ಜೂ.21ರಂದು ಮೂರನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆಯಲಿರುವ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಮೂರು ಪೀಳಿಗೆಯ (ಅಜ್ಜ-ಅಜ್ಜಿ, ತಂದೆ-ತಾಯಿ ಹಾಗೂ ಮಕ್ಕಳು) ಸೆಲ್ಫಿ ತೆಗೆದು ಕಳುಹಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಮಾಸಿಕ ರೇಡಿಯೋ ಕಾರ್ಯಕ್ರಮ ‘ಮನ್ ಕೀ ಬಾತ್'ನಲ್ಲಿ ಭಾನುವಾರ ಮಾತನಾಡಿದ ಅವರು, ಇದು ಭೂತ, ವರ್ತಮಾನ ಹಾಗೂ ಭವಿಷ್ಯದ ಸಂಕೇತವಾಗಲಿದೆ ಎಂದು ಅವರು ಹೇಳಿದ್ದಾರೆ.ಫೋಟೋಗಳನ್ನು ಮmygov.in ವೆಬ್‌ಸೈಟ್‌ಗೆ ಅಥವಾ ನರೇಂದ್ರ ಮೋದಿ ಆ್ಯಪ್‌ಗೆ ಕಳಿಸಬಹುದು ಎಂದಿದ್ದಾರೆ. ಈ ಹಿಂದೆ ಹೆಣ್ಣುಮಕ್ಕಳ ಮಹತ್ವ ತಿಳಿಸಲು ‘ಸೆಲ್ಫಿ ವಿತ್ ಡಾಟರ್' ಎಂಬ ಅಭಿಯಾನವನ್ನು ಅವರು ನಡೆಸಿದ್ದರು.
ಪ್ರತಿ ಕುಟುಂಬದ ಸದಸ್ಯನಂತೆ ನಾನು: ‘ಮನ್ ಕೀ ಬಾತ್' ಕಾರ್ಯಕ್ರಮದ ಮೂಲಕ ನಾನು ದೇಶದ ಪ್ರತಿ ಕುಟುಂಬದ ಸದಸ್ಯನಾಗಿದ್ದೇನೆ. ದೈನಂದಿನ ವಿಚಾರಗಳ ಬಗ್ಗೆ ಕುಟುಂಬದ ಜತೆ ಸಮಾಲೋಚನೆ ನಡೆಸುತ್ತಿದ್ದೇನೆ ಎಂದು ಮೋದಿ ಅವರು ತಿಳಿಸಿದರು. ಜತೆಗೆ ನಾನೂ ಒಬ್ಬ ಸಾಮಾನ್ಯ ಮನುಷ್ಯ. ಹೀಗಾಗಿ ಒಳ್ಳೆಯ ಅಥವಾ ಕೆಟ್ಟಚಿಂತನೆಗಳಿಂದ ನಾನೂ ಪ್ರಭಾವಿತನಾಗುತ್ತೇನೆ ಎಂದು ಹೇಳಿದರು. ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ವಿವಿಧ ಮಾಧ್ಯಮ ಸಂಸ್ಥೆಗಳು ನಡೆಸಿರುವ ವಿಶ್ಲೇಷಣೆಯನ್ನು ಸ್ವಾಗತಿಸುವುದಾಗಿಯೂ ತಿಳಿಸಿದರು.
ಭಾನುವಾರ ವೀರ ಸಾವರ್ಕರ್ ಅವರ ಜನ್ಮದಿನವೂ ಆಗಿದ್ದ ಹಿನ್ನೆಲೆಯಲ್ಲಿ ಸ್ವಾತಂತ್ರ್ಯ ಸೇನಾನಿಯನ್ನು ಸ್ಮರಿಸಿದ ಮೋದಿ, ಅಸಂಖ್ಯಾತ ದೊಡ್ಡ ವ್ಯಕ್ತಿಗಳು ತಮ್ಮ ಯೌವನವನ್ನು ಜೈಲಿನಲ್ಲಿ ಕಳೆದಿದ್ದಾರೆ. ಇವರು ಪಟ್ಟ ಹಿಂಸೆ ಅರಿಯಲು ಯುವಕರು ಅಂಡಮಾನ್ ಜೈಲಿಗೆ ಭೇಟಿ ಕೊಡಬೇಕು ಎಂದು ಹೇಳಿದರು.
