ಶ್ರೀನಗರ[ಆ.04]: ಕೇಂದ್ರ ಸರ್ಕಾರ ವಾರದಿಂದೀಚೆಗೆ ಜಮ್ಮು-ಕಾಶ್ಮೀರದಲ್ಲಿ 38,000 ಹೆಚ್ಚುವರಿ ಯೋಧರನ್ನು ನಿಯೋಜಿಸಿದೆ. ಭಾರತೀಯ ವಾಯುಪಡೆ ರಾಜ್ಯದ ಮೇಲೆ ಗಸ್ತು ತಿರುಗುತ್ತಿದೆ. ರಾಷ್ಟ್ರೀಯ ರೈಫಲ್ಸ್‌ ಮತ್ತಿತರ ದಳಗಳನ್ನು ಗಡಿ ನಿಯಂತ್ರಣ ರೇಖೆ ಬಳಿ ನಿಯೋಜಿಸಲಾಗಿದೆ. ಯುದ್ಧಕ್ಕೆ ಸಿದ್ಧತೆ ಮಾಡಿಕೊಳ್ಳುವ ಮಾದರಿಯಲ್ಲಿರುವ ಕೇಂದ್ರ ಸರ್ಕಾರದ ಈ ನಡೆ ತೀವ್ರ ಕುತೂಹಲ ಮೂಡಿಸಿದೆ. ಕೇಂದ್ರದ ಈ ನಿರ್ಧಾರದ ಹಿಂದಿನ ಕಾರಣ ಏನು ಎಂಬ ಬಗ್ಗೆ ಕೆಲವು ಊಹೆಗಳು ಕೇಳಿಬರುತ್ತಿವೆ

ಕಾಶ್ಮೀರದಲ್ಲಿ ಮೋದಿ ಧ್ವಜಾರೋಹಣ?

ಪ್ರಧಾನಿ ನರೇಂದ್ರ ಮೋದಿ ಆಗಸ್ಟ್‌ 15ರಂದು ನಡೆಯಲಿರುವ ಸ್ವಾತಂತ್ರ್ಯೋತ್ಸವದಂದು ದೆಹಲಿಯ ಕೆಂಪುಕೋಟೆಯ ಬದಲಿಗೆ ಕಾಶ್ಮೀರದ ರಾಜಧಾನಿ ಶ್ರೀನಗರದಲ್ಲಿ ಧ್ವಜಾರೋಹಣ ನಡೆಸುವ ಸಾಧ್ಯತೆ ಇದೆ. ಹಾಗಾಗಿ ಸರ್ಕಾರ ಹೆಚ್ಚಿನ ಬಿಗಿ ಭದ್ರತೆ ಕೈಗೊಳ್ಳುತ್ತಿದೆ ಎನ್ನಲಾಗುತ್ತಿದೆ. ಕಾಶ್ಮೀರವು ದೇಶದ ಅವಿಭಾಜ್ಯ ಅಂಗ ಎಂದು ಸಾರಲು ಮೋದಿ ಈ ನಿರ್ಧಾರ ಕೈಗೊಂಡಿರಬಹುದು.

ಕಾಶ್ಮೀರದಲ್ಲಿ ಭರ್ಜರಿ ಭೇಟೆ: 3 ದಿನದಲ್ಲಿ 10 ಉಗ್ರರ ಬಲಿ!

ರಾಜ್ಯದ ಚುನಾವಣೆಗೆ ತಯಾರಿ

ಕಾಶ್ಮೀರದಲ್ಲಿ ಚುನಾವಣೆ ಎಂದರೆ ಹಿಂಸಾತ್ಮಕ ಘಟನೆಗಳು ಮಾಮೂಲು. ಅಲ್ಲೀಗ ಒಂದು ವರ್ಷದಿಂದ ರಾಜ್ಯಪಾಲರ ಆಳ್ವಿಕೆ ಇದೆ. ಇದೇ ಅಕ್ಟೋಬರ್‌ನಲ್ಲಿ ಚುನಾವಣೆ ನಡೆಯಬಹುದೆಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಭದ್ರತೆಗಾಗಿ ಹೆಚ್ಚಿನ ಸೇನೆ ನಿಯೋಜಿಸಿರಬಹುದು.

ರಾಜ್ಯ ವಿಭಜನೆ ಮಾಡುತ್ತಾರಾ?

ಜಮ್ಮು ಕಾಶ್ಮೀರದ ಅಭಿವೃದ್ಧಿ ಹಾಗೂ ಉಗ್ರ ಚಟುವಟಿಕೆಗಳ ನಿಯಂತ್ರಣಕ್ಕೆ ರಾಜ್ಯ ವಿಭಜನೆ ಅಗತ್ಯ ಎನ್ನುವ ಮಾತುಗಳು ಬಿಜೆಪಿ ವಲಯದಲ್ಲಿ ಕೇಳಿಬರುತ್ತಿವೆ. ಕಾಶ್ಮೀರದಲ್ಲಿನ ಉದ್ವಿಗ್ನ ಪರಿಸ್ಥಿತಿಯ ಕಾರಣದಿಂದ ಲಡಾಕ್‌ ಮತ್ತು ಜಮ್ಮು ಭಾಗಗಳು ಅಭಿವೃದ್ಧಿ ಹೊಂದುತ್ತಿಲ್ಲ. ಹಾಗಾಗಿ ಜಮ್ಮುವಿಗೆ ಪ್ರತ್ಯೇಕ ರಾಜ್ಯ ಮತ್ತು ಕಾಶ್ಮೀರ ಮತ್ತು ಲಡಾಕ್‌ಗೆ ಕೇಂದ್ರಾಡಳಿತ ಪ್ರದೇಶ ಎನ್ನುವ ವಿಶೇಷ ಸ್ಥಾನಮಾನ ನೀಡುವ ಬಗ್ಗೆ ಚರ್ಚೆಗಳು ನಡೆಯುತ್ತಿವೆ ಎನ್ನಲಾಗುತ್ತಿದೆ. ಇದಕ್ಕೆ ಅಲ್ಲಿನ ಪ್ರಾದೇಶಿಕ ಪಕ್ಷಗಳು ವಿರೋಧ ವ್ಯಕ್ತಪಡಿಸುತ್ತಿವೆ.

ವಿಷೇಶ ಸ್ಥಾನಮಾನ ರದ್ದು?

ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿರುವ ಸಂವಿಧಾನದ 370ಎ ವಿಧಿ ಮತ್ತು ಕೇವಲ ಕಾಶ್ಮೀರಿಗಳಿಗೆ ಮಾತ್ರ ಅಲ್ಲಿ ಕೆಲಸ ಮತ್ತು ಭೂಮಿ ಪಡೆಯಲು ಅವಕಾಶ ನೀಡುತ್ತಿರುವ 35ಎ ವಿಧಿಯ ನಿಷೇಧಕ್ಕೆ ಕೇಂದ್ರ ಸಿದ್ಧತೆ ಮಾಡಿಕೊಳ್ಳುತ್ತಿದೆ ಎಂಬ ವದಂತಿಯೂ ಇದೆ.

ಮತ್ತೊಂದು ಸರ್ಜಿಕಲ್ ಸ್ಟ್ರೈಕ್: POK ಒಳನುಗ್ಗಿದ ಸೇನೆ?

ಪಾಕ್‌ ನಿರಾಶ್ರಿತರಿಗೆ ಮತದಾನದ ಹಕ್ಕು

ಪಶ್ಚಿಮ ಪಾಕಿಸ್ತಾನದ ನಿರಾಶ್ರಿತರಿಗೆ ಮತದಾನದ ಹಕ್ಕು ನೀಡಲು ಕೇಂದ್ರ ಸರ್ಕಾರ ಚಿಂತನೆ ನಡೆಸುತ್ತಿದೆ. ಈ ಹಕ್ಕು ನೀಡಿದಲ್ಲಿ ಕಾಶ್ಮೀರದಲ್ಲಿ ಉಂಟಾಗುವ ಉದ್ವಿಗ್ನ ಪರಿಸ್ಥಿತಿಯನ್ನು ಹತೋಟಿಗೆ ತರಲು ಭದ್ರತೆ ಹೆಚ್ಚಿಸಲಾಗುತ್ತಿದೆ ಎಂದೂ ಹೇಳಲಾಗುತ್ತಿದೆ.