ದಾಖಲೆ ಪರಿಶೀಲಿಸದೆ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಗೃಹ ಸಚಿವ ಆರ್. ರಾಮಲಿಂಗಾರೆಡ್ಡಿ ಸೂಚಿಸಿದರು.
ಬೆಂಗಳೂರು (ಡಿ.24): ದಾಖಲೆ ಪರಿಶೀಲಿಸದೆ ಸೆಕೆಂಡ್ ಹ್ಯಾಂಡ್ ವಾಹನಗಳನ್ನು ಖರೀದಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಗೃಹ ಸಚಿವ ಆರ್. ರಾಮಲಿಂಗಾರೆಡ್ಡಿ ಸೂಚಿಸಿದರು.
ನಗರದಲ್ಲಿ ವಾಹನಗಳ ಕಳ್ಳತನ ನಿಯಂತ್ರಣಕ್ಕೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ನಗರ ವ್ಯಾಪ್ತಿ ಪ್ರತಿ ವರ್ಷ ದುಬಾರಿ ಮೌಲ್ಯದ ಬೈಕ್‌ಗಳು ಸೇರಿದಂತೆ 5 ಸಾವಿರಕ್ಕೂ ಹೆಚ್ಚು ವಾಹನಗಳು ಕಳ್ಳತನವಾಗುತ್ತಿವೆ. ಇಲ್ಲಿ ಬೈಕ್'ಗಳನ್ನು ಕದ್ದು ಹೊರ ರಾಜ್ಯಗಳಲ್ಲಿ ಕಡಿಮೆ ಬೆಲೆಗೆ ಮಾರುವ ಜಾಲವಿದೆ. ಹೀಗಾಗಿ ದಾಖಲೆ ಪರಿಶೀಲಿಸದೆ ವಾಹನ ಖರೀದಿಸುವವರ ವಿರುದ್ಧವೂ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳಿಗೆ ಗೃಹ ಸಚಿವರು ಸೂಚಿಸಿದ್ದಾರೆ.
ಈ ವರ್ಷವೂ ಸಹ ವಾಹನಗಳ ಕಳ್ಳತನ ಪ್ರಮಾಣದಲ್ಲಿ ಬದಲಾವಣೆಯಾಗಿಲ್ಲ. ಹನ್ನೊಂದು ತಿಂಗಳಲ್ಲಿ ನಗರದಲ್ಲಿ 5637 ಬೈಕ್‌ಗಳು ಕಳ್ಳತನವಾಗಿವೆ. ಈ ಪೈಕಿ ಪೂರ್ವ ವಿಭಾಗದಲ್ಲಿ 2,723 ದ್ವಿಚಕ್ರ ವಾಹನಗಳು ಕಳ್ಳತನವಾಗಿದ್ದು, ಇದರಲ್ಲಿ 4.98 ಕೋಟಿ ಮೌಲ್ಯದ 1,180 ವಾಹನಗಳನ್ನು ಪತ್ತೆ ಮಾಡಲಾಗಿದೆ ಎಂದು ಅಧಿಕಾರಿಗಳು ವಿವರಿಸಿದರು.
