ಪಿದರೆ ಜೊತೆಯಾಗಿ ಹೋಗುತ್ತೇವೆ, ಇಲ್ಲದಿದ್ದರೆ ನಮ್ಮ ದಾರಿ ನಮಗೆ, ಅವರ ದಾರಿ ಅವರಿಗೆ ಎಂದರು.

ಹೋರಾಟದ ಮುಂದಿನ ಭಾಗವಾಗಿ ನ.5 ರಂದು ಹುಬ್ಬಳ್ಳಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗವುದು. ಬಳಿಕ ವಿಜಯಪುರ ಹಾಗೂ ಬೆಂಗಳೂರಿನಲ್ಲಿ 25 ಲಕ್ಷ ಜನರನ್ನು ಸೇರಿಸಿ ಸಮಾವೇಶ ನಡೆಸಿ ಸರ್ಕಾರದ ಗಮನ ಸೆಳೆಯುವುದಾಗಿ ತಿಳಿಸಿದರು.

ಬಸವ ತತ್ವ ಮತ್ತು ಅನುಯಾಯಿಗಳನ್ನು ಯಾರು ಕೆಣಕಿದರೂ ಬಸವ ಸೇನೆ ಎದ್ದು ನಿಲ್ಲಲಿದೆ. ಕೂದಲು ಕೊಂಕಿದರೂ ನಾವು ಸಹಿಸಲ್ಲ ಎಂದು ಗುಡುಗಿದರು. ಅಮಿತ್ ಶಾ ಮತ್ತು ಪ್ರಧಾನಿ ಮೋದಿ ಆದೇಶದ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರು ಹೋರಾಟದಲ್ಲಿ ಭಾಗವಹಿಸುತ್ತಿಲ್ಲ. ಇದೊಂದು ಪಕ್ಷಾತೀತ ಹೋರಾಟವಾಗಿದೆ ಎಂದರು. ಮಾಜಿ ಸಚಿವ ಬಸವರಾಜ ಹೊರಟ್ಟಿ ಮಾತನಾಡಿ, ವೀರಶೈವ ಮಹಾಸಭಾದ ತಿಪ್ಪಣ್ಣ ಹೇಳಿದ ಹಾಗೇ ನಡೆದುಕೊಳ್ಳಲು ನಾವೇನು ಗುಲಾಮರಲ್ಲ. ಬಸವರಾಜ ಶಿವಲಿಂಗಪ್ಪ ಹೊರಟ್ಟಿ ಎಂಬ ನನ್ನ ಹೆಸರನ್ನು ಬಸವರಾಜ ಶಿವಲಿಂಗಪ್ಪ/ಸಿದ್ದಪ್ಪ ಹೊರಟ್ಟಿ ಎಂದು ಕರೆದರೆ ಹೇಗೆ ಆಭಾಸವಾಗುತ್ತದೋ ಅದೇ ರೀತಿ ಪ್ರತ್ಯೇಕ ಲಿಂಗಾಯತ ಧರ್ಮಕ್ಕೆ ವೀರಶೈವ ಎಂದು ಕರೆದರೂ ಅಪಾರ್ಥವಾಗುತ್ತದೆ ಎಂದು ಕುಟುಕಿದರು.

ಪ್ರತ್ಯೇಕ ಧರ್ಮದ ಬಗ್ಗೆ ಗೊಂದಲ: ಶ್ರೀಗಳು

ಧರ್ಮದ ಕೂಗು ಎದ್ದಾಗಿನಿಂದ ನಾನು ಒತ್ತಡದಲ್ಲಿದ್ದೇನೆ ಎಂದು ಚಿಂತನಾ ಸಭೆಯ ಸಾನ್ನಿಧ್ಯ ವಹಿಸಿದ್ದ ಮೂರುಸಾವಿರ ಮಠದ ಜಗದ್ಗುರು ಗುರುಸಿದ್ಧ ರಾಜಯೋಗಿಂದ್ರ ಸ್ವಾಮಿಜಿ ತಿಳಿಸಿದ್ದಾರೆ. ಲಿಂಗಾಯತ ಮತ್ತು ವೀರಶೈವ ಲಿಂಗಾಯತ ಧರ್ಮದ ಸತ್ಯದ ಅರಿವು ಗೊತ್ತಿದ್ದರೂ ಹೇಳುವ ಪರಿಸ್ಥಿತಿಯಲ್ಲಿಲ್ಲ. ಒಂದು ವೇಳೆ ಹೇಳಿದರೆ ಗೊಂದಲ ಏಳುವ ಸಾಧ್ಯತೆ ಇದೆ. ಹೀಗಾಗಿ ಗೊಂದಲ ಎಬ್ಬಿಸುವ ಇಚ್ಛೆ ನನಗಿಲ್ಲ. ಹಾಗಾಗಿ ಸುಮ್ಮನಿದ್ದೇನೆ. ಯಾವ ತ್ಯಾಗಕ್ಕಾದರೂ ಸರಿಯೇ, ಮುಂದೊಂದು ದಿನ ಈ ವಿಷಯ ಬಿಚ್ಚಿಡುತ್ತೇನೆ ಎಂದರು.

ಇದೇ ವೇಳೆ ವೀರಶೈವ ಮತ್ತು ಲಿಂಗಾಯತ ಈ ಎರಡು ಪದಗಳ ವಾದ-ವಿಮರ್ಶೆ ಮಧ್ಯೆ ಕುಮಾರಸ್ವಾಮಿಗಳನ್ನು ಸಣ್ಣವರನ್ನಾಗಿ ಮಾಡುವ ಪ್ರಯತ್ನ ಮಾಡಬಾರದು. ಅವರ ಉಪಕಾರವನ್ನು ಲಿಂಗಾಯತ ಸಮಾಜ ಮರೆಯಲು ಸಾಧ್ಯವಿಲ್ಲ ಎಂದು ಎಲ್ಲರೂ ಅರಿಯಬೇಕು ಎಂದು ಶ್ರೀಗಳು ತಿಳಿಸಿದರು.