ಮಂಡ್ಯ(ಸೆ.10): ನಿನ್ನೆಯಷ್ಟೆ ಕಾವೇರಿ ನದಿ ನೀರು ಹಂಚಿಕೆಯಲ್ಲಿ ರಾಜ್ಯಕ್ಕಾಗಿರುವ ಅನ್ಯಾಯ ಖಂಡಿಸಿ ಕನ್ನಡ ಪರ ಸಂಘಟನೆಗಳು ರಾಜ್ಯ ಬಂದ್ ನಡೆಸಿದ್ದವು. ಬಂದ್ ಸಹ ಶಾಂತಿಯುತವಾಗಿ ನಡೆದು ಯಶಸ್ವಿಯು ಆಗಿತ್ತು. ಈಗ ಸೆ.15 ರಂದು ರಾಜ್ಯದಲ್ಲಿ ಮತ್ತೊಂದು ಬಂದ್ ನಡೆಯಲಿದೆ. ಇದು ರಾಜ್ಯ ರೈಲ್ವೆ ಬಂದ್. ಕನ್ನಡ ಚಳುವಳಿ ಪಕ್ಷದ ನಾಯಕ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಪರ ಸಂಘಟನೆಗಳೇ ಈ ಬಂದ್'ಗೆ ಕರೆ ನೀಡಿವೆ.

ಕಾವೇರಿ, ಮಹದಾಯಿ ನದಿಯ ವಿಷಯದಲ್ಲಿ ರಾಜ್ಯಕ್ಕಾಗಿರುವ ಅನ್ಯಾಯ ಖಂಡಿಸಿ ಕನ್ನಡಪರ ಸಂಘಟನೆಗಳು ಇಡೀ ರಾಜ್ಯದ್ಯಂತ ರೈಲು ಬಂದ್ ನಡೆಸಲಿವೆ. ಸುಮಾರು ಒಂದು ಲಕ್ಷ ಹೋರಾಟಗಾರರು ರೈಲು ಬಂದ್'ನಲ್ಲಿ ಪಾಲ್ಗೊಳ್ಳಲಿದ್ದಾರೆ. ಇದು ಸಹ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆಯಲಿದೆ. ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸುವ ಉದ್ದೇಶದಿಂದ ಈ ಬಂದ್ ನಡೆಸಲಾಗುತ್ತದೆಯಂತೆ.

ಕೆಆರ್‌ಎಸ್ ಬೃಂದಾವನ ಬಳಿ ಪ್ರತಿಭಟನೆ ನಡೆಸಿದ ವಾಟಾಳ್ ನಾಗರಾಜ್ ರೈಲು ಬಂದ್ ಬಗ್ಗೆ ತಿಳಿಸಿದರು. ಕೆಆರ್'ಎಸ್ ಬಳಿ ಪ್ರತಿಭಟನೆ ನಡೆಸಿದ್ದಕ್ಕಾಗಿ ಪೊಲೀಸರು ವಾಟಾಳ್ ನಾಗರಾಜ್ ಹಾಗೂ ಸಾ.ರಾ. ಗೋವಿಂದು ಸೇರಿದಂತೆ ಹಲವು ಹೋರಾಟಗಾರರನ್ನು ಬಂಧಿಸಿದರು.