20 ವರ್ಷ ಹಿಂದೆ ರಾಜಸ್ಥಾನದ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಡೆದಿದ್ದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್‌ ಖಾನ್‌ ದೋಷಿ ಎಂದು ತೀರ್ಪಿತ್ತಿರುವ ಜೋಧಪುರದ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರುಪಾಯಿ ದಂಡ ವಿಧಿಸಿದೆ.

ಜೋಧಪುರ : 20 ವರ್ಷ ಹಿಂದೆ ರಾಜಸ್ಥಾನದ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ನಡೆದಿದ್ದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ನಟ ಸಲ್ಮಾನ್‌ ಖಾನ್‌ ದೋಷಿ ಎಂದು ತೀರ್ಪಿತ್ತಿರುವ ಜೋಧಪುರದ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯ 5 ವರ್ಷ ಜೈಲು ಶಿಕ್ಷೆ ಹಾಗೂ 10 ಸಾವಿರ ರುಪಾಯಿ ದಂಡ ವಿಧಿಸಿದೆ.

ಆದರೆ ಇದೇ ವೇಳೆ ಪ್ರಕರಣದ ಆರೋಪಿಗಳಾಗಿದ್ದ ಸೈಫ್‌ ಅಲಿ ಖಾನ್‌, ಟಬು, ನೀಲಂ ಹಾಗೂ ಸೋನಾಲಿ ಬೇಂದ್ರೆ ಹಾಗೂ ಸ್ಥಳೀಯ ವ್ಯಕ್ತಿ ದುಷ್ಯಂತ್‌ ಸಿಂಗ್‌ ಅವರನ್ನು ‘ಸಂದೇಹದ ಲಾಭ’ದ ಆಧಾರಿಸಿ ಖುಲಾಸೆಗೊಳಿಸಲಾಗಿದೆ.

ನ್ಯಾಯಾಲಯವು ಮಧ್ಯಾಹ್ನ 2 ಗಂಟೆ ಸುಮಾರಿಗೆ ಜೈಲು ಶಿಕ್ಷೆ ಪ್ರಕಟಿಸುತ್ತಿದ್ದಂತೆಯೇ ಸಲ್ಮಾನ್‌ ಖಾನ್‌ರನ್ನು ನೇರವಾಗಿ ಜೋಧಪುರ ಸೆಂಟ್ರಲ್‌ ಜೈಲಿಗೆ ಕರೆದೊಯ್ಯಲಾಯಿತು. ಅಲ್ಲಿ ಅವರಿಗೆ ‘ಕೈದಿ ನಂ.106’ ಎಂದು ಪರಿಗಣಿಸಲಾಯಿತು. ಅಲ್ಲಿಯೇ ಅವರು ರಾತ್ರಿ ಕಳೆದರು.

ಜೈಲಿಗೆ ಕರೆದೊಯ್ಯುವ ಸಂದರ್ಭದಲ್ಲಿ ಸಲ್ಮಾನ್‌ರನ್ನು ನೋಡಲು ಸಿನಿ ಅಭಿಮಾನಿಗಳು, ಮಾಧ್ಯಮದವರು, ಭದ್ರತಾ ಸಿಬ್ಬಂದಿಗಳು ರಸ್ತೆಯ ಇಕ್ಕೆಲಗಳಲ್ಲಿ ಸುಮಾರು 2 ಕಿ.ಮೀ. ಉದ್ದಕ್ಕೂ ಸಾಲುಗಟ್ಟಿನಿಂತಿದ್ದರು.

ದೋಷಿಯಾದ ಕೆಲವೇ ಹೊತ್ತಿನಲ್ಲಿ ಸಜೆ ಪ್ರಕಟ:

ಬೆಳಗ್ಗಿನ ವಿಚಾರಣೆಯಲ್ಲಿ ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಪ್ರೇಟ್‌ ದೇವಕುಮಾರ್‌ ಖತ್ರಿ ಅವರು ಸಲ್ಮಾನ್‌ ಖಾನ್‌ ಅವರನ್ನು ದೋಷಿ ಎಂದು ಘೋಷಿಸಿ ಇನ್ನುಳಿದವರನ್ನು ಖುಲಾಸೆಗೊಳಿಸಿದರು ಹಾಗೂ ಶಿಕ್ಷೆಯ ಪ್ರಮಾಣವನ್ನು ಮಧ್ಯಾಹ್ನ 2ರ ನಂತರ ಘೋಷಿಸುವುದಾಗಿ ಹೇಳಿದರು.

ನಂತರ ಮಧ್ಯಾಹ್ನದ ಕಲಾಪದಲ್ಲಿ ನ್ಯಾಯಾಧೀಶರು ಸಲ್ಮಾನ್‌ ಖಾನ್‌ ಅವರಿಗೆ ವನ್ಯಜೀವಿ ಸಂರಕ್ಷಣಾ ಕಾಯ್ದೆ ‘9/51’ ಪರಿಚ್ಛೇದದ ಅನ್ವಯ 5 ವರ್ಷ ಕಾಲ ಜೈಲು ಶಿಕ್ಷೆ ಹಾಗೂ 10 ಸಾವಿರ ರುಪಾಯಿ ದಂಡ ವಿಧಿಸಿದರು. ಈ ಪರಿಚ್ಛೇದದ ಅನ್ವಯ ಗರಿಷ್ಠ 6 ವರ್ಷ ಶಿಕ್ಷೆ ವಿಧಿಸಲು ಅವಕಾಶವಿತ್ತು.

‘ಆಪಾದಿತ ಒಬ್ಬ ನಟ. ಆತನನ್ನು ಜನರು ಅನುಕರಿಸುತ್ತಾರೆ. ಆದರೆ ಆತ ಕೃಷ್ಣಮೃಗ ಕೊಂದ ವಿಧಾನ ಹೇಯವಾದದ್ದು’ ಎಂದು ನ್ಯಾಯಾಧೀಶರು ಕಟುವಾಗಿ ನುಡಿದರು.

ಸೋದರಿಯರ ಕಣ್ಣೀರು: ನ್ಯಾಯಾಧೀಶರು ತೀರ್ಪು ಪ್ರಕಟಿಸುವಾಗ ಎಲ್ಲ ಆಪಾದಿತರೂ ಕಲಾಪದಲ್ಲಿ ಉಪಸ್ಥಿತರಿದ್ದರು. ಖುಲಾಸೆಯಾದವರ ಮುಖದಲ್ಲಿ ಮಂದಹಾಸ ಮಿನುಗಿದರೆ, ದೋಷಿಯಾದ ಸಲ್ಮಾನ್‌ ಖಾನ್‌ ಹಾಗೂ ಅವರ ಕುಟುಂಬದವರ ಮುಖ ಕಪ್ಪಿಟ್ಟಿತು. ಸಲ್ಮಾನ್‌ ಖಾನ್‌ ಅವರು ತೀರ್ಪು ಪ್ರಕಟವಾಗುತ್ತಿದ್ದಂತೆಯೇ ಕಣ್ಣೀರು ಹಾಕಿದರು. ಆದರೆ ಸಲ್ಮಾನ್‌ಗೆ ಒತ್ತಡಕ್ಕೆ ಒಳಗಾಗದಂತೆ, ಅವರ ಸೋದರಿಯರು ಒತ್ತಡ ನಿಗ್ರಹ ಮಾತ್ರೆಗಳನ್ನು ನೀಡಿದ್ದರೆಂದು ಮೂಲಗಳು ಹೇಳಿವೆ. ಇದೇ ವೇಳೆ ಸಲ್ಮಾನ್‌ ಖಾನ್‌ಗೆ ಶಿಕ್ಷೆ ಪ್ರಕಟವಾಗುತ್ತಿದ್ದಂತೆಯೇ ಸಲ್ಮಾನ್‌ ಸೋದರಿಯರಾದ ಅರ್ಪಿತಾ ಖಾನ್‌ ಹಾಗೂ ಅಲ್ವಿರಾ ಖಾನ್‌ ಅವರು ಗೊಳೋ ಎಂದು ಅತ್ತರು. ವಿಚಾರಣೆಯುದ್ದಕ್ಕೂ ಒಬ್ಬರನ್ನೊಬ್ಬರು ಅಪ್ಪಿಕೊಂಡೇ ಕೂತಿದ್ದ ಅರ್ಪಿತಾ ಮತ್ತು ಅಲ್ವಿರಾ, ಸಲ್ಮಾನ್‌ ದೋಷಿಯಾಗುತ್ತಿದ್ದಂತೆಯೇ ಭಾವುಕರಾಗಿ ಕಣ್ಣೀರು ಹಾಕಿದರು.

ಆಸಾರಾಂ ಇರುವ ಜೈಲಲ್ಲೇ ಸಲ್ಲು: ಸಲ್ಮಾನ್‌ ಖಾನ್‌ ಅವರದ್ದು ಜೋಧಪುರ ಕೇಂದ್ರ ಕಾರಾಗೃಹದಲ್ಲಿ ಇದು ನಾಲ್ಕನೇ ವಾಸವಾಗಿದೆ. ಇದೇ ಜೈಲಿನಲ್ಲಿ ಅತ್ಯಾಚಾರ ಪ್ರಕರಣದ ಆರೋಪಿಯಾಗಿರುವ ಆಧ್ಯಾತ್ಮಿಕ ಗುರು ಆಸಾರಾಂ ಬಾಪು ಕೂಡ ಇದ್ದಾರೆ. ಬ್ಯಾರಕ್‌ ನಂ.2ನಲ್ಲಿ ಸಲ್ಮಾನ್‌ ಖಾನ್‌ರನ್ನು ಇಡಲಾಗುತ್ತಿದ್ದು, ಭಾರಿ ಭದ್ರತೆ ಕಲ್ಪಿಸಲಾಗಿದೆ ಎಂದು ಜೈಲಿನ ಮೂಲಗಳು ಹೇಳಿವೆ. ಈ ಮುನ್ನ 1998, 2006 ಹಾಗೂ 2007ರಲ್ಲಿ ಸಲ್ಮಾನ್‌ ಇಲ್ಲಿ ಮೂರು ಬಾರಿ ಕೃಷ್ಣಮೃಗ/ಚಿಂಕಾರಾ ಬೇಟೆ ಪ್ರಕರಣಗಳಿಗೆ ಸಂಬಂಧಿಸಿದಂತೆ ಬಂಧಿತರಾದಾಗ ಇದ್ದರು.

ಕೃಷ್ಣಮೃಗ ಅಳಿವಿನ ಅಂಚಿನ ಜೀವಿ

ಕೃಷ್ಣಮೃಗವು ಅಳಿವಿನ ಅಂಚಿನಲ್ಲಿರುವ ವನ್ಯಜೀವಿ. ಹೆಸರಿನಲ್ಲೇ ಇರುವಂತೆ ಇದು ಕಪ್ಪು ಬಣ್ಣದ ಜಿಂಕೆಯಾಗಿದೆ. ಇದನ್ನು 1972ರ ವನ್ಯಜೀವಿ ಸಂರಕ್ಷಣಾ ಕಾಯ್ದೆಯ 1ನೇ ಪರಿಚ್ಛೇದದ ಪ್ರಕಾರ ಅಳಿವಿನ ಅಂಚಿನಲ್ಲಿರುವ ಪ್ರಾಣಿ ಎಂದು ಘೋಷಿಸಲಾಗಿದೆ. ಇದನ್ನು ಕೊಂದವರಿಗೆ ಗರಿಷ್ಠ 6 ವರ್ಷ ಶಿಕ್ಷೆ ವಿಧಿಸಲು ಅವಕಾಶವಿದೆ. ಕರ್ನಾಟಕದ ರಾಣೆಬೆನ್ನೂರು ತಾಕೂಕಿನಲ್ಲಿ ಕೂಡ ಕೃಷ್ಣಮೃಗ ಅಭಯಾರಣ್ಯ ಇದೆ.

ಸಲ್ಮಾನ್‌ ವಿರುದ್ಧ ಹೋರಾಡಿದ್ದ ಬಿಷ್ಣೋಯ್‌ ಸಮುದಾಯ

ನವದೆಹಲಿ: ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಕೊನೆಗೂ ಸೂಪರ್‌ಸ್ಟಾರ್‌ ಸಲ್ಮಾನ್‌ ಖಾನ್‌ ವಿರುದ್ಧ ಶಿಕ್ಷೆ ಘೋಷಣೆಯಾಗಿದೆ. ಆದರೆ, 1998ರ ಈ ಪ್ರಕರಣದಲ್ಲಿ ಕಳೆದ 20 ವರ್ಷಗಳಿಂದ ಖ್ಯಾತ ನಟನನ್ನು ಶಿಕ್ಷೆಗೆ ಗುರಿಪಡಿಸಲು ಹೋರಾಡಿದ್ದುದು ರಾಜಸ್ಥಾನದಲ್ಲಿ ವನ್ಯಪ್ರಾಣಿಗಳು ಮತ್ತು ನಿಸರ್ಗದೊಂದಿಗೆ ಅತ್ಯಾಪ್ತತೆ ಹೊಂದಿರುವ ಬಿಷ್ಣೋಯ್‌ ಸಮುದಾಯ. ವಿಷ್ಣು ಆರಾಧಕರಾದ ಬಿಷ್ಣೋಯ್‌ ಸಮುದಾಯದ ಸದಸ್ಯರು ಈ ಪ್ರಕರಣದಲ್ಲಿ ಪಟ್ಟು ಹಿಡಿದು ಹೋರಾಡಿದ ಪರಿಣಾಮ ನಟ ಖಾನ್‌ ವಿರುದ್ಧ ಶಿಕ್ಷೆ ಘೋಷಣೆಯಾಗಲು ಕಾರಣವಾಗಿದೆ. ಬಿಷ್ಣೋಯ್‌ ಪಂಥವನ್ನು 15ನೇ ಶತಮಾನದಲ್ಲಿ ಗುರು ಜಂಬೇಶ್ವರ ಸ್ಥಾಪಿಸಿದರು ಎನ್ನಲಾಗುತ್ತದೆ. ಕೆಲವರ ಪ್ರಕಾರ, ವಿಷ್ಣುವಿನ ಆರಾಧಕರಾಗಿರುವುದರಿಂದ ಈ ಸಮುದಾಯಕ್ಕೆ ಈ ಹೆಸರು ಬಂದಿದೆ ಎನ್ನಲಾಗುತ್ತದೆ. ಇನ್ನೊಂದೆಡೆ ಜಂಬೇಶ್ವರ ತಮ್ಮ ಹಿಂಬಾಲಕರಿಗೆ 29 ನಿಯಮಗಳನ್ನು ಬೋಧಿಸಿದ್ದು, ಅದರ ಸಂಕೇತವಾಗಿ ರಾಜಸ್ಥಾನ ಭಾಷೆಯಲ್ಲಿ ಇಪ್ಪತ್ತು (ಬಿಷ್‌) ಒಂಬತ್ತು (ನೊಯಿ) ಎಂದು ಗುರುತಿಸಲಾಗುತ್ತದೆ. ಅವುಗಳಲ್ಲಿ 8 ನಿಯಮಗಳು ಪರಿಸರ ಮತ್ತು ಪ್ರಾಣಿಗಳ ಸಂರಕ್ಷಣೆ ಕುರಿತಾಗಿದೆ.

ಚಿಂಕಾರಾ ಬೇಟೆ, ಹಿಟ್‌-ರನ್‌ನಲ್ಲಿ ಖುಲಾಸೆ

ಚಿಂಕಾರಾ (ಜಿಂಕೆ ಜಾತಿಯ ಒಂದು ಪ್ರಾಣಿ) ಬೇಟೆ ಕುರಿತ ಪ್ರಕರಣದಲ್ಲೂ ಸಲ್ಮಾನ್‌ ಖಾನ್‌ ದೋಷಿ ಎಂದು ಸಾಬೀತಾಗಿ, ಐದು ವರ್ಷ ಶಿಕ್ಷೆಯಾಗಿತ್ತು. ಆದರೆ ರಾಜಸ್ಥಾನ ಹೈಕೋರ್ಟ್‌ ಸಲ್ಮಾನ್‌ ಖಾನ್‌ ಅವರನ್ನು ಖುಲಾಸೆಗೊಳಿಸಿತ್ತು. ಇದರ ವಿರುದ್ಧ ರಾಜಸ್ಥಾನ ಸರ್ಕಾರ ಸಲ್ಲಿಸಿರುವ ಮೇಲ್ಮನವಿ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಇನ್ನು ಮುಂಬೈನಲ್ಲಿ ಸಂಭವಿಸಿದ ಹಿಟ್‌ ಆ್ಯಂಡ್‌ ರನ್‌ ಪ್ರಕರಣದಲ್ಲಿ ಸಲ್ಲು 5 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದರೂ, ಮೇಲ್ಮನವಿ ಸಲ್ಲಿಸಿದ ಬಳಿಕ ಖುಲಾಸೆಯಾಗಿದ್ದರು.

ಏನಿದು ಪ್ರಕರಣ?

‘ಹಮ್‌ ಸಾಥ್‌ ಸಾಥ್‌ ಹೈ’ ಎಂಬ ಹಿಂದಿ ಚಿತ್ರದ ಚಿತ್ರೀಕರಣಕ್ಕೆಂದು ರಾಜಸ್ಥಾನದಲ್ಲಿ ತಂಗಿದ್ದ ಸಲ್ಮಾನ್‌ ಖಾನ್‌, ಸೈಫ್‌ ಅಲಿ ಖಾನ್‌, ಟಬು, ಸೋನಾಲಿ ಬೇಂದ್ರ ಹಾಗೂ ನೀಲಂ ಅವರು, 1998ರ ಅ.1 ಹಾಗೂ 2ರ ನಡುವಿಬ ರಾತ್ರಿ ಜೋಧಪುರ ಬಳಿಯ ಕಂಕಣಿ ಗ್ರಾಮದಲ್ಲಿ ಜಿಪ್ಸಿಯಲ್ಲಿ ಪ್ರಯಾಣಿಸುತ್ತಿದ್ದರು. ಆಗ ಅವರ ಕಣ್ಣಿಗೆ ಕೃಷ್ಣಮೃಗಗಳ ಹಿಂಡು ಕಾಣಿಸಿತ್ತು. ಚಾಲಕನ ಸೀಟಿನಲ್ಲಿ ಕೂತಿದ್ದ ಸಲ್ಮಾನ್‌ ಖಾನ್‌ ಅವರು ಆ ಹಿಂಡಿನತ್ತ ಗುಂಡು ಹಾರಿಸಿದ್ದರು. ಎರಡು ಕೃಷ್ಣಮೃಗಗಳು ಮೃತಪಟ್ಟಿದ್ದವು. ಇದನ್ನು ಸ್ಥಳೀಯ ಬಿಷ್ಣೋಯಿ ಜನಾಂಗದವರು ಗಮನಿಸಿ, ಬೆನ್ನಟ್ಟಿದಾಗ ಕೃಷ್ಣಮೃಗಗಳನ್ನು ಅಲ್ಲೇ ಬಿಟ್ಟು ಸಲ್ಮಾನ್‌ ಖಾನ್‌ ಮತ್ತು ತಂಡ ಪರಾರಿಯಾಗಿತ್ತು.

ಮುಂದೇನು?

ಸಲ್ಮಾನ್‌ ಖಾನ್‌ ಅವರಿಗೆ 3 ವರ್ಷಕ್ಕಿಂತ ಹೆಚ್ಚು ವಾಸ ಜೈಲು ಆಗಿರುವ ಕಾರಣ, ಅವರಿಗೆ ಜೈಲು ಶಿಕ್ಷೆ ವಿಧಿಸಿರುವ ಮ್ಯಾಜಿಸ್ಪ್ರೇಟ್‌ ನ್ಯಾಯಾಲಯಕ್ಕೆ ಜಾಮೀನು ನೀಡುವ ಅಧಿಕಾರವಿಲ್ಲ. ಹೀಗಾಗಿ ಅವರು ಜಾಮೀನು ಕೋರಿ ಜಿಲ್ಲಾ ನ್ಯಾಯಾಲಯ ಅಥವಾ ಹೈಕೋರ್ಟ್‌ ಮೊರೆ ಹೋಗುವ ಸಾಧ್ಯತೆ ಉದೆ. ತೀರ್ಪು ಪ್ರಶ್ನಿಸಿ ರಾಜಸ್ಥಾನ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವ ಇಂಗಿತವನ್ನು ಅವರ ವಕೀಲರು ವ್ಯಕ್ತಪಡಿಸಿದ್ದಾರೆ.

ನಟನನ್ನು ಜನ ಅನುಸರಿಸುತ್ತಾರೆ

ಆರೋಪಿಯು (ಸಲ್ಮಾನ್‌) ಒಬ್ಬ ಚಲನಚಿತ್ರ ನಟ. ಜನ ಆತನನ್ನು ಗಮನಿಸುತ್ತಾರೆ. ಆತನ ನಡೆ-ನುಡಿಗಳತ್ತ ಆಕರ್ಷಿತರಾಗುತ್ತಾರೆ. ಆದರೆ ಕೃಷ್ಣಮೃಗವನ್ನು ಈತ ಕೊಂದಿದ್ದು ಹೇಯ ಕೃತ್ಯ. ಇದು ದೊಡ್ಡ ಪ್ರಮಾಣದ ಬೇಟೆ.

- ದೇವಕುಮಾರ್‌ ಖತ್ರಿ, ಮುಖ್ಯ ಜುಡಿಷಿಯಲ್‌ ಮ್ಯಾಜಿಸ್ಪ್ರೇಟ್‌

ಉಳಿದವರ ಖುಲಾಸೆ ಏಕೆ?

ಕೃಷ್ಣಮೃಗ ಹತ್ಯೆಯಲ್ಲಿ ಟಬು, ಸೈಫ್‌, ನೀಲಂ, ಸೋನಾಲಿ ಮತ್ತು ದುಷ್ಯಂತ್‌ ಭಾಗಿಯಾಗಿದ್ದಾರೆ ಎನ್ನುವುದನ್ನು ಖಚಿತವಾಗಿ ಸಾಬೀತುಪಡಿಸುವುದು ಸಾಧ್ಯವಾಗಿಲ್ಲ. ಹೀಗಾಗಿ ಸಂದೇಹದ ಲಾಭ ಆಧರಿಸಿ ಇವರನ್ನೆಲ್ಲಾ ಖುಲಾಸೆಗೊಳಿಸಲಾಗುತ್ತಿದೆ ಎಂದು ಕೋರ್ಟ್‌ ಹೇಳಿತು.

.600 ಕೋಟಿ ಚಿತ್ರಗಳ ಸ್ಥಿತಿ ಅಯೋಮಯ

ಸಲ್ಮಾನ್‌ ಖಾನ್‌ ಅವರು ದೋಷಿಯಾಗಿರುವ ಕಾರಣ ಅವರು ಅಭಿನಯಿಸುತ್ತಿರುವ ಮೂರು ಚಿತ್ರಗಳ ಭವಿಷ್ಯ ಅಯೋಮಯವಾಗಿದೆ. ಸುಮಾರು 600 ಕೋಟಿ ರು. ಬಂಡವಾಳ ತೂಗುಯ್ಯಾಲೆಯಲ್ಲಿದೆ ಎಂದು ಹೇಳಲಾಗಿದೆ. ‘ರೇಸ್‌-3’, ‘ಭಾರತ್‌’ ಹಾಗೂ ‘ದಬಂಗ್‌-3’ ಚಿತ್ರಗಳಲ್ಲಿ ಸಲ್ಲು ನಟಿಸುತ್ತಿದ್ದಾರೆ. ಇದರಲ್ಲಿ ರೇಸ್‌-3 ಈದ್‌ ಹಬ್ಬದ ವೇಳೆ ಬಿಡುಗಡೆ ಆಗಬೇಕಿದೆ. ಇವೆಲ್ಲವುಗಳು ಸೇರಿ ಸುಮಾರು 600 ಕೋಟಿ ರು. ವೆಚ್ಚದ ಚಿತ್ರಗಳಾಗಿವೆ ಎಂದು ಚಿತ್ರರಂಗದ ವ್ಯಾಪಾರ ವಿಶ್ಲೇಷಕ ಗಿರೀಶ್‌ ವಾಂಖೇಡೆ ಹೇಳಿದ್ದಾರೆ.