Asianet Suvarna News Asianet Suvarna News

ನೊಬಲ್ ಪುರಸ್ಕೃತ ಸಿ.ವಿ.ರಾಮನ್'ರ ಬೆಂಗಳೂರು ಮನೆಯಲ್ಲಿ ಶ್ರೀಗಂಧದ ಮರ ಕಳವು

ಮಲ್ಲೇಶ್ವರ 15ನೇ ಅಡ್ಡರಸ್ತೆಯಲ್ಲಿರುವ ವಿಜ್ಞಾನಿ ಸಿ.ವಿ.ರಾಮನ್ ಅವರ ನಿವಾಸವು ಸರ್ಕಾರ ಅಧೀನದ ಟ್ರಸ್ಟ್ ಸ್ವಾಮ್ಯದಲ್ಲಿದ್ದು, ಈ ಮನೆ ಕಾವಲಿಗೆ ಗಂಗಾಧರ್ ಮತ್ತು ಶ್ರೀನಿವಾಸ್ ಅವರನ್ನು ಖಾಸಗಿ ಭದ್ರತಾ ಏಜೆನ್ಸಿ ಮೂಲಕ ಟ್ರಸ್ಟ್ ನೇಮಿಸಿತ್ತು

Sandalwood Tree Stolen at CV Raman Bengaluru House

ಬೆಂಗಳೂರು(ನ.12): ರಾಜಧಾನಿಯ ಮಲ್ಲೇಶ್ವರದಲ್ಲಿರುವ ನೊಬೆಲ್ ಪುರಸ್ಕೃತ ಖ್ಯಾತ ವಿಜ್ಞಾನಿ, ದಿವಂಗತ ಸಿ.ವಿ.ರಾಮನ್ ಅವರ ನಿವಾಸದ ಭದ್ರತಾ ಸಿಬ್ಬಂದಿಗೆ ಜೀವ ಬೆದರಿಕೆ ಹಾಕಿ ಮನೆ ಆವರಣದಲ್ಲಿ ಬೆಳೆದಿದ್ದ ಲಕ್ಷಾಂತರ ರು ಮೌಲ್ಯದ ಎರಡು ಶ್ರೀಗಂಧದ ಮರಗಳನ್ನು ದುಷ್ಕರ್ಮಿಗಳು ಕಳವು ಮಾಡಿರುವ ಘಟನೆ ಶನಿವಾರ ಮುಂಜಾನೆ ನಡೆದಿದೆ.

ಮುಂಜಾನೆ 3 ಗಂಟೆ ಸುಮಾರಿಗೆ ಕಾರಿನಲ್ಲಿ ಆಗಮಿಸಿದ್ದ 6 ಮಂದಿ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದು, ಆರೋಪಿಗಳ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಮಲ್ಲೇಶ್ವರ 15ನೇ ಅಡ್ಡರಸ್ತೆಯಲ್ಲಿರುವ ವಿಜ್ಞಾನಿ ಸಿ.ವಿ.ರಾಮನ್ ಅವರ ನಿವಾಸವು ಸರ್ಕಾರ ಅಧೀನದ ಟ್ರಸ್ಟ್ ಸ್ವಾಮ್ಯದಲ್ಲಿದ್ದು, ಈ ಮನೆ ಕಾವಲಿಗೆ ಗಂಗಾಧರ್ ಮತ್ತು ಶ್ರೀನಿವಾಸ್ ಅವರನ್ನು ಖಾಸಗಿ ಭದ್ರತಾ ಏಜೆನ್ಸಿ ಮೂಲಕ ಟ್ರಸ್ಟ್ ನೇಮಿಸಿತ್ತು. ಎಂದಿನಂತೆ ರಾತ್ರಿ ಪಾಳೆಯದಲ್ಲಿ ಅವರು ಭದ್ರತಾ ಕಾರ್ಯದಲ್ಲಿದ್ದರು. ಬೆಳಗಿನ ಜಾವ 3 ಗಂಟೆ ಸುಮಾರಿಗೆ ಕಾರಿನಲ್ಲಿ ಆಗಮಿಸಿದ ಆರು ಮಂದಿ ಕಿಡಿಗೇಡಿಗಳು, ಇಬ್ಬರು ಕಾವಲುಗಾರರಿಗೆ ಮಾರಕಾಸ್ತ್ರಗಳಿಂದ ಜೀವ ಬೆದರಿಕೆ ಹಾಕಿ ಮನೆ ಆವರಣವನ್ನು ಪ್ರವೇಶಿಸಿದ್ದಾರೆ.

ನಂತರ ಅಲ್ಲಿದ್ದ 16 ಮತ್ತು 18 ಅಡಿ ಎತ್ತರದ ಎರಡು ಶ್ರೀಗಂಧದ ಮರಗಳನ್ನು ಕತ್ತರಿಸಿದ ಆರೋಪಿಗಳು, ನಂತರ ಅವುಗಳನ್ನು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಕೃತ್ಯವನ್ನು ಪೂರ್ವ ನಿಯೋಜಿತವಾಗಿ ಆರೋಪಿಗಳು ಎಸಗಿದ್ದಾರೆ. ಮನೆ ಆವರಣದಲ್ಲಿ ಶ್ರೀಗಂಧ ಮರಗಳು ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಕಲೆ ಬಳಿಕ ಕಳ್ಳತನ ಕೃತ್ಯ ಸಂಚು ರೂಪಿಸಿರುವ ಸಾಧ್ಯತೆಗಳಿವೆ. ಈಗಾಗಲೇ ಘಟನೆ ನಡೆದ ಸುತ್ತಮುತ್ತ ಕಟ್ಟಡಗಳ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿ ಪಡೆದು ಪರಿಶೀಲಿಸಲಾಗಿದ್ದು, ಶ್ರೀಗಂಧ ಮರ ಕಳವು ಪ್ರಕರಣದ ಹಳೆಯ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಆದಷ್ಟು ಬೇಗ ಕಳ್ಳರನ್ನು ಬಂಧಿಸುತ್ತೇವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow Us:
Download App:
  • android
  • ios