ಅನಾರೋಗ್ಯದೊಂದಿಗೆ 2 ದಶಕಗಳ ಹೋರಾಟ ನಡೆಸಿದ್ದ ’ರೆಬೆಲ್ ಸ್ಟಾರ್’!
ಅಂಬರೀಷ್ ಅವರಿಗೆ ಸುಮಾರು 17 ವರ್ಷಗಳ ಹಿಂದೆ ಸಣ್ಣ ಮಟ್ಟದ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು ಕಾಲಕಾಲಕ್ಕೆ ಚಿಕಿತ್ಸೆ ಪಡೆದು ಆರೋಗ್ಯವನ್ನು ಕಾಪಾಡಿಕೊಂಡಿದ್ದರು.
ಬೆಂಗಳೂರು[ನ.25]: ರೆಬೆಲ್‌ಸ್ಟಾರ್ ಅಂಬರೀಶ್ ಅವರು ಶನಿವಾರ ತಮ್ಮ ಕೊನೆ ಉಸಿರೆಳೆಯುವವರೆಗೆ ಸುಮಾರು ಎರಡು ದಶಕಗಳಷ್ಟು ಸುದೀರ್ಘ ಕಾಲ ಅನಾರೋಗ್ಯ ಸಮಸ್ಯೆಯೊಂದಿಗೆ ಹೋರಾಟ ನಡೆಸಿದ್ದರು. ಅಂಬರೀಶ್ ಅವರಿಗೆ ಸುಮಾರು 17 ವರ್ಷಗಳ ಹಿಂದೆ ಸಣ್ಣ ಮಟ್ಟದ ಶ್ವಾಸಕೋಶದ ಸೋಂಕು ಕಾಣಿಸಿಕೊಂಡಿತ್ತು. ಬಳಿಕ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದು ಕಾಲಕಾಲಕ್ಕೆ ಚಿಕಿತ್ಸೆ ಪಡೆದು ಆರೋಗ್ಯವನ್ನು ಕಾಪಾಡಿಕೊಂಡಿದ್ದರು.
ಇದನ್ನೂ ಓದಿ: ಕೊನೆಯ ದಿನವನ್ನು ನೆಚ್ಚಿನ ಮನೆಯಲ್ಲಿ ಕಳೆಯಲಿಲ್ಲ ಅಂಬಿ!
ಈ ನಡುವೆ 2014ರ ಫೆಬ್ರುವರಿಯಲ್ಲಿ ಏಕಾಏಕಿ ತೀವ್ರ ಎದೆನೋವು, ಉಸಿರಾಟ ಸಮಸ್ಯೆ ಹಾಗೂ ಶ್ವಾಸಕೋಶ ಸೋಂಕಿನಿಂದಾಗಿ ಫೆ.21 ರಂದು ವಿಕ್ರಂ ಆಸ್ಪತ್ರೆಗೆ ದಾಖಲಾಗಿದ್ದರು. ಈ ಒಂದು ವಾರದ ಕಾಲ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆದರೂ ವೇಳೆಗೆ ಪರಿಸ್ಥಿತಿ ಗಂಭೀರವಾಗಿದ್ದರಿಂದ ಚಿಕಿತ್ಸೆಗೆ ಸ್ಪಂದಿಸದೆ ತೀವ್ರ ಸಮಸ್ಯೆ ಉಂಟಾಗಿತ್ತು. ಈ ವೇಳೆ ಸೂಪರ್‌ಸ್ಟಾರ್ ರಜನಿಕಾಂತ್ ಸಲಹೆ ಮೇರೆಗೆ 2014 ಮಾ.1ರಂದು ಹೆಚ್ಚುವರಿ ಚಿಕಿತ್ಸೆಗಾಗಿ ಸಿಂಗಾಪುರದ ಮೌಂಟ್ ಎಲಿಜೆಬೆತ್ ಆಸ್ಪತ್ರೆಗೆ ಏರ್‌ಆ್ಯಂಬುಲೆನ್ಸ್ ಮೂಲಕ ಕರೆದೊಯ್ಯಲಾಗಿತ್ತು.
ಇದನ್ನೂ ಓದಿ: ಸುಮಲತಾ ಅಂಬರೀಷ್ ನೆನಪಿಸಿಕೊಂಡ ಲವ್ ಸ್ಟೋರಿ
ಸುಮಾರು 40 ದಿನಗಳ ಕಾಲ ಸುದೀರ್ಘ ಚಿಕಿತ್ಸೆ ಹಾಗೂ ಮಲೇಷಿಯಾದಲ್ಲಿ ವಿಶ್ರಾಂತಿ ಬಳಿಕ 2014ರ ಏಪ್ರಿಲ್ 11 ರಂದು ತವರಿಗೆ ವಾಪಸಾಗಿದ್ದರು. ಬಳಿಕ ಆಗಾಗ್ಗೆ ಫಾಲೋಅಪ್ ಚಿಕಿತ್ಸೆ ಪಡೆಯುತ್ತಿದ್ದರು. 2017ರಲ್ಲಿ ಸ್ವಲ್ಪ ಮಟ್ಟಿಗೆ ಆಯಾಸಗೊಂಡಿದ್ದರಾದರೂ ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಶನಿವಾರ ಏಕಾಏಕಿ ಅನಾರೋಗ್ಯಕ್ಕೆ ತುತ್ತಾಗಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಇದನ್ನೂ ಓದಿ: ’ಅಂಬ್ರೀಶಣ್ಣ ಬೈದ್ರು’ ಎಂದು ಖುಷಿ ಪಡುತ್ತಿದ್ದ ಅಭಿಮಾನಿಗಳು...!
ಸಿದ್ದರಾಮಯ್ಯ ನೇತೃತ್ವದ ಸರಕಾರದ ಅವಧಿಯಲ್ಲಿ ವಸತಿ ಸಚಿವರಾಗಿದ್ದಾಗಲೇ ಅನಾರೋಗ್ಯಕ್ಕೆ ತುತ್ತಾಗಿದ್ದ ಅಂಬರೀಶ್ ಅವರ ಚಿಕಿತ್ಸಾ ವೆಚ್ಚವನ್ನು ಸಂಪೂರ್ಣ ಸರಕಾರವೇ ಭರಿಸಿತ್ತು. 40 ದಿನಗಳ ಚಿಕಿತ್ಸೆಗೆ ಆಗಿದ್ದ 1.16 ಕೋಟಿ ರು. ವೆಚ್ಚವನ್ನು ಭರಿಸುವುದಾಗಿ 2014ರ ಜುಲೈ 11ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಅನುಮೋದನೆ ನೀಡಿತ್ತು.