ಕಂಬಳ ಕಲಹ ಸದ್ಯ ಹೈಕೋರ್ಟ್ ಅಂಗಳದಲ್ಲಿದೆ. ಇತ್ತ ತೀರ್ಪಿಗೂ ಮುನ್ನವೇ ರಾಜ್ಯದಲ್ಲಿ ಕರಾವಳಿ ಕ್ರೀಡೆ ಪರವಾಗಿ ಕೂಗು ಜೋರಾಗಿದೆ. ಸುವರ್ಣ ನ್ಯೂಸ್ ಆರಂಭಿಸಿದ ಕಾಪಾಡಿ ಕಂಬಳ ಅಭಿಯಾನಕ್ಕೆ ಸ್ವಾಮೀಜಿಗಳು ದನಿಗೂಡಿಸಿದ್ದಾರೆ.
ಬೆಂಗಳೂರು(ಜ.25): ಕಂಬಳ ಕಲಹ ಸದ್ಯ ಹೈಕೋರ್ಟ್ ಅಂಗಳದಲ್ಲಿದೆ. ಇತ್ತ ತೀರ್ಪಿಗೂ ಮುನ್ನವೇ ರಾಜ್ಯದಲ್ಲಿ ಕರಾವಳಿ ಕ್ರೀಡೆ ಪರವಾಗಿ ಕೂಗು ಜೋರಾಗಿದೆ. ಸುವರ್ಣ ನ್ಯೂಸ್ ಆರಂಭಿಸಿದ ಕಾಪಾಡಿ ಕಂಬಳ ಅಭಿಯಾನಕ್ಕೆ ಸ್ವಾಮೀಜಿಗಳು ದನಿಗೂಡಿಸಿದ್ದಾರೆ.
ಕಂಬಳ ಹೋರಾಟಕ್ಕೆ ಸ್ವಾಮೀಜಿಗಳ ಬಲ
ಕರಾವಳಿಯ ಜಾನಪದ ಕ್ರೀಡೆ ಕಾಪಾಡಿ ಕಂಬಳ ಅಭಿಯಾನಕ್ಕೆ ದಿನದಿಂದ ದಿನಕ್ಕೆ ಬೆಂಬಲ ಹೆಚ್ಚುತ್ತಿದೆ. ಜನವರಿ 28 ರಂದು ಮೂಡಬಿದಿರೆಯಲ್ಲಿ ನಡೆಯುವ ಹೋರಾಟ ಯಶಸ್ವಿ ಗೊಳಿಸಲು ಇವತ್ತು ಸಂಸದ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಚರ್ಚಿಸಲಾಗಿದೆ. ಖಾಸಗಿ ಹೋಟೆಲ್ನಲ್ಲಿ ನಡೆದ ಸಭೆಯಲ್ಲಿ ತುಳು ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು. ಸಭೆಯಲ್ಲಿ ಜನವರಿ 27ರಂದು ಮಂಗಳೂರಲ್ಲಿ ಬೃಹತ್ ಮಾನವ ಸರಪಳಿ ನಡೆಸಲು ತೀರ್ಮಾನಿಸಲಾಗಿದೆ.
ಇನ್ನೊಂದೆಡೆ ಕಂಬಳ ಕ್ರೀಡೆ ನಿಷೇಧ ತೆರವಿಗೆ ಆಗ್ರಹಿಸಿ ಮಂಗಳೂರಲ್ಲಿ ಮಿನಿ ವಿಧಾನಸೌಧದ ಮುಂದೆ ಪ್ರತಿಭಟನೆ ನಡೆದಿದೆ. ಇತ್ತ ಮೈಸೂರಲ್ಲಿ ಸಿಎಂ ಸಿದ್ದರಾಮಯ್ಯ ಕಂಬಳ ವಿಚಾರದಲ್ಲಿ ಅಗತ್ಯಬಿದ್ದರೆ ಸುಗ್ರೀವಾಜ್ಞೆ ಹೊರಡಿಸಲು ಸರ್ಕಾರ ಸಿದ್ಧ ಎಂದರು. ಈ ಮಧ್ಯೆ ಕಾಪಾಡಿ ಕಂಬಳ ಪರ ಸ್ವಾಮೀಜಿಗಳು ದನಿಗೂಡಿಸಿದ್ದಾರೆ. ಉಡುಪಿಯಲ್ಲಿ ಪೇಜಾವರ ಶ್ರೀಗಳು ಹಿಂಸಾರಹಿತ ಕಂಬಳಕ್ಕೆ ನನ್ನ ಬೆಂಬಲವಿದೆ ಎಂದಿದ್ದಾರೆ. ಇನ್ನೂ ರಾಮಚಂದ್ರಾಪುರ ಮಠದ ರಾಘವೇಶ್ವರ ಸ್ವಾಮೀಜಿಗಳೂ ಕೂಡ ಜಾನಪದ ಹಾಗೂ ಸಾಂಸ್ಕೃತಿಕ ಪರಂಪರೆ ದೃಷ್ಟಿಯಿಂದ ಕಂಬಳ ಬೇಕು ಎನ್ನುತ್ತಿದ್ದಾರೆ.
ಒಟ್ಟಿನಲ್ಲಿ ದಿನದಿಂದ ದಿನಕ್ಕೆ ತುಳುನಾಡಿನ ಕಂಬಳಕ್ಕೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ. ಜಾನಪದ ಕ್ರೀಡೆಗೆ ಜಯ ಸಿಗುತ್ತಾ ಕಾದು ನೋಡೋಣ.
