ರಜನಿಕಾಂತ್ –ಕಮಲ್ ಹಾಸನ್ ನಡುವೆ ಗೌಪ್ಯ ಮಾತುಕತೆ

First Published 23, Feb 2018, 9:01 AM IST
Secret Talk Between Rajinikanth And Kamal Haasan
Highlights

ಮಕ್ಕಳ್‌ ನೀದಿ ಮಯ್ಯಂ ಪಕ್ಷದ ಮೂಲಕ ರಾಜಕೀಯಕ್ಕೆ ಭರ್ಜರಿ ಎಂಟ್ರಿ ಕೊಟ್ಟಿರುವ ನಟ ಕಮಲ್‌ ಹಾಸನ್‌, ರಾಜಕೀಯ ಪಕ್ಷ ಸ್ಥಾಪನೆಗೂ ಮುನ್ನ ಹಿರಿಯ ನಟ ರಜನೀಕಾಂತ್‌ ಅವರ ಜತೆ ಗೌಪ್ಯವಾಗಿ ಸಭೆ ನಡೆಸಿದ್ದಾಗಿ ಹೇಳಿದ್ದಾರೆ.

ಚೆನ್ನೈ: ಮಕ್ಕಳ್‌ ನೀದಿ ಮಯ್ಯಂ ಪಕ್ಷದ ಮೂಲಕ ರಾಜಕೀಯಕ್ಕೆ ಭರ್ಜರಿ ಎಂಟ್ರಿ ಕೊಟ್ಟಿರುವ ನಟ ಕಮಲ್‌ ಹಾಸನ್‌, ರಾಜಕೀಯ ಪಕ್ಷ ಸ್ಥಾಪನೆಗೂ ಮುನ್ನ ಹಿರಿಯ ನಟ ರಜನೀಕಾಂತ್‌ ಅವರ ಜತೆ ಗೌಪ್ಯವಾಗಿ ಸಭೆ ನಡೆಸಿದ್ದಾಗಿ ಹೇಳಿದ್ದಾರೆ.

ಈ ಮೂಲಕ ತಾವಿಬ್ಬರೂ ಪ್ರತ್ಯೇಕ ಪಕ್ಷದಿಂದ ರಾಜಕೀಯಕ್ಕೆ ಬಂದರೂ ಪರಸ್ಪರ ಗೌರವ ಕಾಪಾಡಿಕೊಳ್ಳಲು ನಿರ್ಧರಿಸಿದ್ದೇವೆ ಎಂದು ಕಮಲ್‌ ಹೇಳಿಕೊಂಡಿದ್ದಾರೆ. ಆದಾಗ್ಯೂ, ಈ ಉಭಯ ನಾಯಕರ ಜತೆಗಿನ ಸಭೆ ಯಾವಾಗ ನಡೆಯಿತು ಎಂಬುದರ ಬಗ್ಗೆ ಕಮಲ್‌ ಮತ್ತೆ ಗೌಪ್ಯ ಕಾಪಾಡಿಕೊಂಡಿದ್ದಾರೆ.

ಈ ಬಗ್ಗೆ ‘ಆನಂದ ವಿಕಟನ್‌’ ಎಂಬ ತಮಿಳು ನಿಯತಕಾಲಿಕೆಯಲ್ಲಿ ಬರೆದಿರುವ ಲೇಖನದಲ್ಲಿ ಉಲ್ಲೇಖಿಸಿರುವ ಕಮಲ್‌, ‘ಬಿಗ್‌ಬಾಸ್‌ನ ನಿರೂಪಣೆಯ ಶೂಟಿಂಗ್‌ ವೇಳೆ, ನಟ ರಜನೀಕಾಂತ್‌ ಅವರ ಬಳಿ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಚರ್ಚಿಸಿದ್ದೆ,’ ಎಂದು ಹೇಳಿದ್ದಾರೆ. ಬಿಗ್‌ಬಾಸ್‌ ಶೂಟಿಂಗ್‌ ನಡೆಯುತ್ತಿದ್ದ ಸ್ಥಳದ ಸಮೀಪದಲ್ಲೇ ರಜನೀಕಾಂತ್‌ ಅಭಿನಯದ ಕಾಲಾ ಚಿತ್ರದ ಶೂಟಿಂಗ್‌ ಸಹ ನಡೆಯುತ್ತಿತ್ತು.

ಆಗ ನಾನೇ ಖುದ್ದಾಗಿ ರಜನೀಕಾಂತ್‌ ಬಳಿ ತೆರಳಿ, ತಾವಿಬ್ಬರು ಕೆಲಹೊತ್ತು ಸಮಾಲೋಚನೆ ನಡೆಸಬಹುದೇ ಎಂದು ಕೇಳಿದ್ದೆ. ಬಳಿಕ ನಾವಿಬ್ಬರು ಕಾರಿನಲ್ಲೇ ಕುಳಿತು ಮಾತುಕತೆ ನಡೆಸಿದ್ದೆವು. ನನ್ನ ರಾಜಕೀಯ ಪ್ರವೇಶದ ಕುರಿತು ಇತರರಿಗಿಂತ ಮೊದಲು ನನ್ನ ಸಹ ನಟನಿಗೆ ತಿಳಿಯಬೇಕು ಎಂಬುದು ನನ್ನ ಉದ್ದೇಶವಾಗಿತ್ತು ಎಂದು ಕಮಲ್‌ ಹೇಳಿಕೊಂಡಿದ್ದಾರೆ.

ಇದೇ ಸಂದರ್ಭದಲ್ಲಿ ನಮ್ಮಿಬ್ಬರಲ್ಲಿ ಯಾವುದೇ ಕಾರಣಕ್ಕೂ ಪರಸ್ಪರರ ಗೌರವಕ್ಕೆ ಧಕ್ಕೆ ತರುವ ಕೆಲಸಕ್ಕೆ ಮಾತ್ರ ಇಳಿಯಬಾರದು ಎಂಬುದಾಗಿ ನಿರ್ಧರಿಸಿದೆವು. ನಾವಿಬ್ಬರು ವಿರೋಧಿ ಬಣಗಳ ಮೂಲಕ ರಾಜಕೀಯ ಪ್ರವೇಶಿಸಿದರೂ, ಪರಸ್ಪರರ ಆತ್ಮಗೌರವಕ್ಕೆ ಚ್ಯುತಿ ಬರುವ ಕೆಲಸ ಹೋಗದಿರುವ ನಿರ್ಧಾರ ಕೈಗೊಂಡಿದ್ದೇವೆ ಎಂದು ಕಮಲ್‌ ಬಹಿರಂಗಪಡಿಸಿದ್ದಾರೆ.

 

loader