ಬದುಕಿ ಮತ್ತು ಬದುಕಲು ಬಿಡಿ ಎಂಬ ತತ್ವದ ಮೇಲೆ ನಂಬಿಕೆಯಿಡಿ. ಕಾವೇರಿ ನೀರನ್ನು ನೀವೂ ಬಳಸಿ, ತಮಿಳುನಾಡಿಗೂ ನೀಡಿ ಎಂದು ಸುಪ್ರೀಂಕೋರ್ಟ್ ಕರ್ನಾಟಕಕ್ಕೆ ಸಲಹೆ ನೀಡಿದೆ.
ಅರ್ಜಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿ, ಎಷ್ಟು ನೀರನ್ನು ತಮಿಳು ನಾಡಿಗೆ ಬಿಡಬಹುದು ಎಂದು ನ್ಯಾಯಾಲಯಕ್ಕೆ ತಿಳಿಸಬೇಕೆಂದು ಹೇಳಿದೆ. ಸೋಮವಾರ ವಿವಾದದ ಬಗ್ಗೆ ವಿಸ್ತೃತ ಚರ್ಚೆ ನಡೆಸಿ ತೀರ್ಮಾನ ನೀಡಲಿದೆ. ನೀರಿನ ವಿವಾದದಲ್ಲಿ ಎರಡೂ ರಾಜ್ಯಗಳು ಪರಸ್ಪರ ಸಹಕಾರ ನೀಡಬೇಕು.
ತಮಿಳು ನಾಡಿನಲ್ಲಿ ಬೆಳೆಗೆ ನೀರು ಕಡಿಮೆಯಾಗಿರುವಾಗ ಕರ್ನಾಟಕ ಬಿಡುಗಡೆ ಮಾಡಬೇಕು ಎಂದು ಕೋರ್ಟ್ ಹೇಳಿದೆ. ತನ್ನ ಜಲಾಶಯದಿಂದ ಹೆಚ್ಚುವರಿ ಕಾವೇರಿ ನೀರನ್ನು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ಆದೇಶ ನೀಡಬೇಕೆಂದು ತಮಿಳುನಾಡು ಸರ್ಕಾರ ಸಲ್ಲಿಸಿದ್ದ ತುರ್ತು ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ ಈ ಸಲಹೆ ನೀಡಿದೆ.
ತಮಿಳುನಾಡಿನಲ್ಲಿ ಬೆಳೆದು ನಿಂತಿರುವ ಸಾಂಬಾ ಬೆಳೆಗೆ ನೀರುಣಿಸಲು ಕನಿಷ್ಠ 25 ಸಾವಿರ ದಶಲಕ್ಷ ಕ್ಯೂಬಿಕ್ ಅಡಿ ನೀರನ್ನು ಬಿಡುಗಡೆ ಮಾಡಲು ಕರ್ನಾಟಕಕ್ಕೆ ಆದೇಶ ನೀಡುವಂತೆ ಮಧ್ಯಂತರ ಆದೇಶ ತರಬೇಕೆಂದು ತಮಿಳುನಾಡು ಅರ್ಜಿಯಲ್ಲಿ ಕೋರಿತ್ತು.
ಆದರೆ ಜಲಾಶಯದಲ್ಲಿ ನೀರು ಕಡಿಮೆಯಿರುವುದರಿಂದ ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಕರ್ನಾಟಕ ಸುಪ್ರೀಂ ಕೋರ್ಟ್ ಗೆ ಹೇಳಿತ್ತು. ವಾದ ಪ್ರತಿವಾದ ಕೇಳಿದ ಸುಪ್ರೀಂ ಕೋರ್ಟ್ ಸೆ.5ಕ್ಕೆ ವಿಚಾರಣೆ ಮುಂದೂಡಿದೆ.
