ಗುಜರಾತ್ ಚುನಾವಣೆ ಬಳಿಕ ಹೊಸ ಹುರುಪು ಪಡೆದಿರುವ ಕಾಂಗ್ರೆಸ್ ಪಕ್ಷ, ಮುಂಬರುವ ವಿಧಾನಸಭೆ ಚುನಾವಣೆಗಳು ಹಾಗೂ 2019ರ ಲೋಕಸಭೆ ಚುನಾವಣೆಗೆ ಈಗಲೇ ತಯಾರಿ ಆರಂಭಿಸಿದೆ.

ನವದೆಹಲಿ (ಡಿ.26): ಗುಜರಾತ್ ಚುನಾವಣೆ ಬಳಿಕ ಹೊಸ ಹುರುಪು ಪಡೆದಿರುವ ಕಾಂಗ್ರೆಸ್ ಪಕ್ಷ, ಮುಂಬರುವ ವಿಧಾನಸಭೆ ಚುನಾವಣೆಗಳು ಹಾಗೂ 2019ರ ಲೋಕಸಭೆ ಚುನಾವಣೆಗೆ ಈಗಲೇ ತಯಾರಿ ಆರಂಭಿಸಿದೆ. ಹಳೆಯ ವಿಧಾನವನ್ನು ತೊರೆದು, ಅತ್ಯಂತ ವೈಜ್ಞಾನಿಕ ವಿಧಾನದಲ್ಲಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ, ಹುರಿಯಾಳುಗಳ ಹೆಸರನ್ನು ಬೇಗನೆ ಪ್ರಕಟಿಸಲು ಮುಂದಾಗಿದೆ.

ಈ ಹಿಂದೆಲ್ಲಾ ನಾಮಪತ್ರ ಸಲ್ಲಿಕೆ ಅವಧಿಯ ಕೊನೆ ದಿನದವರೆಗೂ ಅಭ್ಯರ್ಥಿ ಹೆಸರನ್ನು ಕಾಂಗ್ರೆಸ್ ಘೋಷಣೆ ಮಾಡುತ್ತಿರಲಿಲ್ಲ. ಅಷ್ಟರಲ್ಲಾಗಲೇ ಎದುರಾಳಿ ಅಭ್ಯರ್ಥಿಗಳು ಪ್ರಚಾರ ಆರಂಭಿಸಿಬಿಡುತ್ತಿದ್ದರು. ಇದರಿಂದ ಪಕ್ಷದ ಅಭ್ಯರ್ಥಿಗೆ ತೊಡಕಾಗುತ್ತಿತ್ತು. ಆದರೆ, ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಉತ್ತಮವಾಗಿದ್ದರೆ ಚುನಾವಣೆ ಗೆಲ್ಲಬಹುದು ಎಂಬ ಸಂದೇಶ ಕಾಂಗ್ರೆಸ್ಸಿಗೆ ಗುಜರಾತ್ ಚುನಾವಣೆಯಲ್ಲಿ ಲಭಿಸಿದೆ. ಹೀಗಾಗಿ ಅದನ್ನು ಇತರೆ ರಾಜ್ಯಗಳಲ್ಲಿ ಅನುಷ್ಠಾನಕ್ಕೆ ತರಲು ಹೊರಟಿದೆ ಎಂದು ಪಕ್ಷದ ನಾಯಕರು ತಿಳಿಸಿದ್ದಾರೆ. ಕಾಂಗ್ರೆಸ್ ಪಾಲಿಗೆ ರಾಜಕೀಯವಾಗಿ ಮತ್ತು ವ್ಯೆಹಾತ್ಮಕವಾಗಿ ಅತ್ಯಂತ ಮಹತ್ವದ್ದಾಗಿರುವ ಕರ್ನಾಟಕ, ಮಧ್ಯಪ್ರದೇಶ, ರಾಜಸ್ಥಾನ ಸೇರಿದಂತೆ 8 ರಾಜ್ಯಗಳಲ್ಲಿ 2018ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ.

ಒಂದೆಡೆ ಕಾಂಗ್ರೆಸ್ ಮುಕ್ತ ಭಾರತ ನಿರ್ಮಾಣದ ಹೆಸರಲ್ಲಿ ಒಂದೊಂದೇ ರಾಜ್ಯಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ, ಈ ಚುನಾವಣೆಗಳು ಕಾಂಗ್ರೆಸ್ ಪಾಲಿಗೆ ಅತ್ಯಂತ ಮಹತ್ವದ್ದು. ಹೀಗಾಗಿ ಈ ಚುನಾವಣೆಗಳನ್ನು ಗೆಲ್ಲುವ ಮೂಲಕ ಮತ್ತೆ ಗೆಲುವಿನ ಹಾದಿಗೆ ಮರಳಲು ಕಾಂಗ್ರೆಸ್ ಇಂಥದ್ದೊಂದು ತಂತ್ರಗಾರಿಕೆಗೆ ಮುಂದಾಗಿದೆ ಎನ್ನಲಾಗಿದೆ.

ಬಲು ದುಬಾರಿ: ಕಾಂಗ್ರೆಸ್ ಬಯಸಿದಂತೆ, ಪ್ರತಿ ಕ್ಷೇತ್ರದಲ್ಲೂ ವೃತ್ತಿಪರರನ್ನು ನಿಯೋಜಿಸಿ ಅಭ್ಯರ್ಥಿ ಆಯ್ಕೆ ಮಾಡಲು ಮುಂದಾದರೆ ತಲಾ 80 ಲಕ್ಷ ರು. ವೆಚ್ಚವಾಗುತ್ತದೆ. ಹೀಗಾಗಿ ಆರಂಭಿಕವಾಗಿ ಆಂತರಿಕ ಅಧ್ಯಯನ ನಡೆಸುವ ಕುರಿತು ಪಕ್ಷ ಆಲೋಚನೆಯಲ್ಲಿ ಇದೆ. ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯನ್ನು ನಿರಂತರವಾಗಿ ಸುಧಾರಿಸಿಕೊಂಡು ಬರುತ್ತಿದ್ದೇವೆ. ಅದನ್ನು ಮತ್ತಷ್ಟು ಸುಧಾರಣೆ ಮಾಡುತ್ತೇವೆ. ಆದಷ್ಟು ಶೀಘ್ರ ಹುರಿಯಾಳುಗಳನ್ನು ಆಯ್ಕೆ ಮಾಡಿ ಪ್ರಚಾರಕ್ಕೆ ಅವರಿಗೆ ಸಮಯ ಲಭ್ಯವಾಗುವಂತೆ ನೋಡಿಕೊಳ್ಳುವುದು ಪ್ರಮುಖ ಉದ್ದೇಶ ಎಂದು ರಾಷ್ಟ್ರೀಯ ವಕ್ತಾರ ಟಾಮ್ ವಡಕ್ಕನ್ ತಿಳಿಸಿದ್ದಾರೆ.