"ನೀವು ಬ್ಯಾನ್ ಹಿಂಪಡೆಯಬಹುದು. ಆದರೆ ಪತ್ನಿ ಮತ್ತು ಸೋದರಿಯರನ್ನು ವಾಹನ ಚಲಾಯಿಸದಂತೆ ತಡೆಯುವ ಪುರುಷರ ಹಕ್ಕನ್ನು ಹೇಗೆ ಕಿತ್ತುಕೊಳ್ಳುತ್ತಾರೆ? ಕುಟುಂಬದ ಮುಖ್ಯಸ್ಥನಾಗಿ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆಯೇ ಹೊರತು ಮಹಿಳೆಯರಲ್ಲ."
ರಿಯಾಧ್: ಕಟ್ಟರ್ ಇಸ್ಲಾಮೀ ಸಂಪ್ರದಾಯಸ್ಥ ರಾಷ್ಟ್ರವಾದ ಸೌದಿ ಅರೇಬಿಯಾದಲ್ಲೀಗ ಬದಲಾವಣೆಯ ಗಾಳಿ ಬೀಸುತ್ತಿದೆ. ಮೊಹಮ್ಮದ್ ಬಿನ್ ಸಲ್ಮಾನ್ ರಾಜನಾದ ಬಳಿಕ ಸೌದಿಯಲ್ಲಿ ನಿಧಾನವಾಗಿ ಸುಧಾರಣೆಗಳನ್ನು ಜಾರಿಗೆ ತರಲಾಗುತ್ತಿದೆ. ಮನೆಗೆ ಸೀಮಿತವಾಗಿದ್ದ ಮಹಿಳೆಯರಿಗೆ ಹೊರಗೆ ದುಡಿಯುವ ಅವಕಾಶಗಳನ್ನು ಸೌದಿ ರಾಜ ನೀಡುತ್ತಿದ್ದಾನೆ. ಸೌದಿಯಲ್ಲಿ ಇಷ್ಟು ದಿನ ಮಹಿಳೆಯರು ವಾಹನ ಚಲಾಯಿಸದಂತೆ ನಿಷೇಧ ಜಾರಿಯಲ್ಲಿತ್ತು. ಕಳೆದ ವಾರವಷ್ಟೇ, ಸೌದಿ ರಾಜಕುಮಾರ ಆ ನಿಷೇಧವನ್ನು ರದ್ದು ಮಾಡಿದ್ದಾರೆ. ಆದರೆ, ಅಲ್ಲಿಯ ಸಾಂಪ್ರದಾಯಿಕ ಪುರುಷರು ಈ ಬದಲಾವಣೆಗೆ ತೆರೆದುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಮಹಿಳೆಯರು ಡ್ರೈವರ್ ಆಗುವುದಕ್ಕೆ ಅಲ್ಲಿನವರು ಏನೆಲ್ಲಾ ಪ್ರತಿಕ್ರಿಯೆ ಕೊಟ್ಟಿದ್ದಾರೆ? ಇಲ್ಲಿದೆ ವಿವರ...
"ನೀವು ಬ್ಯಾನ್ ಹಿಂಪಡೆಯಬಹುದು. ಆದರೆ ಪತ್ನಿ ಮತ್ತು ಸೋದರಿಯರನ್ನು ವಾಹನ ಚಲಾಯಿಸದಂತೆ ತಡೆಯುವ ಪುರುಷರ ಹಕ್ಕನ್ನು ಹೇಗೆ ಕಿತ್ತುಕೊಳ್ಳುತ್ತಾರೆ? ಕುಟುಂಬದ ಮುಖ್ಯಸ್ಥನಾಗಿ ನಾನು ನಿರ್ಧಾರ ತೆಗೆದುಕೊಳ್ಳುತ್ತೇನೆಯೇ ಹೊರತು ಮಹಿಳೆಯರಲ್ಲ."
"ಮಹಿಳೆಯರು ಕಾರು ಓಡಿಸುವಷ್ಟು ಬುದ್ಧಿಶಾಲಿಗಳಲ್ಲ. ಅವರು ಕಾರು ಚಲಾಯಿಸಿದರೆ ದೇಶದಲ್ಲಿ ಅಪಘಾತಗಳ ಪ್ರಮಾಣ ಹೆಚ್ಚಾಗುತ್ತದೆ."
"ಮಹಿಳೆಯೊಬ್ಬಳು ಅಪಘಾತ ಮಾಡಿದರೆ ನಾನು ಆಕೆಯ ಕಾರನ್ನಷ್ಟೇ ಅಲ್ಲ, ಆಕೆಯನ್ನೂ ಸುಟ್ಟುಹಾಕುತ್ತೇನೆ."
"ವಾಹನ ಚಲಾಯಿಸಿದರೆ ಮಹಿಳೆಯರ ಅಂಡಾಶಯಗಳಿಗೆ ಹಾನಿಯಾಗುತ್ತದೆ; ಅವರ ಕನ್ಯತ್ವಕ್ಕೆ ಧಕ್ಕೆಯಾಗುತ್ತದೆ."
"ನನ್ನ ಪತ್ನಿಯೇನಾದರೂ ವಾಹನ ಚಲಾಯಿಸಿದರೆ ಅಪರಿಚಿತ ಪುರುಷನ ಜೊತೆ ಸಂಪರ್ಕವಾಗುತ್ತದೆ. ಆಮೇಲೆ ನಾನೇನು ಮಾಡಲಿ?"
ಮಹಿಳೆಯರ ಪರವಾಗಿರುವ ವಾದಗಳು:
"ಪ್ರವಾದಿ ಮೊಹಮ್ಮದ್ ಕಾಲದಲ್ಲಿ ಮಹಿಳೆಯರಿಗೆ ಒಂಟೆ ನಡೆಸುವ ಅವಕಾಶ ಇತ್ತೆನ್ನುವುದಾದರೆ, ಆಧುನಿಕ ಒಂಟೆಗಳೆನಿಸಿರುವ ಕಾರುಗಳನ್ನ ಚಲಾಯಿಸುವ ಅವಕಾಶ ಯಾಕಿಲ್ಲ?"
"ಅಂಕಿ-ಅಂಶ ನೋಡಿದರೆ ಪುರುಷ ಡ್ರೈವರ್'ಗಳಿಂದಲೇ ಅಪಘಾತ ಜಾಸ್ತಿ ಆಗುತ್ತದೆ. ಮಹಿಳೆಯರು ನಿಸ್ಸಂಶಯವಾಗಿ ಪುರುಷರಿಗಿಂತ ಉತ್ತಮ ಡ್ರೈವರ್'ಗಳಾಗಬಲ್ಲರು."
"ಮನೆಯ ಹೆಣ್ಣುಮಗಳು ವಾಹನ ಚಲಾಯಿಸುವುದನ್ನು ಕಲಿತರೆ, ಕಾರು ಡ್ರೈವ್ ಮಾಡಲು ವಿದೇಶೀ ಡ್ರೈವರ್'ಗಳನ್ನ ಇಟ್ಟುಕೊಳ್ಳುವ ಅಗತ್ಯವೇ ಬೀಳುವುದಿಲ್ಲ. ಆರ್ಥಿಕವಾಗಿ ಇದು ಲಾಭ."
"ಪುರುಷ ಡ್ರೈವರ್'ಗಾದರೆ ಮನೆ ಕೊಡಬೇಕು; ಆತನ ಅಹಂಕಾರವನ್ನು ಸಹಿಸಿಕೊಳ್ಳಬೇಕು; ನಿಮ್ಮ ರಹಸ್ಯವನ್ನು ಆತ ತಿಳಿದುಕೊಳ್ಳಬಹುದು; ನಿಮ್ಮ ಕಾರನ್ನು ಹಾಳು ಮಾಡಬಹುದು. ಮಹಿಳಾ ಡ್ರೈವರ್ ಆದರೆ ಬಹಳ ಪ್ರೀತಿಯಿಂದ, ಬದ್ಧತೆಯಿಂದ ಮತ್ತು ಪ್ರಾಮಾಣಿಕತೆಯಿಂದ ನಡೆದುಕೊಳ್ಳುತ್ತಾಳೆ."
