ಬೆಂಗಳೂರು (ಜೂ.7) :  ಸಾಮಾನ್ಯವಾಗಿ ನಿಮ್ಮ ಆತ್ಮೀಯರು, ಸ್ನೇಹಿತರು, ಸಂಬಂಧಿಗಳು ನಿಮ್ಮ ಎಟಿಎಂ ಬಳಕೆ ಮಾಡಿಕೊಂಡು ಹಣವನ್ನು ವಿತ್ ಡ್ರಾ ಮಾಡಿಕೊಳ್ಳಲು ನೀವು ಎಷ್ಟೋ ಬಾರಿ ಹೇಳಿರುತ್ತೀರಿ. ಆದರೆ ನೀವು ಎಸ್ ಬಿಐ ಗ್ರಾಹಕರಾಗಿದ್ದಲ್ಲಿ ಅದು ಸಾಧ್ಯವಾಗುವುದಿಲ್ಲ.  ಎಟಿಎಂಗೆ ಸ್ವತಃ ಖಾತೆದಾರರೇ ತೆರಳಿ ಹಣವನ್ನು ಡ್ರಾ ಮಾಡಲು ಮಾತ್ರವೇ  ಅನುಮತಿ ಇದೆ. 

ಬೆಂಗಳೂರಿನ ಮಹಿಳೆಯೋರ್ವರು ಈ ನಿಟ್ಟಿನಲ್ಲಿ ಕೋರ್ಟ್ ಮೆಟ್ಟಿಲೇರಿದ್ದು, ಡೆಬಿಟ್ ಕಾರ್ಡ್ ಬಳಕೆ ಮಾಡಿಕೊಳ್ಳಲು ಸಂಬಂಧಿಗಳಿಗೆ ಅವಕಾಶ ನೀಡುವುದಿಲ್ಲ ಎನ್ನುವ ಎಸ್ ಬಿಐ ನಿಯಮಕ್ಕೆ ಕೋರ್ಟ್ ಕೂಡ ಅಂಕಿತ ನೀಡಿದೆ. 

ಬೆಂಗಳೂರಿನ ಮಾರತ್ ಹಳ್ಳಿಯ ವಂದನಾ ಎನ್ನುವ ಮಹಿಳೆ ಆಗಷ್ಟೇ ಮಗುವಿಗೆ ಜನ್ಮ ನೀಡಿದ್ದು, ಅವರು ಮನೆಯಿಂದ ಹೊರಬರಲು ಆಗದ ಕಾರಣ ತಮ್ಮ ಎಟಿಎಂ ಹಾಗೂ ಅದರ ಪಿನ್ ನಂಬರ್ ಕೊಟ್ಟು ತಮ್ಮ ಪತಿಗೆ ಹಣವನ್ನು ಡ್ರಾ ಮಾಡಿ ತರಲು ಹೇಳಿದ್ದರು. ಆದರೆ ಎಟಿಎಂ ನಲ್ಲಿ ಎಷ್ಟು ಬಾರಿ ಆಕೆಯ ಪತಿ ರಾಜೇಶ್ ಅವರು ಹಣವನ್ನು ಡ್ರಾ ಮಾಡಲು ಯತ್ನಿಸಿದರೂ ಕೂಡ ಅದು ಸಾಧ್ಯವಾಗಲಿಲ್ಲ. 

ಹಣ ಖಾತೆಯಿಂದ ಡೆಬಿಟ್ ಆಗಿದೆ ಎಂದು ಎಟಿಎಂನಲ್ಲಿ ಸ್ಲಿಪ್ ದೊರೆತಿದ್ದರೂ ಹಣ ಮಾತ್ರ ಬಂದಿರಲಿಲ್ಲ. ಈ ಸಂಬಂಧ ಕೊನೆಗೆ  ಇಬ್ಬರೂ ಕೂಡ ಕನ್ಸೂಮರ್ ಕೋರ್ಟ್ ಮೊರೆ ಹೋಗಿದ್ದರು. ಆದರೆ ಈ ದಂಪತಿಯ ಅರ್ಜಿಯನ್ನು ಕೋರ್ಟ್ ತಿರಸ್ಕಾರ ಮಾಡಿ, ಬ್ಯಾಂಕ್  ನಿಯಮವನ್ನೇ ಎತ್ತಿ ಹಿಡಿದಿದೆ. 

ಒಂದು ವೇಳೆ ಬೇರೆಯವರು ನಿಮ್ಮ ಖಾತೆಯಿಂದ ಹಣವನ್ನು ಡ್ರಾ ಮಾಡುವುದಾದಲ್ಲಿ  ಸೆಲ್ಫ್ ಚೆಕ್ ಅಥವಾ ಅಧಿಕೃತವಾಗಿ ಪತ್ರವನ್ನು ನೀಡಬೇಕು ಎಂದು ಕೋರ್ಟ್ ಹೇಳಿದ್ದಾಗಿ ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.