ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಶಾಸಕ ಅಶೋಕ್‌ ಖೇಣಿ ವಿರುದ್ಧ ಅವರ ಸಹೋದರ, ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ(ಬಿಎಸ್‌ಎಸ್‌ಕೆ) ಅಧ್ಯಕ್ಷ ಸಂಜಯ್‌ ಖೇಣಿ ಅವರೇ ಬಂಡಾಯವೆದ್ದಿದ್ದಾರೆ.

ಅಪ್ಪಾರಾವ್‌ ಸೌದಿ

ಬೀದರ್‌: ಇತ್ತೀಚೆಗಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಯಾಗಿರುವ ಶಾಸಕ ಅಶೋಕ್‌ ಖೇಣಿ ವಿರುದ್ಧ ಅವರ ಸಹೋದರ, ಬೀದರ್‌ ಸಹಕಾರ ಸಕ್ಕರೆ ಕಾರ್ಖಾನೆ(ಬಿಎಸ್‌ಎಸ್‌ಕೆ) ಅಧ್ಯಕ್ಷ ಸಂಜಯ್‌ ಖೇಣಿ ಅವರೇ ಬಂಡಾಯವೆದ್ದಿದ್ದಾರೆ.

ಹುಮನಾಬಾದ್‌ ಕ್ಷೇತ್ರದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿರುವ ಅವರು, ಪಕ್ಷ ಸೂಚಿಸಿದರೆ ಬೀದರ್‌ನಲ್ಲಿ ಅಶೋಕ್‌ ಖೇಣಿ ವಿರುದ್ಧ ಸ್ಪರ್ಧಿಸಲು ಸಿದ್ಧ. ಒಂದು ವೇಳೆ ಟಿಕೆಟ್‌ ನೀಡದಿದ್ದರೆ, ಖೇಣಿ ವಿರುದ್ಧ ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರ ನಡೆಸಲು ಸಿದ್ಧ ಎಂದು ಹೇಳಿದ್ದಾರೆ. ಇದು ಈಗ ಜಿಲ್ಲಾ ರಾಜಕೀಯದಲ್ಲಿ ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಈ ಸಂಬಂಧ ಕನ್ನಡಪ್ರಭದೊಂದಿಗೆ ಮಾತನಾಡಿರುವ ಅವರು, ನಾನು ಬಿಎಸ್‌ಎಸ್‌ಕೆ ಅಧ್ಯಕ್ಷನಾಗಿ 2 ಬಾರಿ ಆಯ್ಕೆಯಾಗಿದ್ದೇನೆ. ಸಚಿವರು, ಶಾಸಕರು, ಮಾಜಿ ಸಿಎಂ ಸೇರಿ ಇಡೀ ಕಾಂಗ್ರೆಸ್‌ ತಂಡ ನನ್ನ ವಿರೋಧಿಸಿದರೂ, ರೈತರು ನನ್ನ ಕೈ ಹಿಡಿದು ಗೆಲುವು ತಂದುಕೊಟ್ಟರು. ಅದೇ ವಿಶ್ವಾಸ ಈಗಲೂ ನನಗಿದೆ. ಹುಮನಾಬಾದ್‌ನಲ್ಲಿ ಬಿಎಸ್‌ಎಸ್‌ಕೆಯ 13 ಸಾವಿರ ರೈತರಿದ್ದಾರೆ. ಅವರ ಕುಟುಂಬದವರು ಸೇರಿ 25ಸಾವಿರಕ್ಕೂ ಹೆಚ್ಚು ಮತದಾರರಾಗುತ್ತಾರೆ. ಬೀದರ್‌ ದಕ್ಷಿಣದಲ್ಲಿ 8 ಸಾವಿರ ಕಾರ್ಖಾನೆ ಕಾರ್ಮಿಕರಿದ್ದು, ಅವರ ಸಹಕಾರವೂ ಇದೆ. ಪಕ್ಷ ಸೂಚಿಸಿದರೆ, ಅಶೋಕ್‌ ಖೇಣಿ ವಿರುದ್ಧ ಸ್ಪರ್ಧಿಸಲು ಸಿದ್ಧ ಎಂದು ಹೇಳಿದ್ದಾರೆ.

ಕಳೆದ 2008ರ ಚುನಾವಣೆಯಲ್ಲಿ 30,783 ಮತಗಳನ್ನು ಪಡೆದು ಬಂಡೆಪ್ಪ ಖಾಶೆಂಪೂರ್‌ ಅವರ ವಿರುದ್ಧ ಕೇವಲ 1,271 ಮತಗಳಿಂದ ಸೋತಿದ್ದೆ. 2013ರಲ್ಲಿ ಖೇಣಿ ಗೆಲುವಿಗೆ ಶ್ರಮಿಸಿ ಯಶಸ್ವಿಯಾಗಿದ್ದೆ. ಈ ಬಾರಿ ಬಿಜೆಪಿ ಟಿಕೆಟ್‌ ನೀಡಿದರೆ ನನಗೆ ಗೆಲುವು ಅಲ್ಲಿ ನಿಶ್ಚಿತ. ಮೊದಲು ಕಾಂಗ್ರೆಸ್‌ ವಿರುದ್ಧವಾಗಿದ್ದ ಖೇಣಿ, ಈಗ ಕಾಂಗ್ರೆಸ್‌ ಅಭ್ಯರ್ಥಿಯಾಗಲು ಹೊರಟಿದ್ದಾರೆ. ಹಿಂದಿನ ಚುನಾವಣೆಯಲ್ಲಿ ಕ್ಷೇತ್ರದ ಜನರಿಗೆ ನೀಡಿದ್ದ ಭರವಸೆಗಳೆಲ್ಲ ಸುಳ್ಳಾಗಿವೆ. ಖೇಣಿಗೆ ನಾಲ್ಕೈದು ಕಾರ್ಯಕರ್ತರನ್ನು ಬಿಟ್ಟು ಕ್ಷೇತ್ರದಲ್ಲಿರುವ ಗ್ರಾಮಗಳ ಹೆಸರೂ ಗೊತ್ತಿಲ್ಲ ಎಂದು ಕಿಡಿಕಾರಿದರು.

ಹಣ ನೀಡಿ ಬಡ್ಡಿ ಪಡೆದ್ರು : ಬಿಎಸ್‌ಎಸ್‌ಕೆ ಕಾರ್ಖಾನೆಗೆ ಹಣಕಾಸಿನ ನೆರವು ನೀಡುವುದಾಗಿ ಹೇಳಿದ್ದ ಖೇಣಿ ಒಂದು ಕೋಟಿ ರು. ಸಾಲ ನೀಡಿ 2015ರಲ್ಲಿ 65 ಲಕ್ಷ ರು. ಬಡ್ಡಿ ವಸೂಲಿ ಮಾಡಿದ್ದಾರೆ. ಈಗ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ಕಾರ್ಖಾನೆಗೆ ತಲಾ 150 ಕೋಟಿ ನೆರವು ನೀಡುವ ಭರವಸೆ ನೀಡಿದ್ದಾರೆ.