ಬೆಳಗಾವಿ: ಹಲವು ಕಾಂಗ್ರೆಸ್ ಶಾಸಕರ ಒಡಗೂಡಿ ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅಜ್ಮೇರ್ ಪ್ರವಾಸ ಕೈಗೊಂಡಿದ್ದಾಯ್ತು, ಇದೀಗ ಅವರ ಸೋದರ ಹಾಗೂ ಸಚಿವ ಸ್ಥಾನ ಸಿಗದೆ ಅತೃಪ್ತಿಗೊಂಡಿದ್ದ ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಸರದಿ.

ರಮೇಶ್ ಪ್ರವಾಸಕ್ಕೆ ಅಪಾರ್ಥ ಕಲ್ಪಿಸುವುದು ಬೇಕಿಲ್ಲ ಎಂದಿರುವ ಸತೀಶ್, ಹಾಲಿ ಮತ್ತು ಮಾಜಿ ಶಾಸಕರು ಸೇರಿ ಸಿಕ್ಕಿಂ ಪ್ರವಾಸ ಕೈಗೊಳ್ಳಲಿದ್ದೇವೆ ಎಂದು ಹೇಳಿದ್ದಾರೆ. ಸಂಪುಟ ವಿಸ್ತರಣೆ ಇನ್ನಷ್ಟೇ ಆಗಬೇಕಿರುವ ಹಿನ್ನೆಲೆಯಲ್ಲಿ ಇದೊಂದು ರೀತಿಯಲ್ಲಿ ಶಕ್ತಿ ಪ್ರದರ್ಶನ ತಂತ್ರ ಎಂದೇ ವಿಶ್ಲೇಷಿಸಲಾಗುತ್ತಿದೆ. 

ರಮೇಶ್ ಜಾರಕಿಹೊಳಿ 13 ಮಂದಿ ಕಾಂಗ್ರೆಸ್ ಶಾಸಕರೊಂದಿಗೆ ಪ್ರವಾಸ ಕೈಗೊಂಡ ಬೆನ್ನಲ್ಲೇ ಇವರು ಕೈಗೊಳ್ಳುತ್ತಿರುವುದು ಸಾಕಷ್ಟು ಅನುಮಾನಗಳಿಗೆ ಎಡೆ ಮಾಡಿದೆ. ಪೌರಾಡಳಿತ ಸಚಿವ ರಮೇಶ್ ಜಾರಕಿಹೊಳಿ ಅಜ್ಮೇರ್‌ಗೆ ಹೋಗಿರುವ ಹಾಗೆ ನಾನೂ ನನ್ನ ಸ್ನೇಹಿತರ ಜೊತೆಗೆ ಶೀಘ್ರದಲ್ಲೇ ಸಿಕ್ಕಿಂಗೆ ಹೋಗಲಿ ದ್ದೇವೆ. ಅದರಲ್ಲೇನೂ ವಿಶೇಷ ಇಲ್ಲ ಎಂದು ಯಮಕನ ಮರಡಿ ಕ್ಷೇತ್ರದ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.

ನಗರದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ್ ಜಾರಕಿಹೊಳಿ ಅವರ ಪ್ರವಾಸಕ್ಕೆ ಅಪಾರ್ಥ ಕಲ್ಪಿಸುವುದು ಬೇಡ ಎಂದು ಹೇಳಿದರು. ಹಾಲಿ ಮತ್ತು ಮಾಜಿ ಶಾಸಕರು ಸೇರಿ ನಾವು ಸಿಕ್ಕಿಂಗೆ ತೆರಳಲಿದ್ದೇವೆ. ಸಮಾನ ಮನಸ್ಕ ಶಾಸಕರೊಂದಿಗೆ ರಾಜಕಾರಣಿಗಳು ಪ್ರವಾಸ ಕೈಗೊಳ್ಳುವುದು ಸಾಮಾನ್ಯ. ಶಾಸಕರು ಪ್ರವಾಸ ಕೈಗೊಂಡರೆ ಅದು ಗುಂಪು ಗಾರಿಕೆ, ಬಣ ರಾಜಕೀಯ ಎನ್ನುವುದು ಸರಿಯಲ್ಲ ಎಂದು
ಅವರು ಹೇಳಿದರು.

ನಾನು ಈ ಹಿಂದೆ ಅನೇಕ ಸಲ ಸ್ನೇಹಿತರೊಂದಿಗೆ ಮಾರಿಷಸ್, ದುಬೈ ಸೇರಿದಂತೆ ಮತ್ತಿತರ ಕಡೆ ಪ್ರವಾಸ ಕೈಗೊಂಡಿದ್ದೇನೆ. ಅದು ಸರಳ ಸ್ವಾಭಾವಿಕ ಪ್ರವಾಸವಷ್ಟೇ ಆಗಿದೆ ಎಂದು ಹೇಳಿದರು. ರಮೇಶ್ ಜಾರಕಿಹೊಳಿ ಅವರು ತಮ್ಮ ಹರಕೆ ತೀರಿಸಲು ದೇವರ ದರ್ಶನಕ್ಕೆ ಅಜ್ಮೇರ್‌ಗೆ ತೆರಳಿದ್ದಾರೆ. ಅದರಲ್ಲಿ ಗುಂಪುಗಾರಿಕೆ ಪ್ರಶ್ನೆಯೇ ಇಲ್ಲ ಎಂದು ಸಮರ್ಥಿಸಿಕೊಂಡರು.