ರಾಯಪುರ[ಆ.28]: ಛತ್ತೀಸ್‌ಗಢದ ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ಅವರು ಆದಿವಾಸಿಯೇ ಅಲ್ಲ ಎಂದು ಹೈಕೋರ್ಟ್‌ ನಿರ್ದೇಶನದ ಮೇರೆಗೆ ರಚನೆಯಾಗಿದ್ದ ಉನ್ನತಾಧಿಕಾರ ಸಮಿತಿ ಘೋಷಿಸಿದೆ.

ಅವರ ಬಳಿ ಇರುವ ಆದಿವಾಸಿ ಪ್ರಮಾಣಪತ್ರಗಳನ್ನು ರದ್ದುಗೊಳಿಸುವಂತೆಯೂ ಸೂಚಿಸಿದೆ. ಇದರಿಂದಾಗಿ ಬುಡಕಟ್ಟು ಜನರಿಗೆ ಮೀಸಲಾಗಿದ್ದ ಮಾರ್ವಾಹಿ ಕ್ಷೇತ್ರದಿಂದ 2018ರ ಚುನಾವಣೆಯಲ್ಲಿ ಗೆದ್ದಿದ್ದ ಜೋಗಿ ಅವರು ಶಾಸಕ ಸ್ಥಾನ ಕಳೆದುಕೊಳ್ಳುವ ಸಾಧ್ಯತೆ ಇದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಸೋನಿಯಾ ಹಾಗೂ ರಾಹುಲ್‌ ಅವರಿಗೆ ನಾನು ಬುಡಕಟ್ಟು ಜನಾಂಗದ ವ್ಯಕ್ತಿ ಎಂಬುದು ಗೊತ್ತಿದೆ. ಆದರೆ ಕಾಂಗ್ರೆಸ್‌ ಮುಖ್ಯಮಂತ್ರಿ ಭೂಪೇಶ್‌ ಬಾಘೆಲ್‌ ಅವರಿಗೆ ತಿಳಿದಿಲ್ಲ ಎಂದು ಕಿಡಿಕಾರಿದ್ದಾರೆ. 2016ರಲ್ಲಿ ಕಾಂಗ್ರೆಸ್‌ನಿಂದ ಹೊರಬಂದು ‘ಜನತಾ ಕಾಂಗ್ರೆಸ್‌ ಛತ್ತೀಸ್‌ಗಢ’ ಎಂಬ ಪಕ್ಷವನ್ನು ಜೋಗಿ ಸ್ಥಾಪಿಸಿದ್ದಾರೆ.