ಶಿವಮೊಗ್ಗ[ಜೂ. 27]  ಶರಾವತಿ ನದಿ ನೀರನ್ನು ಬೆಂಗಳೂರಿಗೆ ಹರಿಸುವ ವಿಚಾರದ ವಿರುದ್ಧ ಹೋರಾಟ ಜೋರಾಗುತ್ತಿದೆ. ತಾಲೂಕು ಕೇಂದ್ರ, ಹೋಬಳಿ ಕೇಂದ್ರ, ಕೆಲವು ಹಳ್ಳಿಗಳಲ್ಲಿ ಹೋರಾಟದ ಕೂಗು ಕೇಳಿ ಬರುತ್ತಿದೆ. ಸರ್ಕಾರಕ್ಕೆ ಅರ್ಪಿಸುತ್ತಿರುವ ಮನವಿ ಪತ್ರಗಳ ಸಂಖ್ಯೆ ನೂರಕ್ಕೂ ಅಧಿಕವಾಗಿವೆ. ವಿವಿಧ ಸಂಘಟನೆಗಳ ಜೊತೆಗೆ ರಾಜಕೀಯ ಪಕ್ಷಗಳು ಕೂಡ ಹೋರಾಟಕ್ಕೆ ಬೆಂಬಲ ಘೋಷಿಸಿವೆ.

ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ, ಕೆ. ಎಸ್. ಈಶ್ವರಪ್ಪ ತಮ್ಮ ಬೆಂಬಲ ಘೋಷಿಸಿದ್ದರೆ, ಇತ್ತ ಕಾಂಗ್ರೆಸ್ ಮತ್ತು ಜೆಡಿಎಸ್ ಕೂಡ ತಮ್ಮ ಬೆಂಬಲವನ್ನು ಘೋಷಿಸಿದ್ದು, ಯಾವುದೇ ಕಾರಣಕ್ಕೂ ನೀರು ಕೊಂಡೊಯ್ಯಬಾರದು ಎಂದು ಒತ್ತಾಯಿಸಿವೆ. ರೈತಸಂಘದ ಎರಡೂ ಬಣಗಳು ಮತ್ತು ದಲಿತ ಸಂಘರ್ಷ ಸಮಿತಿ ಕೂಡ ಈ ಹೋರಾಟಕ್ಕೆ ಕೈ ಜೋಡಿಸಿವೆ.

ಇನ್ನೊಂದೆಡೆ ಕನ್ನಡಪರ ಸಂಘಟನೆಗಳು ತಾವು ಜೊತೆಗಿದ್ದೇವೆ ಎಂದು ಹೇಳಿವೆ. ಜೊತೆಗೆ ವಿವಿಧ ಸ್ವಾಮೀಜಿಗಳು, ಮಠ ಮಂದಿರಗಳು ತಮ್ಮ ಬೆಂಬಲ ಘೋಷಿಸಿದ್ದಾರೆ. ಬಹುತೇಕ ಮಲೆನಾಡಿನ ಇತ್ತೀಚಿನ ಹೋರಾಟಗಳಲ್ಲಿ ಈ ರೀತಿಯ ಒಕ್ಕೊರಲ ಧ್ವನಿ ಮೂಡಿರುವುದು ಬಹುತೇಕ ಇದೇ ಮೊದಲು ಎನ್ನಬಹುದಾಗಿದ.

ಈ ಸಂಬಂಧ ಜು. 10 ರಂದು ಜಿಲ್ಲಾ ಬಂದ್‌ಗೆ ಕರೆ ನೀಡಲಾಗಿದೆ. ಈ ಬಂದ್‌ಗೆ ಕೂಡ ಎಲ್ಲ ರಾಜಕೀಯ ಪಕ್ಷಗಳು, ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿ ಹೇಳಿಕೆ ನೀಡಿವೆ.

ಹೋರಾಟವನ್ನು ತೀವ್ರಗೊಳಿಸುವ ಸಂಬಂಧ ಮತ್ತು ಎಲ್ಲ ವರ್ಗವನ್ನು ಸೇರಿಸಿಕೊಳ್ಳುವ ಸಂಬಂಧ ಹಿರಿಯ ಸಾಹಿತಿ ನಾ. ಡಿಸೋಜಾ ನೇತೃತ್ವದ ಹೋರಾಟ ಸಮಿತಿಯು ವಿವಿಧ ತಾಲೂಕುಗಳಿಗೆ ಭೇಟಿ ನೀಡಿ ಹೋರಾಟಕ್ಕೆ ಬೆಂಬಲ ಕೋರಿಕೊಳ್ಳುತ್ತಿಿವೆ.

ಸಾಮಾಜಿಕ ಜಾಲತಾಣಗಳ ವ್ಯಾಪಕ ಬಳಕೆ: ಇದೇ ಮೊದಲ ಬಾರಿಗೆ ಸಾಮಾಜಿಕ ಜಾಲತಾಣವನ್ನು ಈ ಹೋರಾಟವನ್ನು ಸಂಘಟಿಸಲು ಮತ್ತು ಜನ ಜಾಗೃತಿ ಮೂಡಿಸಲು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ. ಫೇಸ್‌ಬುಕ್‌ನಲ್ಲಿ ಪ್ರತ್ಯೇಕ ಪೇಜ್ ರೂಪಿಸಲಾಗಿದ್ದು, ಹ್ಯಾಷ್‌ಟ್ಯಾಗ್ ಜೊತೆಗೆ ವಿಚಾರಗಳನ್ನು ಕಳುಹಿಸಲಾಗುತ್ತಿದೆ. ಇದೇ ರೀತಿ ವಾಟ್ಸಾಪ್‌ಗಳಲ್ಲಿ ಕೂಡ ಗುಂಪುಗಳನ್ನು ಮಾಡಿಕೊಂಡು ‘ಸೇವ್ ಶರಾವತಿ’ ಹೆಸರಿನಲ್ಲಿ ಸಂಘಟಿಸಲಾಗುತ್ತಿದೆ.

ಯೂಟ್ಯೂಬ್‌ಗಳನ್ನು ಸಮರ್ಥವಾಗಿ ಬಳಕೆ ಮಾಡಿಕೊಳ್ಳಲಾಗುತ್ತಿದೆ. ಮಹಿಳೆಯರು ಸೇರಿದಂತೆ ಅನೇಕರು ಯೂ ಟ್ಯೂಬ್‌ಗಳಲ್ಲಿ ಶರಾವತಿ ನದಿ, ಈ ಯೋಜನೆ, ಇದರಿಂದ ಆಗಬಹುದಾದ ಅನಾಹುತ ಕುರಿತು ಮಾಹಿತಿ ಹಂಚಿಕೊಳ್ಳುತ್ತಿದ್ದಾರೆ.

ಮನೆ ಮನೆಗೆ ಸ್ಟಿಕರ್: ಶರಾವತಿ ಉಳಿಸಿ ಹೋರಾಟದ ಕುರಿತು ಜಾಗೃತಿ ಮೂಡಿಸುವ ಸಂಬಂಧ ಮನೆಗಳ ಗೋಡೆಗಳ ಮೇಲೆ ಸ್ಟಿಕ್ಕರ್ ಅಂಟಿಸುವ ಅಭಿಯಾನ ಆರಂಭಗೊಂಡಿದೆ. ಜನರು ಇದನ್ನು ಸ್ವೀಕರಿಸುತ್ತಿದ್ದು, ತಮ್ಮ ಮನೆಯ ಗೋಡೆಯ ಮೇಲೆ ‘ಶರಾವತಿ ಉಳಿಸಿ’ ಸ್ಟಿಕ್ಕರ್ ಅಂಟಿಸಿಕೊಳ್ಳುತ್ತಿದ್ದಾರೆ.