ಸಾರ್ವತ್ರಿಕ ಸಾಲ ಮನ್ನಾ ಯೋಜನೆ

ಕಡಿಮೆ ಆದಾಯ ಹೊಂದಿರುವ ಹಾಗೂ ಸಾಲದ ಸುಳಿಯಲ್ಲಿ ಸಿಲುಕಿರುವ ಬಡವರ ಮೇಲಿನ ಹೊರೆ ತಗ್ಗಿಸಲು ಕೇಂದ್ರ ಸರ್ಕಾರ ‘ಸಾರ್ವತ್ರಿಕ ಸಾಲ ಮನ್ನಾ’ ಯೋಜನೆ ಜಾರಿಗೊಳಿಸುವ ಸಾಧ್ಯತೆ ಇದೆ. ಸಣ್ಣ ಉದ್ದಿಮೆಗಳು, ಸಣ್ಣ ರೈತರು ಹಾಗೂ ಕುಶಲಕರ್ಮಿಗಳಂತಹ ಅಲ್ಪ ಮೊತ್ತದ ಸಾಲ ಮಾಡಿರುವ ವರ್ಗಗಳಿಗೆ ಇದರಿಂದ ಅನುಕೂಲವಾಗಲಿದೆ. ವಾರ್ಷಿಕ 60 ಸಾವಿರ ರು. ಅಥವಾ ಅದಕ್ಕಿಂತ ಕಡಿಮೆ ಆದಾಯ ಹೊಂದಿರುವ, 35 ಸಾವಿರ ರು. ಅಥವಾ ಅದಕ್ಕಿಂತ ಕಡಿಮೆ ಮೊತ್ತದ ಸಾಲ ಹೊಂದಿರುವ ಹಾಗೂ 20 ಸಾವಿರ ರು. ಮೌಲ್ಯದೊಳಗಿನ ಆಸ್ತಿ ಹೊಂದಿರುವವರು ಈ ಯೋಜನೆಯ ಫಲಾನುಭವಿಗಳಾಗುತ್ತಾರೆ.

ಸಣ್ಣ ಉದ್ಯಮಿಗಳಿಗೆ ಖಾತ್ರಿ ರಹಿತ ಸಾಲ

ಸಣ್ಣ ಉದ್ಯಮಿಗಳು ಸಾಲ ಪಡೆಯಲು ಎದುರಿಸುತ್ತಿರುವ ಸಮಸ್ಯೆಯನ್ನು ಹೋಗಲಾಡಿಸಲು, ಅವರಿಗೆ 50 ಲಕ್ಷ ರು.ವರೆಗೆ ಖಾತ್ರಿರಹಿತ ಸಾಲ ಒದಗಿಸುವ ಯೋಜನೆಯೊಂದನ್ನು ಹೊಸ ಸರ್ಕಾರ, ಅಧಿಕಾರಕ್ಕೆ ಬಂದ ಕೂಡಲೇ ಘೋಷಿಸುವ ಸಾಧ್ಯತೆ ಇದೆ. ಇದು ಉದ್ಯೋಗ ಸೃಷ್ಟಿಯ ಜೊತೆಗೆ ಆರ್ಥಿಕತೆ ಚೇತರಿಕೆಗೂ ಕಾರಣವಾಗುವ ಗುರಿಹೊಂದಿದೆ.

ವ್ಯಾಪಾರಿಗಳಿಗೆ ಪಿಂಚಣಿ, ಕ್ರೆಡಿಟ್‌ ಕಾರ್ಡ್‌

ಸಣ್ಣ ಉದ್ಯಮಿಗಳು ಮುಪ್ಪಿನ ಕಾಲದಲ್ಲಿ ಯಾವುದೇ ಆದಾಯ ಹೊಂದದೇ ಎದುರಿಸುವ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಅವರಿಗೆ ಪಿಂಚಣಿ ಯೋಜನೆಯೊಂದನ್ನು ಜಾರಿಗೊಳಿಸಲು ಸರ್ಕಾರ ಈಗಾಗಲೇ ಯೋಜನೆಯೊಂದನ್ನು ರೂಪಿಸಿದೆ ಎನ್ನಲಾಗಿದೆ. ಜೊತೆಗೆ ಸಣ್ಣ ಉದ್ಯಮಿಗಳಿಗೆ ಕ್ರೆಡಿಡ್‌ ಕಾರ್ಡ್‌ ಸೌಲಭ್ಯವನ್ನು ಒದಗಿಸುವ ಗುರಿಯನ್ನೂ ಸರ್ಕಾರ ಹೊಂದಿದೆ.

ಸಣ್ಣ, ಮಧ್ಯಮ ಗಾತ್ರದ ಬ್ಯಾಂಕ್‌ಗಳ ವಿಲೀನ

ಸಣ್ಣ ಮತ್ತು ಮಧ್ಯಮ ಗಾತ್ರದ ಸರ್ಕಾರಿ ಬ್ಯಾಂಕ್‌ಗಳನ್ನು ವಿಲೀನ ಮಾಡಿ ಜಾಗತಿಕ ಮಟ್ಟದ ದೊಡ್ಡ ಬ್ಯಾಂಕ್‌ಗಳ ರಚನೆಯ ಪ್ರಕ್ರಿಯೆಗೆ ಸರ್ಕಾರ ಶೀಘ್ರವೇ ಚಾಲನೆ ನೀಡುವ ಸಾಧ್ಯತೆ ಇದೆ. ಈಗಾಗಲೇ ಎರಡು ಸುತ್ತಿನಲ್ಲಿ ಬ್ಯಾಂಕ್‌ಗಳ ವಿಲೀನ ಪ್ರಕ್ರಿಯೆ ನಡೆದಿದ್ದು, ಮೂರನೇ ಹಂತದ ಪ್ರಕ್ರಿಯೆಗೂ ಚಾಲನೆ ಸಿಕ್ಕಿದೆ. ಈ ಕುರಿತ ಅಧಿಕೃತ ನಿರ್ಧಾರಗಳು, ಹೊಸ ಸರ್ಕಾರದ ಆದ್ಯತೆಯಾಗಿರಲಿವೆ ಎನ್ನಲಾಗಿದೆ.

ಕೃಷಿಕರ ಖಾತೆಗೆ ಸಬ್ಸಿಡಿ ಯೋಜನೆ ವಿಸ್ತರಣೆ

5 ಎಕರೆವರೆಗೆ ಭೂಮಿ ಹೊಂದಿರುವ ರೈತರ ಬ್ಯಾಂಕ್‌ ಖಾತೆಗೆ ವಾರ್ಷಿಕ 6000 ರು. ಜಮೆ ಮಾಡುವ ಯೋಜನೆಯೊಂದನ್ನು ಕೇಂದ್ರ ಸರ್ಕಾರ ಹಿಂದಿನ ಬಜೆಟ್‌ನಲ್ಲಿ ಘೋಷಿಸಿ, ಅದನ್ನು ಜಾರಿಗೆ ಕೂಡ ತಂದಿತ್ತು. ಈ ಯೋಜನೆಯನ್ನು ಇನ್ನಷ್ಟುವಿಸ್ತರಿಸುವ ಮತ್ತು ಇನ್ನಷ್ಟುಆಕರ್ಷಕ ಮಾಡುವ ಉದ್ದೇಶವೂ ಸರ್ಕಾರಕ್ಕೆ ಇದೆ. ಈ ಕುರಿತು ಘೋಷಣೆಯನ್ನು ನೂತನ ಪ್ರಧಾನಿ ಮಾಡಲಿದ್ದಾರೆ ಎನ್ನಲಾಗಿದೆ.

ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ

ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ ಮಾಡಬೇಕೆಂಬುದು ಮಧ್ಯಮ ವರ್ಗದ ಬಹುದಿನದ ಬೇಡಿಕೆ. ಇಂಥದ್ದೊಂದು ಬೇಡಿಕೆಗಳ ಬಗ್ಗೆ ನೂತನ ಸರ್ಕಾರ ಗಮನ ಹರಿಸಬಹುದು ಎಂಬ ವಿಶ್ವಾಸವಿದೆ. ಜನರ ಆದಾಯ ಹೆಚ್ಚಿರುವ ಹಿನ್ನೆಲೆಯಲ್ಲಿ ಸಣ್ಣ ಪ್ರಮಾಣದಲ್ಲಿ ಆದಾಯ ತೆರಿಗೆ ವಿನಾಯ್ತಿ ಮಿತಿ ಹೆಚ್ಚಳ ಮಾಡುವುದು ಸರ್ಕಾರಕ್ಕೂ ಹೆಚ್ಚಿ ಹೊರೆ ತರದು. ಹೀಗಾಗಿ ಸರ್ಕಾರ ಈ ನಿಟ್ಟಿನಲ್ಲಿ ನಿರ್ಧಾರ ಕೈಗೊಳ್ಳಬಹುದು ಎನ್ನಲಾಗಿದೆ.