ನವದೆಹಲಿ(ಮಾ.06): ಬಾಲಾಕೋಟ್ ವಾಯುದಾಳಿ ಕುರಿತು ಪ್ರತಿಪಕ್ಷಗಳು ಸಾಕ್ಷಿ ಕೇಳುತ್ತಿರುವ ಮಧ್ಯೆಯೇ, ವಾಯುಸೇನೆ ದಾಳಿ ನಡೆಸಿದ ಉಗ್ರ ನೆಲೆಗಳು ಸದೃಢವಾಗಿರುವ ಉಪಗ್ರಹ ಚಿತ್ರಗಳು ಅನುಮಾನವನ್ನು ಮತ್ತಷ್ಟು ಹೆಚ್ಚಿಸುವಂತೆ ಮಾಡಿದೆ.

ಈ ಕುರಿತು ರಾಯಟರ್ಸ್ ವರದಿ ಮಾಡಿದ್ದು, ಜೆಇಎಂ ಸಂಘಟನೆಯ ನೆಲೆಗಳು ಹಾನಿಗೊಳಗಾಗದ ಸ್ಯಾಟಲೈಟ್ ಚಿತ್ರಗಳನ್ನು ಬಿಡುಗಡೆ ಮಾಡಲಾಗಿದೆ.

ಬಾಲಾಕೋಟ್ ನಲ್ಲಿರುವ ಜೆಇಎಂ ಉಗ್ರ ನೆಲೆಗಳನ್ನು ನಾಶಪಡಿಸಿದ್ದಾಗಿ ವಾಯುಸೇನೆ ಹೇಳಿತ್ತು. ಆದರೆ ಮಾ.04ರಂದು ತೆಗೆದ ಈ ಸ್ಯಾಟಲೈಟ್ ಚಿತ್ರಗಳಲ್ಲಿ ಒಟ್ಟು 6 ಉಗ್ರ ನೆಲೆಗಳು ಸದೃಢವಾಗಿರುವುದು ಸ್ಪಷ್ಟವಾಗಿದೆ.

ಸ್ಯಾನ್ ಫ್ರಾನ್ಸಿಸ್ಕೋದ ಪ್ಲ್ಯಾನೆಟ್ ಲ್ಯಾಬ್ಸ್ ಇಂಕ್ ಎಂಬ ಸಂಸ್ಥೆ ಈ ಫೋಟೋಗಳನ್ನು ಬಿಡುಗಡೆ ಮಾಡಿದ್ದು, ಈ ಯಗ್ರ ನೆಲೆಗಳು ಸದೃಢವಾಗಿದ್ದು ಈಗಲೂ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದೆ.

72 cm(28 Inches) ಅಳತೆಯ ಈ ಫೋಟೋಗಳಲ್ಲಿ ಭಾರತೀಯ ವಾಯುಸೇನೆ ದಾಳಿ ಮಾಡಿತ್ತು ಎನ್ನಲಾದ ಉಗ್ರ ನೆಲೆಗಳು ಸುರಕ್ಷಿತವಾಗಿರುವುದು ಸ್ಪಷ್ಟವಾಗಿದೆ.

ಈ ಕುರಿತು ಮಾಹಿತಿ ನೀಡಿರುವ ಪ್ಲ್ಯಾನೆಟ್ ಲ್ಯಾಬ್ಸ್ ಇಂಕ್, ಕಳೆದ ಏ.2018ರಿಂದ ಈ ನೆಲೆಗಳು ಹಾಗೆ ಇರುವುದು ಈ ಫೋಟೋಗಳಲ್ಲಿ ಸ್ಪಷ್ಟವಾಗಿ ಕಾಣಬಹುದಾಗಿದೆ ಎಂದು ಹೇಳಿದೆ.

ಟಾರ್ಗೆಟ್ ಮಿಸ್ ಆಗಿದೆಯಾ?:

ಮಿಡಲ್ ಬರಿ ಇನ್ಸಿಟ್ಯೂಟ್ ಆಫ್ ಇಂಟರ್ ನ್ಯಾಶನಲ್ ಸ್ಟಡೀಸ್ ಮುಖ್ಯಸ್ಥ ಜೆಫ್ರಿ ಲೆವಿಸ್ ಹೇಳುವಂತೆ, ಬಾಲಾಕೋಟ್ ಮೇಲೆ ದಾಳಿ ಮಾಡಲು ಮುಂದಾಗಿದ್ದ ವಾಯುಸೇನೆ ಗುರಿ ತಪ್ಪಿ ಬೇರೊಂದು ಪ್ರದೇಶದಲ್ಲಿ ಬಾಂಬ್ ದಾಳಿ ನಡೆಸಿರಬಹದು ಎನ್ನಲಾಗಿದೆ.

ಒಟ್ಟಿನಲ್ಲಿ ಭಾರತ ಸರ್ಕಾರ ಮತ್ತು ವಾಯುಸೇನೆ ಪ್ರತಿಪಾದಿಸುತ್ತಿದ್ದ ಬಾಲಾಕೋಟ್ ದಾಳಿ, ಮತ್ತು ಪ್ಲ್ಯಾನೆಟ್ ಲ್ಯಾಬ್ಸ್ ಇಂಕ್  ಬಿಡುಗಡೆಗೊಳಿಸಿರುವ ಚಿತ್ರಗಳು ಮತ್ತಷ್ಟು ಗೊಂದಲ ಮೂಡಿಸಿರುವುದು ಸುಳ್ಳಲ್ಲ.