ಗೋಲ್ಡನ್ ಬೇ ರೆಸಾರ್ಟ್‌ನಲ್ಲಿ ತಂಗಿರುವ ಶಾಸಕರನ್ನು ಶಶಿಕಲಾ ಶನಿವಾರ ಖುದ್ದಾಗಿ ಭೇಟಿ ಮಾಡಿದ್ದಾರೆ. ಈ ವೇಳೆ, ಶಾಸಕರ ಮನಸ್ಥಿತಿಯನ್ನು ಕಂಡು ಬೇಸರಗೊಂಡು ಬೇಗನೆ ರೆಸಾರ್ಟ್‌ನಿಂದ ಹೊರಬಂದಿದ್ದಾರೆ. ಮತ್ತೊಂದೆಡೆ ಸುಪ್ರೀಂಕೋರ್ಟ್ ತೀರ್ಪು ಮುಂದೊಡ್ಡಿ ರಾಜ್ಯಪಾಲರು ಪ್ರಮಾಣವಚನ ಬೋಸಲು ಹಿಂದೇಟು ಹಾಕುತ್ತಿದ್ದಾರೆ. ತಮಿಳುನಾಡಿನಾದ್ಯಂತ ಜನರು ಪನ್ನೀರ್‌ಸೆಲ್ವಂ ಪರ ದನಿ ಎತ್ತುತ್ತಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ವಿರುದ್ಧ ತೀರ್ಪು ಬಂದರೆ ತಾವು ಸಿಎಂ ಆಗಲು ಅವಕಾಶವೇ ಇರುವುದಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಸಿಎಂ ರೇಸ್‌ನಿಂದ ಹಿಂದೆ ಸರಿದು, ಪಕ್ಷ ನಿಷ್ಠ ನಾಯಕರೊಬ್ಬರನ್ನು ಆ ಸ್ಥಾನಕ್ಕೆ ಕೂರಿಸಿ, ಕಿಂಗ್‌ಮೇಕರ್ ಆಗುವ ಮತ್ತೊಂದು ಯೋಜನೆಯನ್ನು ಶಶಿಕಲಾ ಹಾಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಚೆನ್ನೈ(ಫೆ.11): ತಮಿಳುನಾಡಿನ ಕಳೆದ ಕೆಲವು ದಿನಗಳಿಂದ ನಡೆಯುತ್ತಿರುವ ಆಂತರಿಕ ಜಗಳ ಮತ್ತೊಂದು ನಾಟಕೀಯ ತಿರುವು ಪಡೆವ ಲಕ್ಷಣ ಕಂಡುಬಂದಿವೆ. ಹಂಗಾಮಿ ಸಿಎಂ ಪನ್ನೀರ್‌ಸೆಲ್ವಂಗೆ ನಿರೀಕ್ಷೆಗೂ ಮೀರಿ ಬೆಂಬಲ ವ್ಯಕ್ತವಾಗುತ್ತಿರುವುದು, ಶಾಸಕರ ನಡೆ ಬದಲಿನ ಸುಳಿವು ಹಾಗೂ ಸುಪ್ರೀಂಕೋರ್ಟ್‌ನಲ್ಲಿ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ತೂಗುಕತ್ತಿ ಇರುವ ಹಿನ್ನೆಲೆಯಲ್ಲಿ ಶಶಿಕಲಾ, ಸಿಎಂ ಹುದ್ದೆ ರೇಸ್‌ನಿಂದಲೇ ಹಿಂದೆ ಸರಿಯುವ ಆಲೋಚನೆಯಲ್ಲಿದ್ದಾರೆ ಎನ್ನಲಾಗಿದೆ.

ತಾವು ರೇಸ್‌ನಿಂದ ಹಿಂದೆ ಸರಿದು, ಮತ್ತೊಬ್ಬರನ್ನು ಆ ಪಟ್ಟಕ್ಕೆ ತಮ್ಮ ಆಪ್ತ ಕೆ.ಎ. ಸೆಂಗೊಟ್ಟಯ್ಯನ್ ಅವರನ್ನು ಸಿಎಂ ಮಾಡಬಹುದು ಎಂಬ ವದಂತಿ ವ್ಯಾಪಕವಾಗಿ ಹಬ್ಬಿವೆ. ಕಾಂಗ್ರೆಸ್ಸಿನ ಹಿರಿಯ ನಾಯಕ ಪಿ. ಚಿದಂಬರಂ ಪುತ್ರ ಕಾರ್ತಿ ಚಿದಂಬರಂ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಈ ನಡುವೆ, ಹಿರಿಯ ಸಚಿವ ಎಡಪ್ಪಾಡಿ ಪಳನಿಸ್ವಾಮಿ ಹೆಸರು ಕೂಡ ಶಶಿಕಲಾ ಪರಿಶೀಲನೆಯಲ್ಲಿದೆ ಎನ್ನಲಾಗಿದೆ.

ಗೋಲ್ಡನ್ ಬೇ ರೆಸಾರ್ಟ್‌ನಲ್ಲಿ ತಂಗಿರುವ ಶಾಸಕರನ್ನು ಶಶಿಕಲಾ ಶನಿವಾರ ಖುದ್ದಾಗಿ ಭೇಟಿ ಮಾಡಿದ್ದಾರೆ. ಈ ವೇಳೆ, ಶಾಸಕರ ಮನಸ್ಥಿತಿಯನ್ನು ಕಂಡು ಬೇಸರಗೊಂಡು ಬೇಗನೆ ರೆಸಾರ್ಟ್‌ನಿಂದ ಹೊರಬಂದಿದ್ದಾರೆ. ಮತ್ತೊಂದೆಡೆ ಸುಪ್ರೀಂಕೋರ್ಟ್ ತೀರ್ಪು ಮುಂದೊಡ್ಡಿ ರಾಜ್ಯಪಾಲರು ಪ್ರಮಾಣವಚನ ಬೋಸಲು ಹಿಂದೇಟು ಹಾಕುತ್ತಿದ್ದಾರೆ. ತಮಿಳುನಾಡಿನಾದ್ಯಂತ ಜನರು ಪನ್ನೀರ್‌ಸೆಲ್ವಂ ಪರ ದನಿ ಎತ್ತುತ್ತಿದ್ದಾರೆ. ಸುಪ್ರೀಂಕೋರ್ಟ್‌ನಲ್ಲಿ ವಿರುದ್ಧ ತೀರ್ಪು ಬಂದರೆ ತಾವು ಸಿಎಂ ಆಗಲು ಅವಕಾಶವೇ ಇರುವುದಿಲ್ಲ. ಈ ಎಲ್ಲ ಕಾರಣಗಳಿಂದಾಗಿ ಸಿಎಂ ರೇಸ್‌ನಿಂದ ಹಿಂದೆ ಸರಿದು, ಪಕ್ಷ ನಿಷ್ಠ ನಾಯಕರೊಬ್ಬರನ್ನು ಆ ಸ್ಥಾನಕ್ಕೆ ಕೂರಿಸಿ, ಕಿಂಗ್‌ಮೇಕರ್ ಆಗುವ ಮತ್ತೊಂದು ಯೋಜನೆಯನ್ನು ಶಶಿಕಲಾ ಹಾಕಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಶಾಸಕಾಂಗ ಪಕ್ಷದ ನಾಯಕಿಯಾಗಿದ್ದರೂ, ತಮ್ಮ ಬೆಂಬಲಕ್ಕಿರುವ ಶಾಸಕರ ಪಟ್ಟಿ ಕೊಟ್ಟು ವಾರವಾಗಿದ್ದರೂ ಪ್ರಮಾಣ ವಚನ ಬೋಸಲು ಮೀನಮೇಷ ಎಣಿಸುತ್ತಿರುವ ತಮಿಳುನಾಡು ರಾಜ್ಯಪಾಲ ಸಿ. ವಿದ್ಯಾಸಾಗರ ರಾವ್ ವಿರುದ್ಧ ಸಂಘರ್ಷಕ್ಕಿಳಿಯಲು ಅಣ್ಣಾಡಿಎಂಕೆ ಮುಖ್ಯಸ್ಥೆ ಶಶಿಕಲಾ ವಿ. ನಟರಾಜನ್ ಮುಂದಾಗಿದ್ದಾರೆ. ರಾಜ್ಯಪಾಲರ ವಿಳಂಬ ತಂತ್ರ ಪಕ್ಷದಲ್ಲಿ ಒಡಕು ಮೂಡಿಸುವ ಪ್ರಯತ್ನದಂತಿದೆ ಎಂದು ಆಕ್ರೋಶ ಕಾರಿರುವ ಅವರು, ಭಾನುವಾರದಿಂದಲೇ ಹೊಸ ಬಗೆಯ ಹೋರಾಟ ಆರಂಭಿಸುವ ಘೋಷಣೆ ಮಾಡಿದ್ದಾರೆ.

ಶಶಿಕಲಾ ಅವರು ರಾಜ್ಯಪಾಲರ ವಿರುದ್ಧ ಪ್ರತಿಭಟನೆ ನಡೆಸುತ್ತಾರೋ, ಉಪವಾಸ ಕೂರುತ್ತಾರೋ ಅಥವಾ ಕಾನೂನು ಸಮರ ಆರಂಭಿಸುತ್ತಾರೋ ಎಂಬುದು ಸದ್ಯಕ್ಕೆ ಗೊತ್ತಾಗಿಲ್ಲ. ಈ ಬಗ್ಗೆ ಅವರು ಕೂಡ ಗುಟ್ಟು ಬಿಟ್ಟುಕೊಟ್ಟಿಲ್ಲ. ಕಾನೂನು ಹೋರಾಟ ನಡೆಸುವ ಕುರಿತು ಕೇಳಲಾದ ಪ್ರಶ್ನೆಗೆ, ‘ಕಾದು ನೋಡಿ’ ಎಂದಷ್ಟೇ ಶಶಿಕಲಾ ಹೇಳಿದ್ದಾರೆ.

ಶಶಿಕಲಾ ವಿರುದ್ಧದ ಅಕ್ರಮ ಆಸ್ತಿ ಗಳಿಕೆ ಪ್ರಕರಣದ ಕುರಿತಂತೆ ಸುಪ್ರೀಂಕೋರ್ಟ್ ಸದ್ಯದಲ್ಲೇ ನೀಡಲಿರುವ ತೀರ್ಪಿಗಾಗಿ ರಾಜ್ಯಪಾಲರು ಎದುರು ನೋಡುತ್ತಿದ್ದಾರೆ. ಸೋಮವಾರ ಆ ತೀರ್ಪು ಪ್ರಕಟವಾಗುವ ನಿರೀಕ್ಷೆ ಇತ್ತಾದರೂ, ನ್ಯಾಯಮೂರ್ತಿ ರಜೆ ಇರುವುದರಿಂದ ಅಂದು ಪ್ರಕಟವಾಗುವುದಿಲ್ಲ. ಈ ನಡುವೆ, ಶಶಿಕಲಾ ಅವರು ಭೇಟಿಗೆ ಸಮಯಾವಕಾಶ ಕೋರಿ ಪತ್ರ ಬರೆದಿದ್ದರೂ, ಅದಕ್ಕೆ ರಾಜ್ಯಪಾಲರು ಮನ್ನಣೆ ನೀಡಿಲ್ಲ. ಮತ್ತೊಂದೆಡೆ, ತಮ್ಮ ವಿರುದ್ಧ ಬಂಡಾಯ ಸಾರಿರುವ ಹಂಗಾಮಿ ಮುಖ್ಯಮಂತ್ರಿ ಒ. ಪನ್ನೀರ್‌ಸೆಲ್ವಂ ಬಣಕ್ಕೆ ಸಂಸದರು, ಸಚಿವರು, ಮುಖಂಡರ ವಲಸೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆತಂಕಿತರಾಗಿರುವ ಶಶಿಕಲಾ, ರಾಜ್ಯಪಾಲರ ಮೇಲೆ ಒತ್ತಡ ಹೇರಲು ಸಂಘರ್ಷಕ್ಕೆ ಇಳಿದಿದ್ದಾರೆ ಎಂದು ಹೇಳಲಾಗುತ್ತಿದೆ.

ಬೆಳಗ್ಗೆಯಿಂದಲೂಚಟುವಟಿಕೆ

ಅಣ್ಣಾಡಿಎಂಕೆ ಶಾಸಕಾಂಗ ಪಕ್ಷದ ನಾಯಕಿಯಾಗಿ ಕಳೆದ ಭಾನುವಾರವೇ ಆಯ್ಕೆಯಾಗಿರುವ ಶಶಿಕಲಾ ಅವರು, ಸರ್ಕಾರ ರಚನೆಗೆ ರಾಜ್ಯಪಾಲರ ಬುಲಾವ್‌ಗಾಗಿ ಕಾಯುತ್ತಿದ್ದಾರೆ. ಆದರೆ ರಾಜ್ಯಪಾಲರ ಕಡೆಯಿಂದ ಅಂತಹ ಯಾವುದೇ ಸೂಚನೆ ಬರುತ್ತಿಲ್ಲ. ಹೀಗಾಗಿ ಸಂಜೆ ರಾಜ್ಯಪಾಲರನ್ನು ಭೇಟಿಯಾಗಲು ಸಮಯಾವಕಾಶ ಕೋರಿ ಶನಿವಾರ ಬೆಳಗ್ಗೆ ಪತ್ರ ರವಾನಿಸಿದ್ದರು. ಆದರೆ ರಾಜ್ಯಪಾಲರಿಂದ ಯಾವುದೇ ಪ್ರತಿಕ್ರಿಯೆ ಬಾರದ ಹಿನ್ನೆಲೆಯಲ್ಲಿ ತಮ್ಮ ಬೆಂಬಲಿಗ ಶಾಸಕರು ತಂಗಿರುವ ರೆಸಾರ್ಟ್‌ಗೆ ತೆರಳಿ ಮುಂದಿನ ಕಾರ್ಯ ಯೋಜನೆ ಕುರಿತು ಚರ್ಚಿಸಿದರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯಪಾಲರ ಪ್ರತಿಕ್ರಿಯೆಗಾಗಿ ತಾಳ್ಮೆಯಿಂದ ಕಾದೆವು. ಆದರೆ ರಾಜ್ಯಪಾಲರು ಶಪಥಗ್ರಹಣ ವಿಳಂಬ ಮಾಡುತ್ತಿದ್ದಾರೆ. ಇದು ಪಕ್ಷದೊಳಗೆ ಒಡಕು ಮೂಡಿಸುವ ಪ್ರಯತ್ನ. ಹೀಗಾಗಿ ತಮ್ಮ ಬೆಂಬಲಿಗರು ಭಾನುವಾರದಿಂದಲೇ ಹೊಸಬಗೆಯ ಪ್ರತಿಭಟನೆ ಆರಂಭಿಸಲಿದ್ದಾರೆ ಎಂದು ಹೇಳಿದರು.

ರೆಸಾರ್ಟ್‌ನಲ್ಲಿ ತಂಗಿರುವ ಶಾಸಕರು ಚೆನ್ನಾಗಿದ್ದಾರೆ. ಸಂತೋಷದಿಂದ ಇದ್ದಾರೆ. ಅವರನ್ನು ಭೇಟಿ ಮಾಡಿದ ಬಳಿಕ ತಮಗೂ ಸಂತೋಷವಾಗಿದೆ ಎಂದು ತಿಳಿಸಿದರು.