ಯಾತ್ರಿಕರ ಮೇಲೆ ದಾಳಿ ಮಾಡಿದ ಉಗ್ರರು ಯಾವ ಸಂಘಟನೆಯವರೆಂಬುದು ಇನ್ನೂ ಗೊತ್ತಾಗಿಲ್ಲ. ಸೇನೆಯು ಇದು ಲಷ್ಕರೆ ತೈಯಬಾ ಸಂಘಟನೆಯ ಕೃತ್ಯ ಎಂದು ಶಂಕಿಸಿದೆ. ಆದರೆ, ತಾವು ಪರಧರ್ಮೀಯವರನ್ನು ಟಾರ್ಗೆಟ್ ಮಾಡುವಷ್ಟು ನೀಚರಲ್ಲ. ಇದು ನಾವು ಮಾಡಿದ ಕೆಲಸವಲ್ಲ ಎಂದು ಎಲ್'ಇಟಿ ಹೇಳಿದೆ.

ನವದೆಹಲಿ(ಜುಲೈ 11): ನಿನ್ನೆ ಅಮರನಾಥ ಯಾತ್ರೆಗೆ ಹೊರಟಿದ್ದ ಬಸ್'ವೊಂದರ ಮೇಲೆ ಉಗ್ರಗಾಮಿಗಳು ದಾಳಿ ಮಾಡಿ 7 ಮಂದಿಯನ್ನು ಹತ್ಯೆಗೈದ ಘಟನೆ ಇಡೀ ದೇಶವನ್ನು ದಂಗುಬಡಿಸಿದೆ. ಆದರೆ, ಡ್ರೈವರ್'ನ ಧೈರ್ಯತನ ಮತ್ತು ಸಮಯಪ್ರಜ್ಞೆಯಿಂದ ಹಲವು ಮಂದಿಯ ಪ್ರಾಣ ಉಳಿದಿದೆ. ಶೇಖ್ ಸಲೀಮ್ ಗಫೂರ್ ಇಲ್ಲದೇ ಹೋಗಿದ್ದರೆ 50ಕ್ಕೂ ಹೆಚ್ಚು ಮಂದಿಯ ಮಾರಣಹೋಮವೇ ಆಗಿಹೋಗುತ್ತಿತ್ತು. ಗಫೂರ್'ನ ಸಾಧನೆಯನ್ನು ಪರಿಗಣಿಸಿ ಅವರಿಗೆ ಸರಕಾರ ಬಹುಮಾನ ನೀಡಲು ನಿರ್ಧರಿಸಿದೆ. ಗಫೂರ್'ಗೆ ಶೌರ್ಯ ಪ್ರಶಸ್ತಿ ನೀಡಲು ನಾಮನಿರ್ದೇಶನ ಮಾಡುವುದಾಗಿ ಗುಜರಾತ್ ಸಿಎಂ ವಿಜಯ್ ರೂಪಾನಿ ಹೇಳಿದ್ದಾರೆ.

ಗಫೂರ್ ಸಾಹಸ ಹೇಗಿತ್ತು?
ರಾತ್ರಿ 8ಗಂಟೆ ಆಸುಪಾಸಿನ ಸಮಯದಲ್ಲಿ ಅಮರನಾಥ ಯಾತ್ರಿಗಳನ್ನ ಹೊತ್ತ ಬಸ್ಸು ಅನಂತನಾಗ್ ಜಿಲ್ಲೆಯಲ್ಲಿ ಬಾಲ್ಟಾಲ್'ನಿಂದ ಮೀರ್ ಬಜಾರ್'ನತ್ತ ಹೊರಟಿತ್ತು. ಗಫೂರ್ ಆ ಬಸ್ಸಿನ ಚಾಲಕ. ಬಸ್ಸಿಗೆ ದಿಢೀರನೇ ಎದಿರುಗೊಂಡ ಉಗ್ರಗಾಮಿಗಳು ಗುಂಡಿನ ಮಳೆ ಸುರಿಸತೊಡಗುತ್ತಾರೆ. ಗುಂಡಿನ ಹೊಡೆತಕ್ಕೆ ಬಸ್ಸಿನಲ್ಲಿದ್ದ ಆರೇಳು ಮಂದಿ ಸಾವನ್ನಪುತ್ತಾರೆ. ಡ್ರೈವರ್ ಗಫೂರ್'ನ ಮೇಲೂ ಗುಂಡಿನ ದಾಳಿ ಮಾಡುತ್ತಾರೆ. ಆದರೆ, ಸಲೀಮ್ ಗಫೂರ್ ವಿಚಲಿತಗೊಳ್ಳದೇ ಬಸ್ಸನ್ನು ಮುನ್ನಡೆಸುತ್ತಾರೆ. ಖಾನಾಬಲ್ ತಲುಪುವವರೆಗೂ ಗಫೂರ್ ತೋರಿದ ಧೈರ್ಯತನ ನಿಜಕ್ಕೂ ಅದ್ಭುತ. ಬಸ್ಸು ಓಡಿಸುವಂತೆ ದೇವರೇ ತನಗೆ ಶಕ್ತಿ ನೀಡಿತು ಎಂದು ಸಲೀಮ್ ಗಫೂರ್ ಹೇಳುತ್ತಾರೆ. ಒಂದು ವೇಳೆ ಗಫೂರ್ ಎದೆಗುಂದಿದ್ದರೆ ಬಸ್ಸಿನಲ್ಲಿದ್ದವರೆಲ್ಲರೂ ಬಲಿಯಾಗಿರುತ್ತಿದ್ದರು.

ಇದೇ ವೇಳೆ, ಯಾತ್ರಿಕರ ಮೇಲೆ ದಾಳಿ ಮಾಡಿದ ಉಗ್ರರು ಯಾವ ಸಂಘಟನೆಯವರೆಂಬುದು ಇನ್ನೂ ಗೊತ್ತಾಗಿಲ್ಲ. ಸೇನೆಯು ಇದು ಲಷ್ಕರೆ ತೈಯಬಾ ಸಂಘಟನೆಯ ಕೃತ್ಯ ಎಂದು ಶಂಕಿಸಿದೆ. ಆದರೆ, ತಾವು ಪರಧರ್ಮೀಯವರನ್ನು ಟಾರ್ಗೆಟ್ ಮಾಡುವಷ್ಟು ನೀಚರಲ್ಲ. ಇದು ನಾವು ಮಾಡಿದ ಕೆಲಸವಲ್ಲ ಎಂದು ಎಲ್'ಇಟಿ ಹೇಳಿದೆ.