ಲಿಂಗಾಯತ ಧರ್ಮದ ಸ್ಥಾಪನೆ ವಿಚಾರವಾಗಿ ನಡೆಯುತ್ತಿರುವ ಹೋರಾಟಕ್ಕೆ ಈಗ ರಾಜಕೀಯ ಸೋಂಕು ತಗುಲಿದೆ. ಲಿಂಗಾಯತ ಧರ್ಮ ಸ್ಥಾಪನೆಯನ್ನು ಪ್ರತಿಪಾದಿಸುತ್ತಿರುವ ಬಣ ಆಡಿಯೋ ಬಾಂಬ್ ಹಾಕಿದ್ದು, ವಿವಾದದ ಹಿಂದೆ ಸಂಘ ಪರಿವಾರದ ಷಡ್ಯಂತ್ರದ ಆರೋಪವೂ ವ್ಯಕ್ತವಾಗಿದೆ.
ಬೆಂಗಳೂರು (ಸೆ.14): ಲಿಂಗಾಯತ ಧರ್ಮದ ಸ್ಥಾಪನೆ ವಿಚಾರವಾಗಿ ನಡೆಯುತ್ತಿರುವ ಹೋರಾಟಕ್ಕೆ ಈಗ ರಾಜಕೀಯ ಸೋಂಕು ತಗುಲಿದೆ. ಲಿಂಗಾಯತ ಧರ್ಮ ಸ್ಥಾಪನೆಯನ್ನು ಪ್ರತಿಪಾದಿಸುತ್ತಿರುವ ಬಣ ಆಡಿಯೋ ಬಾಂಬ್ ಹಾಕಿದ್ದು, ವಿವಾದದ ಹಿಂದೆ ಸಂಘ ಪರಿವಾರದ ಷಡ್ಯಂತ್ರದ ಆರೋಪವೂ ವ್ಯಕ್ತವಾಗಿದೆ.
ಸ್ವತಂತ್ರ ಲಿಂಗಾಯತ ಧರ್ಮ ಸ್ಥಾಪನೆ ಹೋರಾಟದ ಹಾದಿ ದಿನಕ್ಕೊಂದು ದಿಕ್ಕಿನಲ್ಲಿ ಸಾಗುತ್ತಿದೆ. ಇದೀಗ ಧರ್ಮಕ್ಕಾಗಿ ನಡೆಯುತ್ತಿದ್ದ ಹೋರಾಟದಲ್ಲಿ ರಾಜಕೀಯದ ನೆರಳು ಕಾಣಿಸಿಕೊಂಡಿದ್ದು, ರಾಜಕೀಯ ಷಡ್ಯಂತ್ರದ ನೇರ ಆರೋಪ ವ್ಯಕ್ತವಾಗಿದೆ. ಲಿಂಗಾಯತ ಧರ್ಮ ಸ್ಥಾಪನೆಗೆ ಬೆಂಬಲಿಸಿಲ್ಲ ಎಂದು ಸಿದ್ಧಗಂಗಾ ಮಠದಿಂದ ಸ್ಪಷ್ಟನೆ ವ್ಯಕ್ತವಾದ ಬಳಿಕ ಬೆಂಗಳೂರಿನಲ್ಲಿ ಇಂದು ಸಚಿವ ಎಂ.ಬಿ. ಪಾಟೀಲ್ ಅವರನ್ನು ಸಮರ್ಥಿಸಿಕೊಳ್ಳಲು ಸಚಿವ ವಿನಯ ಕುಲಕರ್ಣಿ ನೇತೃತ್ವದಲ್ಲಿ ಸುದ್ದಿಗೋಷ್ಠಿಯನ್ನು ನಡೆಸಲಾಗಿದೆ. ಸುದ್ದಿಗೋಷ್ಠಿಯಲ್ಲಿ ಎಂ.ಬಿ. ಪಾಟೀಲ್ ಮತ್ತು ಸಿದ್ಧಗಂಗಾ ಶ್ರೀ ಭೇಟಿ ವೇಳೆ ಹಾಜರಿದ್ದ ಮಠದ ಆಡಳಿತವಿರುವ ಕಾಲೇಜಿನ ಸಿಬ್ಬಂದಿ ಶಿವಕುಮಾರ್ ಅವರದ್ದೆನ್ನಲಾದ ಆಡಿಯೋ ಒಂದನ್ನು ಕೂಡಾ ಬಿಡುಗಡೆಗೊಳಿಸಲಾಗಿದೆ.
ಇನ್ನು ಸಚಿವ ಎಂ.ಬಿ. ಪಾಟೀಲ್ ಪರ ನಿಂತಿರುವ ಸಚಿವರು ಮತ್ತು ಶಾಸಕರಿಂದ ಮತ್ತೆ ಹೋರಾಟ ಮುಂದುವರಿಸುವುದಾಗಿ ನಿಲುವು ಪ್ರಕಟವಾಗಿದೆ. ಅಲ್ಲದೇ ಸಚಿವ ಎಂ.ಬಿ. ಪಾಟೀಲ್ ಹೇಳಿದ್ದು ಸಂಪೂರ್ಣ ಸತ್ಯ ಎಂದು ಪ್ರತಿಪಾದಿಸಿರುವ ಲಿಂಗಾಯತ ಬಣ, ಸಿದ್ದಗಂಗಾ ಮಠದ ಹೇಳಿಕೆ ಸತ್ಯ ಇರಬಹುದು ಎಂದು ಕೂಡಾ ಹೇಳಿದೆ. ಈ ಮಧ್ಯೆ ಸಿದ್ಧಗಂಗಾ ಮಠದ ಎರಡೆರಡು ಸ್ಪಷ್ಟೀಕರಣದ ಹಿಂದೆ ಸಂಘ ಪರಿವಾರದ ಷಡ್ಯಂತ್ರವಿದೆ ಎಂಬ ಗಂಭೀರ ಆರೋಪವೂ ಕೇಳಿ ಬಂದಿದೆ.
ನಿನ್ನೆಯಷ್ಟೇ ಸಭೆ ಸೇರಿ ಒಟ್ಟಾಗಿ ಪ್ರತ್ಯೇಕ ಧರ್ಮಕ್ಕಾಗಿ ಹೋರಾಟ ಮುಂದುವರಿಸುವುದಾಗಿ ಘೋಷಿಸಿದ್ದ ನಾಯಕರು, ಇಂದು ವೈಯಕ್ತಿಕ ಸಮರ್ಥನೆಗೆ ಮುಂದಾಗಿದ್ದಾರೆ. ವಿವಾದದಲ್ಲಿ ಮಠವನ್ನೂ ಎಳೆದು ತರಲಾಗಿದ್ದು, ಈಗ ಮಠದ ಅಂಗಳದಲ್ಲೂ ರಾಜಕೀಯ ನೆರಳು ಗೋಚರಿಸುವಂತಾಗಿದೆ.
