ರಾಷ್ಟ್ರಗೀತೆ ಪ್ರಸಾರದಿಂದ ಜನರು ಗೌರವ ತೋರಿಸಲು ಆರಂಭಿಸಿದರೆ, ದೇಶಭಕ್ತಿಯ ಭಾವನೆ ಬೆಳೆಸಿದಂತಾಗುತ್ತದೆ ಎಂಬುದು ಸುಪ್ರೀಂ ಅಭಿಪ್ರಾಯ.

ನವದೆಹಲಿ(ನ. 30): ಎರಡು ದಶಕಗಳ ಬಳಿಕ ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರದರ್ಶನವನ್ನು ಮತ್ತೆ ಕಾಣಬಹುದಾಗಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನಕ್ಕೆ ಮುನ್ನ ರಾಷ್ಟ್ರಗೀತೆ ಪ್ರಸಾರ ಕಡ್ಡಾಯ ಎಂದು ಸುಪ್ರೀಂಕೋರ್ಟ್ ಬುಧವಾರ ಆದೇಶಿಸಿದೆ. ರಾಷ್ಟ್ರಗೀತೆ ಪ್ರಸಾರದ ಜೊತೆಗೆ ಪರದೆಯ ಮೇಲೆ ರಾಷ್ಟ್ರಧ್ವಜದ ಪ್ರದರ್ಶನವಾಗಬೇಕು. ಈ ವೇಳೆ ಥಿಯೇಟರ್'ವೊಳಗಿರುವ ಪ್ರತಿಯೊಬ್ಬರೂ ಎದ್ದು ನಿಲ್ಲುವ ಮೂಲಕ ಗೌರವ ಸಲ್ಲಿಸಬೇಕು ಎಂದು ಸರ್ವೋಚ್ಚ ನ್ಯಾಯಾಲಯ ಸೂಚಿಸಿದೆ.

ಕಳೆದ ಶತಮಾನದ 60ರ ದಶಕದಿಂದ 80ರ ದಶಕದವರೆಗೂ ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರದರ್ಶನ ಕಡ್ಡಾಯವಾಗಿತ್ತು. ಆದರೆ, 90ರ ದಶಕದಲ್ಲಿ ಈ ಪದ್ದತಿ ತನ್ನಷ್ಟಕ್ಕೇ ನಿಂತುಹೋಗಿತ್ತು. ಇತ್ತೀಚೆಗೆ, ಭೋಪಾಲ್'ನ ಎನ್'ಜಿಓ ಮಾಲಕ ಶ್ಯಾಮ್ ನಾರಾಯಣ್ ಚೌಸಕಿ ಎಂಬುವರು ರಾಷ್ಟ್ರಗೀತೆಗೆ ಅಗೌರವ ಹೆಚ್ಚುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿ ಸುಪ್ರೀಂಕೋರ್ಟ್'ಗೆ ಮೊರೆ ಹೋಗಿದ್ದರು.

ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಸಿನಿಮಾ ಮಂದಿರಗಳಲ್ಲಿ ರಾಷ್ಟ್ರಗೀತೆ ಪ್ರಸಾರ ಕಡ್ಡಾಯಗೊಳಿಸಿ ತೀರ್ಪು ಹೊರಡಿಸಿದೆ. ರಾಷ್ಟ್ರಗೀತೆ ಪ್ರಸಾರದಿಂದ ಜನರು ಗೌರವ ತೋರಿಸಲು ಆರಂಭಿಸಿದರೆ, ದೇಶಭಕ್ತಿಯ ಭಾವನೆ ಬೆಳೆಸಿದಂತಾಗುತ್ತದೆ ಎಂಬುದು ಸುಪ್ರೀಂ ಅಭಿಪ್ರಾಯ.

ಕೋರ್ಟ್ ಅದೇಶದ ಮುಖ್ಯಾಂಶಗಳು:
* ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನದ ಮುನ್ನ ರಾಷ್ಟ್ರಗೀತೆ ಪ್ರಸಾರ ಕಡ್ಡಾಯ
* ರಾಷ್ಟ್ರಗೀತೆ ಪ್ರಸಾರವಾಗುವಾಗ ಪರದೆ ಮೇಲೆ ರಾಷ್ಟ್ರಧ್ವಜ ಪ್ರದರ್ಶನ ಕಡ್ಡಾಯ
* ರಾಷ್ಟ್ರಗೀತೆ ಪ್ರಸಾರವಾಗುವಾಗ ಚಿತ್ರಮಂದಿರದೊಳಗಿರುವ ಪ್ರತಿಯೊಬ್ಬ ವ್ಯಕ್ತಿಯೂ ಎದ್ದು ನಿಂತು ಗೌರವ ನೀಡಬೇಕು.
* ರಾಷ್ಟ್ರಗೀತೆಗೆ ಗೌರವ ತೋರಿದರೆ ಅದರಿಂದ ದೇಶಭಕ್ತಿಯ ಭಾವನೆಗೆ ಪುಷ್ಟಿ ಸಿಕ್ಕಂತಾಗುತ್ತದೆ
* ರಾಷ್ಟ್ರಗೀತೆಯನ್ನು ವಾಣಿಜ್ಯಾತ್ಮಕವಾಗಿ ಬಳಸಬಾರದು
* ರಾಷ್ಟ್ರಗೀತೆಯನ್ನು ವಿಜೃಂಬಿಸುವ ಅಗತ್ಯವಿಲ್ಲ