2013ರಲ್ಲಿ ಚುನಾವಣೆ ಸೋತಾಗ ಪರಂಗೆ ಅದರಿಂದ ಹೊರಗೆ ಬರಲು ಬರೋಬ್ಬರಿ ಒಂದು ವರ್ಷ ಬೇಕಾಗಿತ್ತಂತೆ 92ರಲ್ಲಿ ಬಂಗಾರಪ್ಪ ಬಂಡಾಯ ಮಾಡಿದಾಗ ಕಾಂಗ್ರೆಸ್ ಶಾಸಕರು ಎರಡೂವರೆ ಗಂಟೆಯೊಳಗೆ ನಿಲುವು ಬದಲಿಸಿದ್ದರು

2004ರಲ್ಲಿಯೇ ದೇವೇಗೌಡರು ಧರ್ಮಸಿಂಗ್‌ಗಿಂತ ಮುಂಚೆ ಜಿ ಪರಮೇಶ್ವರ್‌ಗೆ ಸಮ್ಮಿಶ್ರ ಸರ್ಕಾರದಲ್ಲಿ ಮುಖ್ಯಮಂತ್ರಿ ಪಟ್ಟ ಕಟ್ಟಲು ರೆಡಿ ಆಗಿದ್ದರಂತೆ. ಫಲಿತಾಂಶ ಬಂದ ಮೇಲೆ ಪರಮೇಶ್ವರ್ ಅವರನ್ನು ದೆಹಲಿಗೆ ತಮ್ಮ ಮನೆಗೆ ಕರೆಸಿಕೊಂಡಿದ್ದ ಗೌಡರು, ಕಾಶಿಯ ಪ್ರಸಿದ್ಧ ಜ್ಯೋತಿಷಿ ಗೀತೇಶ್ ಶಾ ಅವರನ್ನು ಕರೆದು ಪರಂ ಜಾತಕ ಕೂಡ ಕೊಟ್ಟಿದ್ದರಂತೆ.

ಜಾತಕ ನೋಡಿದ್ದ ಬನಾರಸ್ ಹಿಂದೂ ವಿಶ್ವವಿದ್ಯಾಲ ಯದ ಅಧ್ಯಾಪಕ ಗೀತೇಶ್, ‘ಪರಂ ನಿಮಗೆ ಬಹಳ ಒಳ್ಳೆ ಹೆಸರು ತರುತ್ತಾರೆ’ ಎಂದು ಗೌಡರಿಗೆ ಹೇಳಿದ್ದರಂತೆ. ಆದರೆ ನಂತರ 24 ಗಂಟೆಯಲ್ಲಿ ಧರ್ಮಸಿಂಗ್ ಹೆಸರು ಹೊರಬಿತ್ತಂತೆ. ದೆಹಲಿಯಲ್ಲಿ ದೇವೇಗೌಡರಿಗೂ ನಿಮಗೂ ಹೇಗೆ ಸಂಬಂಧ ಎಂದು ಪತ್ರಕರ್ತರು ಕೇಳಿದಾಗ ಸ್ವತಃ ಪರಮೇಶ್ವರ್ ಹೇಳಿಕೊಂಡ ಫ್ಲ್ಯಾಶ್ ಬ್ಯಾಕ್ ಇದು.

ಅಂದಹಾಗೆ 2013ರಲ್ಲಿ ಚುನಾವಣೆ ಸೋತಾಗ ಪರಂಗೆ ಅದರಿಂದ ಹೊರಗೆ ಬರಲು ಬರೋಬ್ಬರಿ ಒಂದು ವರ್ಷ ಬೇಕಾಯಿತಂತೆ. ಯಾಕೆ ಅಷ್ಟು ನೋವು ಎಂದು ಪತ್ರಕರ್ತರು ಕೇಳಿದಾಗ, ‘ಏನ್ರೀ... ಗೆದ್ದಿದ್ದರೆ ಮುಖ್ಯಮಂತ್ರಿ ಅಲ್ವೇನ್ರಿ. ಹತ್ತಿರ ಬಂದು ತಪ್ಪಿದರೆ ನೋವು ಜಾಸ್ತಿ’ ಎಂದರು.

ಯಾರೋ ಒಬ್ಬರು ನೀವು ಸ್ವಲ್ಪ ಸಿದ್ದು ವಿರುದಟಛಿ ಬಂಡಾಯ ಹೂಡ ಬೇಕಿತ್ತು ಎಂದಾಗ, ‘ನನಗೇನು ತಲೆ ಕೆಟ್ಟಿದೆಯಾ? 92ರಲ್ಲಿ ಬಂಗಾರಪ್ಪ ಬಂಡಾಯ ಮಾಡಿದಾಗ ಕಾಂಗ್ರೆಸ್ ಶಾಸಕರು ಎರಡೂವರೆ ಗಂಟೆಯೊಳಗೆ ನಿಲುವು ಬದಲಾಯಿಸಿದ್ದನ್ನು ನೋಡಿದ್ದೇನೆ. ಕಾಂಗ್ರೆಸ್ ಇರಲಿ, ಬಿಜೆಪಿ ಇರಲಿ ಮುಖ್ಯಮಂತ್ರಿ ಆಗುವುದು ಪಕ್ಷ ನಿಷ್ಠರೇ ಹೊರತು ಬಂಡಾಯ ಮಾಡುವವರಲ್ಲ. ಬಾರದು ಬಪ್ಪುದು ಬಪ್ಪುದು ತಪ್ಪದು ಬಿಡಿ. ನಾನಂತೂ ಪಕ್ಕಾ ಹೈಕಮಾಂಡ್ ಮನುಷ್ಯ ನೋಡ್ರಿ’ ಎಂದರು.

[ಕನ್ನಡಪ್ರಭ : ಪ್ರಶಾಂತ್ ನಾತು ಅವರ ಇಂಡಿಯಾ ಗೇಟ್ ಅಂಕಣದ ಆಯ್ದ ಭಾಗ ]