ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯರಾಗಿರುವ ಸಲ್ಮಾನ್ ನದ್ವಿ, ಎರಡು ದಿನಗಳ ಹಿಂದೆ ರವಿಶಂಕರ್ ಗುರೂಜಿಯನ್ನು ಭೇಟಿಯಾಗಿ ಅಯೋಧ್ಯೆ ವಿಚಾರವಾಗಿ ಮಾತುಕತೆ ನಡೆಸಿದ್ದರು
ನವದೆಹಲಿ: ನ್ಯಾಯಾಲಯದ ಹೊರಗೆ ಬಾಬ್ರಿ ಮಸೀದಿ-ರಾಮಮಂದಿರ ವಿವಾದ ಇತ್ಯರ್ಥ ಪ್ರಯತ್ನಕ್ಕೆ ಹಿನ್ನಡೆಯಾಗಿದೆ.
ತನ್ನ ಒಪ್ಪಿಗೆಯಿಲ್ಲದೇ ಅಯೋಧ್ಯೆ ವಿವಾದವನ್ನು ನ್ಯಾಯಾಲಯದ ಹೊರಗೆ ಇತ್ಯರ್ಥ ಮಾಡುವ ಪ್ರಕ್ರಿಯೆಯಲ್ಲಿ ಪಾಲ್ಗೊಂಡ ಮೌಲಾನ ಸಲ್ಮಾನ್ ನದ್ವಿಯವರನ್ನು ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿಯು ವಜಾಗೊಳಿಸಿದೆ.
ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸದಸ್ಯರಾಗಿರುವ ಸಲ್ಮಾನ್ ನದ್ವಿ, ಎರಡು ದಿನಗಳ ಹಿಂದೆ ರವಿಶಂಕರ್ ಗುರೂಜಿಯನ್ನು ಭೇಟಿಯಾಗಿ ಅಯೋಧ್ಯೆ ವಿಚಾರವಾಗಿ ಮಾತುಕತೆ ನಡೆಸಿದ್ದರು.
ಅಯೋಧ್ಯೆ ವಿವಾದ ಕುರಿತಂತೆ ನ್ಯಾಯಾಲಯದ ತೀರ್ಮಾನವವನ್ನೇ ನೆಚ್ಚಿಕೊಳ್ಳುವ ತನ್ನ ನಿಲುವನ್ನು ಪುನರುಚ್ಚರಿಸಿದ ಮಂಡಳಿ, ಸಲ್ಮಾನ್ ನದ್ವಿಯವರು ಮಂಡಳಿಯ ನಿಲುವಿನ ವಿರುದ್ಧವಾಗಿ ನಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಅವರನ್ನು ವಜಾಗೊಳಿಸಲಾಗಿದೆ ಎಂದು ತಿಳಿಸಿದೆ.
ಮೌಲಾನ ಸಲ್ಮಾನ್ ನದ್ವಿಯವರನ್ನು ಮಂಡಳಿಯಿಂದ ವಜಾಗೊಳಿಸಿರುವ ಬಗ್ಗೆ ಆರ್ಟ್ ಆಫ್ ಲಿವಿಂಗ್’ನ ಶ್ರೀ ಶ್ರೀ ರವಿಶಂಕರ್ ಗುರೂಜಿ ಕೂಡಾ ಅಚ್ಚರಿಯನ್ನು ವ್ಯಕ್ತಪಡಿಸಿದ್ದಾರೆ.
