Asianet Suvarna News Asianet Suvarna News

ದಿಲ್ಲಿ - ಮುಂಬೈಗಳಿಗೆ ಅಭೇದ್ಯ ಕೋಟೆ

ಅಮೆರಿಕದ ವಾಷಿಂಗ್ಟನ್ ಹಾಗೂ ರಷ್ಯಾದ ಮಾಸ್ಕೋ ರೀತಿ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ವಾಣಿಜ್ಯ ರಾಜಧಾನಿ ಮುಂಬೈ ಬದಲಾಗಲಿವೆ.  ಶತ್ರುಗಳ ದಾಳಿಯಿಂದ ರಕ್ಷಿಸಲು ಅಭೇದ್ಯ ಕೋಟೆಯನ್ನಾಗಿ ಪರಿವರ್ತಿಸಲು ಕೇಂದ್ರ  ಸರ್ಕಾರ ತೀರ್ಮಾನಿಸಿದೆ. 

Security Boost For National Capital Delhi To Get Missile Shield Cover
Author
Bengaluru, First Published Jul 30, 2018, 7:36 AM IST

ನವದೆಹಲಿ: ಅಮೆರಿಕದ ವಾಷಿಂಗ್ಟನ್ ಹಾಗೂ ರಷ್ಯಾದ ಮಾಸ್ಕೋ ರೀತಿ ರಾಷ್ಟ್ರ ರಾಜಧಾನಿ ದೆಹಲಿ ಮತ್ತು ವಾಣಿಜ್ಯ ರಾಜಧಾನಿ ಮುಂಬೈಯನ್ನು ಶತ್ರುಗಳ ಅಭೇದ್ಯ ಕೋಟೆಯನ್ನಾಗಿ ಪರಿವರ್ತಿಸಲು ಕೇಂದ್ರ  ಸರ್ಕಾರ ಮುಂದಾಗಿದೆ. ವಿಮಾನ, ಕ್ಷಿಪಣಿ ಹಾಗೂ ಡ್ರೋನ್ (ಮಾನವರಹಿತ ವೈಮಾನಿಕ ನೌಕೆ) ಗಳನ್ನು ಬಳಸಿ ಶತ್ರುದೇಶದ ಮಿಲಿಟರಿ ಅಥವಾ ಉಗ್ರರು 2001 ರಲ್ಲಿ ಅಮೆರಿಕದ ಮೇಲೆ ನಡೆಸಿದ ರೀತಿಯ ದಾಳಿ ತಪ್ಪಿಸಲು ಹಳೆಯ ವಾಯು ರಕ್ಷಣಾ ವ್ಯವಸ್ಥೆಯನ್ನು ಬದಲಿಸಿ ಹೊಸ ಕ್ಷಿಪಣಿ ನಿರೋಧಕ ವ್ಯವಸ್ಥೆಯನ್ನು ಅಳವಡಿಸಲು ಸರ್ಕಾರ ಉದ್ದೇಶಿಸಿದೆ. 

ಇದೇ ವೇಳೆ, ವಿಐಪಿಗಳು ವಾಸಿಸುವ ಪ್ರದೇಶದಲ್ಲಿ ವಿಮಾನ ಹಾರಾಟ ನಿರ್ಬಂಧ ವಿಚಾರವಾಗಿ ಹಾಗೂ ಅಪಾಯಕಾರಿಯಾಗಿರುವ ವಿಮಾನವನ್ನು ಬೇಗನೆ ಹೊಡೆದುರುಳಿಸುವ ನಿಯಮಗಳಲ್ಲೂ ಬದಲಾವಣೆ ತರಲು ಉದ್ದೇಶಿಸಿದೆ. ಈ  ರಕ್ಷಣಾ ವ್ಯವಸ್ಥೆಯ ಜಾರಿಗಾಗಿ ಸ್ವದೇಶಿ ಅಗ್ನಿ- 5 ಕ್ಷಿಪಣಿ ವ್ಯವಸ್ಥೆಯ ಜೊತೆಗೆ, ಅಮೆರಿಕ, ರಷ್ಯಾ ಮತ್ತು ಇಸ್ರೇಲ್‌ಗಳಿಂದಲೂ ವಿವಿಧ ರೀತಿಯ ರಕ್ಷಣಾ ಉಪಕರಣಗಳನ್ನು  ಖರೀದಿ ಸಲಾಗುತ್ತಿದೆ.

ಈ ನಿಟ್ಟಿನಲ್ಲಿ ಈಗಾಗಲೇ ಅಮೆರಿಕದಿಂದ ವಿವಿಧ ರೀತಿಯ ಕ್ಷಿಪಣಿ, ರಾಡಾರ್, ದಾಳಿ ಹೆಲಿಕಾಪ್ಟರ್ ಖರೀದಿಗೆ ನಿರ್ಧರಿಸಲಾಗಿದೆ. ಈ ಪೈಕಿ ಅತ್ಯಾಧುನಿಕ ಸೀ ಗಾರ್ಡಿಯನ್ ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಮಾರಲು ಅಮೆರಿಕ ಒಪ್ಪಿಕೊಂಡಿದೆ. ನ್ಯಾಟೋ ಸದಸ್ಯ ರಾಷ್ಟ್ರಗಳನ್ನು ಹೊರತುಪಡಿಸಿ ಉಳಿದ ಯಾವುದೇ ದೇಶಕ್ಕೆ ಈ ಕಾಪ್ಟರ್ ಮಾರುತ್ತಿರುವುದು ಇದೇ ಮೊದಲು. ಇದರ ಜೊತೆಗೆ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆದ ರಕ್ಷಣಾ ಖರೀದಿ ಮಂಡಳಿ ಸಭೆಯಲ್ಲಿ ಅಮೆರಿಕದಿಂದ 6800 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಭೂಮಿಯಿಂದ ಆಗಸ ಕ್ಷಿಪಣಿ ವ್ಯವಸ್ಥೆ-   2(ನಾಸಾಮ್ಸ್- 2) ಖರೀದಿಸುವ ಅಗತ್ಯವನ್ನು ಮನಗಾಣಲಾಗಿದೆ.

ದೆಹಲಿ ಪ್ರದೇಶ ವಾಯು ರಕ್ಷಣಾ ಯೋಜನೆಯ ಭಾಗವಾಗಿ ರಾಷ್ಟ್ರಪತಿ ಭವನ, ಸಂಸತ್ತು, ಮಹತ್ವದ ಇಲಾಖೆಗಳು ಕಾರ್ಯನಿರ್ವಹಿಸುವ ನಾರ್ತ್ ಹಾಗೂ ಸೌತ್ ಬ್ಲಾಕ್ ಒಳಗೊಂಡಂತೆ ವಿಐಪಿ ಬಡಾವಣೆಗಳನ್ನು ಗುರುತಿಸುವ ಕೆಲಸ ಮಾಡಲುಉದ್ದೇಶಿಸಲಾಗಿದೆ. 

ಇದರ ಜತೆಗೆ ಅಪಹೃತ ಅಥವಾ ನಿರ್ದಿಷ್ಟ ಗುರಿಯನ್ನು ಉದ್ದೇಶಿಸಿ ದಾಳಿ ಮಾಡಲು ಉದ್ದೇಶಿಸಿರುವ ವಿಮಾನಗಳನ್ನು ಹೊಡೆದುರುಳಿಸುವ ಸಂಬಂಧ ನಿರ್ಧಾರ ಕೈಗೊಳ್ಳುವ ಅವಧಿಯನ್ನು ಕಡಿತಗೊಳಿಸುವ ಪ್ರಸ್ತಾಪವಿದೆ. ನಾಸಾಮ್ಸ್ ಕ್ಷಿಪಣಿಗಳು ಮೂರು ಆಯಾಮದ ಸೆಂಟಿನೆಲ್ ರಾಡಾರ್ಸ್‌ಗಳನ್ನು ಹೊಂದಿವೆ. ಇದರ ಜತೆಗೆ ಅಲ್ಪ, ಮಧ್ಯಮ ದೂರ ಕ್ರಮಿಸಬಲ್ಲ ಕ್ಷಿಪಣಿಗಳು, ಉಡ್ಡಯನಗಳು, ಕ್ಷಿಪಣಿಯನ್ನು ಪತ್ತೆ ಶೋಧಿಸಿ, ಅವುಗಳ ಬೆನ್ನತ್ತಿ ಹೊಡೆದುರುಳಿಸುವ ಮೂಲಕ ವಾಯುಮಾರ್ಗದಲ್ಲಿ ಎದುರಾಗುವ ಹಲವು ಸವಾಲುಗಳನ್ನು ಎದುರಿಸುವ ನೈಪುಣ್ಯತೆ ಹೊಂದಿವೆ. 

ಇದೇ ವ್ಯವಸ್ಥೆ ಬಳಸಿ ವಾಷಿಂಗ್ಟನ್‌ಗೆ ಭದ್ರತೆ ಕಲ್ಪಿಸಲಾಗಿದೆ. ಹಲವು ನ್ಯಾಟೋ ದೇಶಗಳು, ಅಮೆರಿಕ ರಾಷ್ಟ್ರ ರಾಜಧಾನಿ ವಲಯ, ಇಸ್ರೇಲ್‌ನ ನಗರ ಗಳು ಹಾಗೂ ಮಾಸ್ಕೋದಲ್ಲೂ ಇಂತಹ ವ್ಯವಸ್ಥೆಗಳು ಇವೆ. 

Follow Us:
Download App:
  • android
  • ios