1992ರಲ್ಲಿ ಕರಸೇವಕರು ಅಯೋಧ್ಯೆಯಲ್ಲಿ ಧ್ವಂಸಗೊಳಿಸಿದ ಬಾಬ್ರಿ ಮಸೀದಿ ಸ್ಥಳದಲ್ಲಿ ಶೀಘ್ರವಾಗಿ ರಾಮಮಂದಿರ ನಿರ್ಮಿಸಲು ಸುಪ್ರೀಂ ಕೋರ್ಟ್ ಅನುವು ಮಾಡಿಕೊಡಬೇಕೆಂದು ಸ್ವಾಮಿ ಕೇಳಿಕೊಂಡಿದ್ದಾರೆ.
ನವದೆಹಲಿ (ನ.18): ರಾಮಮಂದಿರ ನಿರ್ಮಾಣ ಕುರಿತಾಗಿ ಬಿಜೆಪಿ ಹಿರಿಯ ನಾಯಕ ಸುಬ್ರಮಣಿಯನ್ ಸ್ವಾಮಿ ಸಲ್ಲಿಸಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್ ಒಪ್ಪಿದೆ.
ಸುಪ್ರೀಂ ಕೋರ್ಟ್ ಮುಂದಿನ ವಾರ ಸ್ವಾಮಿ ಅರ್ಜಿಯನ್ನು ವಿಚಾರಣೆಗಾಗಿ ಕೈಗೆತ್ತಿಕೊಳ್ಳಲಿದೆ. 1992ರಲ್ಲಿ ಕರಸೇವಕರು ಅಯೋಧ್ಯೆಯಲ್ಲಿ ಧ್ವಂಸಗೊಳಿಸಿದ ಬಾಬ್ರಿ ಮಸೀದಿ ಸ್ಥಳದಲ್ಲಿ ಶೀಘ್ರವಾಗಿ ರಾಮಮಂದಿರ ನಿರ್ಮಿಸಲು ಸುಪ್ರೀಂ ಕೋರ್ಟ್ ಅನುವು ಮಾಡಿಕೊಡಬೇಕೆಂದು ಅವರು ಕೇಳಿಕೊಂಡಿದ್ದಾರೆ.
ಸೆಪ್ಟಂಬರ್ 2010ರಲ್ಲಿ ರಾಮಮಂದಿರ-ಬಾಬ್ರಿ ಮಸೀದಿ ವಿವಾದವನ್ನು ಆಲಿಸಿದ್ದ ಅಲಹಾಬಾದ್ ಹೈಕೋರ್ಟ್’ನ ಲಕ್ನೋ ವಿಭಾಗೀಯ ಪೀಠವು, ತಾತ್ಕಾಲಿಕವಾಗಿ ನಿರ್ಮಿಸಿರುವ ಮಂದಿರದ ಸ್ಥಳದಲ್ಲೇ ರಾಮ ಜನಿಸಿದ್ದನು ಹಾಗೂ ಹಿಂದೂ ಧರ್ಮೀಯರಿಗೆ ಅಲ್ಲಿ ಪ್ರಾರ್ಥನೆ ಸಲ್ಲಿಸುವ ಹಕ್ಕಿದೆ ಎಂದು ತೀರ್ಪಿತ್ತಿತು. ಬಳಿಕ ಸುಪ್ರೀಂ ಕೋರ್ಟ್ ಅದಕ್ಕೆ ತಡಯಾಜ್ಞೆ ನೀಡಿದೆ.
ದೀರ್ಘಕಾಲದಿಂದ ಪ್ರಕರಣಗಳು ಬಾಕಿಯಿರುವುದರಿಂದ, ಪ್ರಾರ್ಥನೆ ಸಲ್ಲಿಸುವ ಮೂಲಭೂತ ಹಕ್ಕುಗಳನ್ನು ಮೊಟಕುಗೊಳಿಸಿದಂತಾಗಿದೆ ಎಂದು ಸ್ವಾಮಿ ತಮ್ಮ ಅರ್ಜಿಯಲ್ಲಿ ಹೇಳಿದ್ದಾರೆ.
