ಮನೆಯೊಳಗೆ ಧೂಮಪಾನ ಮಾಡಿದರೆ, ಇತರ ಸದಸ್ಯರೂ ಪರೋಕ್ಷ ಧೂಮಪಾನಕ್ಕೊಳಗಾಗುತ್ತರೆ. ಇನ್ನು ಕೆಲವರಿಗೆ ತಮ್ಮ ಕಾರಿನಲ್ಲಿ ಸ್ಮೋಕ್ ಮಾಡುವ ಚಟವಿರುತ್ತದೆ. ಇದರಿಂದ ಪಕ್ಕದಲ್ಲಿ ಕುಳಿತವರೊಳಗೂ ವಿಷಗಾಳಿ ಸೇರುತ್ತದೆ. ಬಾರ್, ಪಬ್‌ಗಳಲ್ಲಿ ಸೆಕೆಂಡ್ ಸ್ಮೋಕರ್‌ಗಳಿಗೆ ಇನ್ನೂ ಅಪಾಯ ಕಾದಿರುತ್ತದೆ

-ಅಶ್ವಿನ್ ಪಿ ಎಸ್ ಭಟ್(ಕನ್ನಡ ಪ್ರಭ)

ಸಿಗರೇಟ್ ಇಲ್ಲದ ಊರನ್ನು ಇಂದು ಹುಡುಕಲೂ ಸಾಧ್ಯವಿಲ್ಲ. ಸೇದುವವರೇನೋ ರೋಗಕ್ಕೆ ತುತ್ತಾಗುತ್ತಾರೆ. ಆದರೆ, ಆ ಹೊಗೆ ಪಕ್ಕದಲ್ಲೇ ಇದ್ದವನ ಆರೋಗ್ಯವನ್ನೂ ಬಲಿ ತೆಗೆದುಕೊಳ್ಳುತ್ತದೆ. ಸೆಕೆಂಡ್ ಹ್ಯಾಂಡ್ ಸ್ಮೋಕಿಂಗ್ ಅಥವಾ ಪರೋಕ್ಷ ಧೂಮಪಾನ ಇವತ್ತಿನ ದೊಡ್ಡ ಪಿಡುಗು. ಸುತ್ತಮುತ್ತಲಿನಲ್ಲಿ ಯಾರಾದರು ಧೂಮಪಾನ ಮಾಡುತ್ತಿದ್ದರೆ, ಅವರ ಬಾಯಿಯಿಂದ ಹೊರಬರುವ ಹೊಗೆಯನ್ನು ನೀವು ಉಸಿರಾಡಿದಾಗ ಅದು ಪರೋಕ್ಷ ಧೂಮಪಾನವಾಗುತ್ತದೆ. ‘ನನಗೆ ಯಾವುದೇ ಚಟಗಳಿಲ್ಲ, ಬೇರೆಯವರು ಏನಾದರೂ ಮಾಡಿಕೊಳ್ಳಲಿ’ ಎಂದು ನಾವು ಯೋಚಿಸುತ್ತೇವೆ. ಆದರೆ ಇಂತಹ ನಿರ್ಲಕ್ಷ್ಯದಿಂದ ಹಲವು ಮುಗ್ಧರು ಪರೋಕ್ಷ ಧೂಮಪಾನಕ್ಕೆ ತುತ್ತಾಗುತ್ತರೆ. ನಿಕೋಟಿನ್‌ಯುಕ್ತ ಹೊಗೆ ಹಲವು ರೋಗಗಳಿಗೆ ನಾಂದಿ ಹಾಡುತ್ತದೆ.

ಮನೆಯೊಳಗೆ ಧೂಮಪಾನ ಮಾಡಿದರೆ, ಇತರ ಸದಸ್ಯರೂ ಪರೋಕ್ಷ ಧೂಮಪಾನಕ್ಕೊಳಗಾಗುತ್ತರೆ. ಇನ್ನು ಕೆಲವರಿಗೆ ತಮ್ಮ ಕಾರಿನಲ್ಲಿ ಸ್ಮೋಕ್ ಮಾಡುವ ಚಟವಿರುತ್ತದೆ. ಇದರಿಂದ ಪಕ್ಕದಲ್ಲಿ ಕುಳಿತವರೊಳಗೂ ವಿಷಗಾಳಿ ಸೇರುತ್ತದೆ. ಬಾರ್, ಪಬ್‌ಗಳಲ್ಲಿ ಸೆಕೆಂಡ್ ಸ್ಮೋಕರ್‌ಗಳಿಗೆ ಇನ್ನೂ ಅಪಾಯ ಕಾದಿರುತ್ತದೆ.

ಕ್ಯಾನ್ಸರ್ ಭೀತಿ: ತಮ್ಮದಲ್ಲದ ತಪ್ಪಿಗೆ ಪರೋಕ್ಷ ಧೂಮಪಾನದಿಂದ, ಯಾವುದೇ ಚಟಗಳಿಲ್ಲದವರೂ ಕ್ಯಾನ್ಸರ್‌ನಂಥ ರೋಗಗಳಿಗೆ ಬಲಿಯಾಗಬಹುದು ಎಂದು ಹಲವು ಸಂಶೋಧನೆಗಳು ಹೇಳಿವೆ. ಧೂಮಪಾನದ ಹೊಗೆಯಲ್ಲಿ ಸುಮಾರು 7000 ರಾಸಾಯನಿಕಗಳಿರುತ್ತವೆ. ಇವುಗಳಲ್ಲಿ 70 ರಾಸಾಯನಿಕಗಳು ಕ್ಯಾನ್ಸರಜನಕವಾಗಿವೆ. ಶ್ವಾಸಕೋಶ, ಕಂಠನಾಳ, ಧ್ವನಿಪೆಟ್ಟಿಗೆ, ಲಿವರ್, ಮೆದುಳು- ಹೀಗೆ ಮುಖ್ಯ ಅಂಗಾಂಗಗಳ ಕ್ಯಾನ್ಸರ್ ಉಂಟಾಗಿರುವುದನ್ನು ವೈದ್ಯ ಸಂಶೋಧಕರು ದೃಢಪಡಿಸಿದ್ದಾರೆ.

ಹೃದ್ರೋಗಗಳು: ಪರೋಕ್ಷ ಧೂಮಪಾನದಿಂದ ರಕ್ತದಲ್ಲಿನ ಪ್ಲೆಟ್ಲೆಟ್ ಕಣಗಳಿಗೆ ತೊಂದರೆಯಾಗುತ್ತದೆ. ಇದರಿಂದ ರಕ್ತ ನಾಳದ ಒಳ ಪದರಕ್ಕೆ ಹಾನಿಯಾಗುತ್ತದೆ. ಹೀಗಾದಾಗ ಹೃದಯಾಘಾತದ ಸಂಭವವೂ ಇರುತ್ತದೆ. ಧೂಮಪಾನಿಗಳಿಗೆ ಇದು ಹೊರತಲ್ಲ. ಆದರೆ ಪರೋಕ್ಷ ಧೂಮಪಾನಕ್ಕೆ ಒಳಗಾಗುವವರಿಗೆ ಇದು ಫ್ರೀ ಗಿಫ್ಟ್!

ಮಕ್ಕಳಿಗೂ ಎಫೆಕ್ಟ್: ಮಕ್ಕಳಿರುವ ಸ್ಥಳದಲ್ಲಿ ಧೂಮಪಾನ ಮಾಡಲೇಬಾರದು. ಮೇಲೆಲ್ಲ ತಿಳಿಸಿದ ರೋಗಗಳಲ್ಲದೆ, ಮಕ್ಕಳ ಮನಸ್ಸನ್ನೂ ಇದು ಕಲ್ಮಶಗೊಳಿಸುತ್ತದೆ. ನವಜಾತ ಶಿಶುಗಳಿಗೆ ಪ್ರಾಣಕ್ಕೇ ತೊಂದರೆ ಆಗಬಹುದು. ಇದನ್ನು ವೈದ್ಯಶಾಸ್ತ್ರದಲ್ಲಿ ‘ಸಡನ್ ಇನ್ಪಾಂಟ್‌ಡೆತ್ ಸಿಂಡ್ರೋಮ್’ ಎಂದು ಹೆಸರಿಸಲಾಗಿದೆ. ಮಕ್ಕಳಲ್ಲಿ ಶ್ವಾಸಕೋಶದ ತೊಂದರೆಗಳಲ್ಲದೆ, ನ್ಯುಮೋನಿಯಾ, ಬ್ರೋಂಕೈಟಿಸ್, ಅಸ್ತಮಾ ಕಾಡಬಹುದು.

ಕಾನೂನು ಏನು ಹೇಳುತ್ತೆ?: ದೇಶದಲ್ಲಿ ಮೊದಲ ಬಾರಿಗೆ (1999) ಕೇರಳದಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಧೂಮಪಾನ ಮಾಡುವುದನ್ನು ನಿಷೇಧಿಸಲಾಯಿತು. ನಂತರ ಚಂಡಿಗಢದಲ್ಲಿ ಹಾಗೂ ಕೆಲವು ವರ್ಷಗಳ ಬಳಿಕ, ದೇಶಾದ್ಯಂತ ನಿಷೇಧಿಸಲಾಗಿದೆ. ಸಾಧ್ಯವಾದಷ್ಟು ಆಪ್ತವಲಯದಲ್ಲಿನ ಧೂಮಪಾನಿಗಳನ್ನು ಈ ಚಟದಿಂದ ದೂರವಿರುವಂತೆ ಪ್ರೇರೇಪಿಸಿ. ನಿಮ್ಮ ಸುತ್ತಮುತ್ತಲಿನಲ್ಲಿ ಯಾರೇ ಧೂಮಪಾನ ಮಾಡುತ್ತಿದ್ದರೂ ಅವರನ್ನೂ ಎಚ್ಚರಿಸಿ.