ಬೆಂಗಳೂರು (ಸೆ.26): ನಾಡಹಬ್ಬ ಮೈಸೂರು ದಸರಾ ಅಂಗವಾಗಿ ಪ್ರವಾಸೋದ್ಯಮ ಇಲಾಖೆ ಪ್ರಯಾಣಿಕರಿಗೆ ಮತ್ತು ಪ್ರವಾಸಿಗರಿಗೆ ವಿಶೇಷಗಳನ್ನು ಘೋಷಿಸಿದೆ.

ಬೆಂಗಳೂರು- ಮೈಸೂರು ನಡುವೆ ‘ಆಕಾಶ ಅಂಬಾರಿ’ ಮತ್ತು ಸುವರ್ಣ ರಥ ಹೆಸರಿನಲ್ಲಿ ಪ್ರವಾಸಿಗರಿಗೆ ವಿಮಾನಯಾನ ಸೌಲಭ್ಯ ಕಲ್ಪಿಸಲಾಗಿದೆ ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ವಿಕಾಸಸೌಧದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಸೋಮವಾರ ಮಾತನಾಡಿದ ಅವರು, ಅ.1ರಿಂದ 15ರ ವರೆಗೆ 15 ದಿನಗಳ ಕಾಲ ವಿಮಾನಯಾನ ಸಂಪರ್ಕ ಕಲ್ಪಿಸಲಾಗಿದೆ. ಕೈರಾಳಿ ಏವಿಯೇಷನ್‌ ಸಂಸ್ಥೆಗೆ ನಿರ್ವಹಣೆ ಜವಾಬ್ದಾರಿ ವಹಿಸಲಾಗಿದೆ. ಪ್ರತಿ ವ್ಯಕ್ತಿಗೆ ಒಂದು ಕಡೆ ಪ್ರಯಾಣಕ್ಕೆ .4 ಸಾವಿರ ಟಿಕೆಟ್‌ ದರ ನಿಗದಿಗೊಳಿಸಲಾಗಿದೆ ಎಂದು ಹೇಳಿದರು.

ದೇಶವಿದೇಶಗಳಿಂದ ಮೈಸೂರು ದಸಾರಕ್ಕೆ ಆಗಮಿಸುವ ಪ್ರಯಾಣಿಕರಿಗೆ ಈ ಅನುಕೂಲ ಕಲ್ಪಿಸಲಾಗಿದೆ. ಎಂಟು ಸೀಟುಗಳುಳ್ಳ ವಿಮಾನ ಪ್ರತಿ ದಿನ ಬೆಳಗ್ಗೆ ಬೆಳಗ್ಗೆ 8.30ಕ್ಕೆ ಮತ್ತು ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಎಚ್‌ಎಎಲ್‌ ವಿಮಾನ ನಿಲ್ದಾಣದಿಂದ ಹೊರಡಲಿದೆ. ಮೈಸೂರಿನಿಂದ ಬೆಳಗ್ಗೆ 9.30ಕ್ಕೆ ಮತ್ತು ಮಧ್ಯಾಹ್ನ ಸಂಜೆ 5 ಗಂಟೆಗೆ ಹೊರಡಲಿದೆ. ಕೇವಲ ಅರ್ಧ ಗಂಟೆಯ ಪ್ರಯಾಣ ಎಂದು ಹೇಳಿದರು.

ಸುವರ್ಣ ರಥ:

ಕೆಎಸ್‌ಟಿಡಿಸಿ ಸಹಯೋಗದಲ್ಲಿ ಅ.1ರಿಂದ 10ರ ವರೆಗೆ ಬೆಂಗಳೂರಿನಿಂದ ಮೈಸೂರಿಗೆ ಸುವರ್ಣ ರಥ ರೈಲಿನಲ್ಲಿ ವಿಶೇಷ ಪ್ಯಾಕೇಜ್‌ ನೀಡಿದ್ದು, ಪಂಚತಾರಾ ಹೋಟೆಲ್‌ನಲ್ಲಿ ಎರಡು ರಾತ್ರಿ ಒಂದು ದಿನ ಉಳಿದುಕೊಳ್ಳಲು ಮತ್ತು ದಸರಾ ಉತ್ಸವ ಕಣ್ತುಂಬಿಕೊಳ್ಳಲು ಅವಕಾಶ ಕಲ್ಪಿಸಿದೆ. ದಿನ ಬಿಟ್ಟು ದಿನ ಬೆಂಗಳೂರಿನಿಂದ ಅ.3,5,7 ಮತ್ತು 9ರಂದು ಮೈಸೂರಿಗೆ ಪ್ರವಾಸ ಕೈಗೊಳ್ಳಬಹುದು. ಪ್ರತಿ ವ್ಯಕ್ತಿಗೆ .30 ಸಾವಿರ ಹಣ ನಿಗದಿ ಮಾಡಿದೆ ಎಂದು ಹೇಳಿದರು.

ರಾಯಲ್‌ ರೂಟ್ಸ್‌:

ದಸರಾ ಉತ್ಸವದ ಜತೆಗೆ ಮೈಸೂರಿನ ಸುತ್ತಮುತ್ತಲ ಅರಮನೆಗಳ ಪರಿಚಯಿಸುವ ನಿಟ್ಟಿನಲ್ಲಿ ಏಳು ಅರಮನೆಗಳ ವೀಕ್ಷಣೆಗೂ ಅವಕಾಶ ಮಾಡಿಕೊಟ್ಟಿದೆ. ರಾಯಲ್‌ ರೂಟ್ಸ್‌ ಹೆಸರಿನಲ್ಲಿ ಅಂಬಾ ವಿಲಾಸ ಅರಮನೆ, ಲಲಿತ ಮಹಲ್‌ ಪ್ಯಾಲೇಸ್‌, ಬೆಲುವಾಂಬ ಪ್ಯಾಲೇಸ್‌, ಕಾರಂಜಿ ಮ್ಯಾನಷನ್‌, ಜಗನ್ಮೋಹನ ಅರಮನೆ, ಜಯಲಕ್ಷ್ಮೇ ವಿಲಾಸ್‌ ಮ್ಯಾನಷನ್‌ ಮತ್ತು ಬೃಂದಾವನ ಪ್ಯಾಲೇಸ್‌ ಹೋಟೆಲ್‌ ಪ್ರವಾಸಿಗರಿಗೆ ಪರಿಚಯಿಸಲಿದ್ದಾರೆ. ಪಾರಂಪರಿಕ ನಡಿಗೆ ಮೂಲಕ ನುರಿತ ತಜ್ಞರು, ಮೈಸೂರು ವೈಭವದ ಇತಿಹಾಸ ಮತ್ತು ರಾಜಮನೆತನದ ಪರಿಚಯ ಮಾಡಿಕೊಡಲಿದ್ದಾರೆ ಎಂದು ತಿಳಿಸಿದರು.

ಹೋಮ್‌ ಸ್ಟೇ ನೋಂದಣಿಗೆ ನ.15ರ ಗಡುವು

ರಾಜ್ಯದ ವಿವಿಧೆಡೆ ಇರುವ ಹೋಮ್‌ ಸ್ಟೇಗಳ ನೋಂದಣಿಗೆ ನವೆಂಬರ್‌ 15ರ ಗಡುವು ನೀಡಲಾಗಿದೆ. ಅಷ್ಟರೊಳಗೆ ನೋಂದಾಯಿಸಿಕೊಳ್ಳದಿದ್ದಲ್ಲಿ ಮುಂದಿನ ಕ್ರಮ ಜರುಗಿಸಲಾಗುವುದು ಎಂದು ಪ್ರವಾಸೋದ್ಯಮ ಇಲಾಖೆ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದರು.

ಸದ್ಯ ಹೋಮ್‌ ಸ್ಟೇ ನೋಂದಣಿಗೆ ಮೊದಲು .10 ಸಾವಿರ ನಿಗದಿಗೊಳಿಸಲಾಗಿತ್ತು. ಈಗ .15 ಸಾವಿರದಿಂದ 25 ಸಾವಿರದೊಳಗೆ ನಿಗದಿ ಮಾಡಲಾಗಿದೆ. ರೇಟಿಂಗ್‌ ಮೇಲೆ ನೋಂದಣಿ ಹಣ ಸಹ ಹೆಚ್ಚಳವಾಗಲಿದೆ. ಮೂಲ ಸೌಲಭ್ಯಗಳು, ಹೋಮ್‌ಸ್ಟೇನಲ್ಲಿರುವ ಸವಲತ್ತುಗಳು, ವೈಫೈ, ಭದ್ರತೆ ದೃಷ್ಟಿಯಿಂದ ಸಿಸಿಟೀವಿ ಕ್ಯಾಮೆರಾ, ಸುತ್ತಮುತ್ತಲ ಹಸಿರು ವಾತಾವರಣವನ್ನು ಮಾನದಂಡವಾಗಿ ಪರಿಗಣಿಸಿ ರೇಟಿಂಗ್‌ ನೀಡಲಾಗುವುದು ಎಂದು ಹೇಳಿದರು.