ವಾಯುಭಾರ ಕುಸಿತ: ಕರಾವಳಿ, ಮಲೆನಾಡಲ್ಲಿ ಮತ್ತೆ ಭಾರಿ ಮಳೆ ಭೀತಿ

ಇಂದು ಕರಾವಳಿ, ಮಲೆನಾಡಲ್ಲಿ ಭಾರಿ ಮಳೆ?| ಮಹಾರಾಷ್ಟ್ರ, ಛತ್ತೀಸ್‌ಗಢದಲ್ಲಿ ವಾಯುಭಾರ ಕುಸಿತ ಹಿನ್ನೆಲೆ| ಉತ್ತರ ಕರ್ನಾಟಕದಲ್ಲೂ ಭಾರಿ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

Sea Depression Heavy Rain To Lash Again On Coastal Karnataka And Malnad

ಬೆಂಗಳೂರು[ಆ.14]: ಮಹಾರಾಷ್ಟ್ರ ಮತ್ತು ಛತ್ತೀಸ್‌ಗಢದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳು ಸೇರಿದಂತೆ ಉತ್ತರ ಕರ್ನಾಟಕದ ಐದು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಕಳೆದ ವಾರ ಸುರಿದ ಭಾರೀ ಮಳೆಯಿಂದ ತತ್ತರಿಸಿ ಹೋಗಿದ್ದ ಕರಾವಳಿ, ಮಲೆನಾಡು ಜಿಲ್ಲೆಗಳು, ಕೃಷ್ಣಾ ಮತ್ತು ಭೀಮಾ ನದಿಯ ಪ್ರವಾಹಕ್ಕೆ ಸಿಲುಕಿದ್ದ ಬೀದರ್‌, ಕಲಬುರಗಿ, ರಾಯಚೂರು, ವಿಜಯಪುರ ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದೆ. ಉಳಿದಂತೆ ದಕ್ಷಿಣ ಒಳನಾಡಿನ ವಿವಿಧ ಜಿಲ್ಲೆಗಳಲ್ಲಿ ಆ.18 ವರೆಗೆ ಮಳೆ ಮುಂದುವರೆಯಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.

ಕರಾವಳಿ ಜಿಲ್ಲೆಗಳಾದ ಉತ್ತರಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಆ.14 ಮತ್ತು 15ರಂದು 115ರಿಂದ 205 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆ ಇದೆ. ಆ.16 ರಿಂದ ಆ.18 ವರೆಗೆ 65ರಿಂದ 115 ಮಿ.ಮೀ ವರೆಗೆ ಮಳೆಯಾಗುವ ಮುನ್ಸೂಚನೆ ಇದೆ. ಮಲೆನಾಡು ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಹಾಗೂ ಹಾಸನ ಜಿಲ್ಲೆಗಳಲ್ಲಿ ಆ.18ರ ವರೆಗೆ 65ರಿಂದ 115 ಮಿ.ಮೀ ವರೆಗೆ ಮಳೆಯಾಗಲಿದೆ. ಹೈದರಬಾದ್‌ ಕರ್ನಾಟಕದ ಬೀದರ್‌, ವಿಜಯಪುರ, ರಾಯಚೂರು, ಕಲಬುರಗಿ ಹಾಗೂ ಯಾದಗಿರಿಯಲ್ಲಿ ಆ.14ರಂದು 65 ರಿಂದ 115 ಮಿ.ಮೀ ವರೆಗೆ ಮಳೆಯಾಗುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಆ.16ರಿಂದ ದಕ್ಷಿಣದಲ್ಲಿ ಮಳೆ ಚುರುಕು:

ಕಳೆದ ವಾರ ಉತ್ತರ ಒಳನಾಡು, ಕರಾವಳಿ ಮತ್ತು ಮಲೆನಾಡಿನಲ್ಲಿ ಮಳೆ ಅಬ್ಬರಿಸಿದರೂ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಸಾಧಾರಣದಿಂದ ಕೂಡಿದ ಹಗುರ ಮಳೆಯಾಗಿತ್ತು. ಇದೀಗ ಮಹಾರಾಷ್ಟ್ರದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ದಕ್ಷಿಣ ಒಳನಾಡು ಜಿಲ್ಲೆಗಳಲ್ಲಿ ಮುಂಗಾರು ಚುರುಕುಗೊಳ್ಳುವುದರ ಜತೆಗೆ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಆ.16 ಮತ್ತು ಆ.17ರ ಎರಡು ದಿನ ದಕ್ಷಿಣ ಒಳನಾಡಿನ ಜಿಲ್ಲೆಗಳಾದ ತುಮಕೂರು, ರಾಮನಗರ, ಮಂಡ್ಯ, ಕೋಲಾರ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಮೈಸೂರು ಹಾಗೂ ಚಾಮರಾಜನಗರ ಜಿಲ್ಲೆಗಳಲ್ಲಿ 65 ರಿಂದ 115 ಮಿ.ಮೀ ವರೆಗೆ ಪ್ರಮಾಣದ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಅತಿ ಹೆಚ್ಚು ಮಳೆ:

ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ದಕ್ಷಿಣ ಕನ್ನಡದ ಮಂಗಳೂರಿನಲ್ಲಿ ಅತಿಹೆಚ್ಚು 14 ಸೆಂ.ಮೀ ಮಳೆಯಾದ ವರದಿಯಾಗಿದೆ. ಉಳಿದಂತೆ ದಕ್ಷಿಣ ಕನ್ನಡದ ಪಣಂಬೂರಿನಲ್ಲಿ 13, ಬಂಟ್ವಾಳದಲ್ಲಿ 12, ಕೊಡಗಿನ ಭಾಗಮಂಡಲದಲ್ಲಿ 10, ಉಡುಪಿಯ ಕೊಲ್ಲೂರು, ಉಡುಪಿ ನಗರ, ಉತ್ತರ ಕನ್ನಡದ ಭಟ್ಕಳದಲ್ಲಿ ತಲಾ 9, ದಕ್ಷಿಣ ಕನ್ನಡದ ಮೂಡುಬಿದರೆ, ಮಂಗಳೂರು ವಿಮಾನ ನಿಲ್ದಾಣ, ಶಿವಮೊಗ್ಗದ ಆಗುಂಬೆಯಲ್ಲಿ ತಲಾ 8, ದಕ್ಷಿಣ ಕನ್ನಡದ ಸುಬ್ರಹ್ಮಣ್ಯ, ಉಡುಪಿಯ ಕಾರ್ಕಳ, ಕುಂದಾಪುರ ಹಾಗೂ ಕೋಟಾದಲ್ಲಿ ತಲಾ 7 ಸೆಂ.ಮೀ ಮಳೆಯಾದ ವರದಿಯಾಗಿದೆ.

ಕಳೆದ 24ಗಂಟೆಯಲ್ಲಿ ಅತಿಹೆಚ್ಚು ಮಳೆಯಾದ ವಿವರ

*ದಕ್ಷಿಣ ಕನ್ನಡದ ಮಂಗಳೂರಿನಲ್ಲಿ 14 ಸೆಂ.ಮೀ

*ದಕ್ಷಿಣ ಕನ್ನಡದ ಪಣಂಬೂರಿನಲ್ಲಿ 13 ಸೆಂ.ಮೀ

*ದಕ್ಷಿಣ ಕನ್ನಡದ ಬಂಟ್ವಾಳದಲ್ಲಿ 12 ಸೆಂ.ಮೀ

*ಕೊಡಗಿನ ಭಾಗಮಂಡಲದಲ್ಲಿ 10 ಸೆಂ.ಮೀ

*ಉಡುಪಿಯ ಕೊಲ್ಲೂರು, ಉಡುಪಿನಗರ, ಉತ್ತರ ಕನ್ನಡದ ಭಟ್ಕಳದಲ್ಲಿ ತಲಾ 9 ಸೆಂ.ಮೀ

*ದಕ್ಷಿಣ ಕನ್ನಡದ ಮೂಡುಬಿದರೆ, ಮಂಗಳೂರು ವಿಮಾನನಿಲ್ದಾಣ, ಶಿವಮೊಗ್ಗದ ಆಗುಂಬೆಯಲ್ಲಿ ತಲಾ 8 ಸೆಂ.ಮೀ

*ದಕ್ಷಿಣ ಕನ್ನಡದ ಸುಬ್ರಹ್ಮಣ್ಯ, ಉಡುಪಿಯ ಕಾರ್ಕಳ, ಕುಂದಾಪುರ ಹಾಗೂ ಕೋಟಾದಲ್ಲಿ ತಲಾ 7 ಸೆಂ.ಮೀ

Latest Videos
Follow Us:
Download App:
  • android
  • ios