Asianet Suvarna News Asianet Suvarna News

ಬಾಗಲಗುಂಟೆ ಎಟಿಎಂ ರಾಬರಿ ಪ್ರಕರಣಕ್ಕೆ ಸಿನಿಮಾ ಶೈಲಿಯ ಕ್ಲೈಮ್ಯಾಕ್ಸ್

* ಅ.30ರಂದು ನಡೆದಿದ್ದ ಐಸಿಐಸಿಐ ಬ್ಯಾಂಕ್ ಎಟಿಎಂ ದರೋಡೆ ಪ್ರಕರಣ

* ಮಂಡ್ಯದಲ್ಲಿ ಸಿಕ್ಕಿಬಿದ್ದ ಒಬ್ಬ ಆರೋಪಿಯಿಂದ ಮಹತ್ವ ಸುಳಿವು

* ಎಟಿಎಂ ದರೋಡೆ ವೇಳೆ ದುಷ್ಕರ್ಮಿಳಿಂದ ಚಾಕು ಚುಚ್ಚಿಸಿಕೊಂಡಿದ್ದವನೇ ವಿಲನ್

* ಐಸಿಐಸಿಐ ಬ್ಯಾಂಕ್'ನ ಸೆಕ್ಯೂರಿಟಿ ಸಿಬ್ಬಂದಿಯಿಂದಲೇ ಮಾಸ್ಟರ್'ಪ್ಲಾನ್

sagar the main accused in bagalgunte atm robbery case

ಬೆಂಗಳೂರು(ನ. 01): ಪೀಣ್ಯದ ಬಾಗಲಗುಂಟೆ ಎಟಿಎಂ ರಾಬರಿ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಿನಿಮಾ ಶೈಲಿಯ ಕ್ಲೈಮ್ಯಾಕ್ಸ್ ಸಿಕ್ಕಿದೆ. ಎಟಿಎಂ ದರೋಡೆ ತಡೆಯುವಾಗ ಕಳ್ಳರಿಂದ ಚಾಕು ಚುಚ್ಚಿಸಿಕೊಂಡು ಹೀರೋ ಎನಿಸಿದ್ದ ಸೆಕ್ಯೂರಿಟಿ ಸಿಬ್ಬಂದಿಯೇ ಪ್ರಕರಣದ ವಿಲನ್ ಎಂಬುದು ಬಹಿರಂಗವಾಗಿದೆ. 18.5 ಲಕ್ಷ ರೂ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳ ಪೈಕಿ ಒಬ್ಬಾತ ಮಂಡ್ಯದಲ್ಲಿ ಸಿಕ್ಕಿಬೀಳುವುದರೊಂದಿಗೆ ಮಾಸ್ಟರ್'ಮೈಂಡ್'ನ ಮುಖವಾಡ ಕಳಚಿಬಿದ್ದಿದೆ. ಐಸಿಐಸಿಐ ಬ್ಯಾಂಕ್'ನ ಸೆಕ್ಯೂರಿಟಿ ಸಿಬ್ಬಂದಿ ಸಾಗರ್ ಈ ದರೋಡೆಯ ಮಾಸ್ಟರ್'ಮೈಂಡ್ ಆಗಿದ್ದಾನೆ.

ಎರಡು ದಿನಗಳ (ಅ.30) ಹಿಂದೆ ಪೀಣ್ಯದ ಜಾಲಹಳ್ಳಿ ಕ್ರಾಸ್ ಬಳಿ ಎಟಿಎಂಗೆ ಹಣ ತುಂಬಿಸಲು ಹೋಗುತ್ತಿದ್ದ ಐಸಿಐಸಿಐನ ವಾಹನದ ಮೇಲೆ ಇಬ್ಬರು ಬೈಕ್ ಸವಾರರು ದಾಳಿ ಮಾಡಿ 18.5 ಲಕ್ಷ ರೂ ದೋಚಿರುತ್ತಾರೆ. ಆ ಸಂದರ್ಭದಲ್ಲಿ ಸೆಕ್ಯೂರಿಟಿ ಸಿಬ್ಬಂದಿಯಾಗಿದ್ದ ಸಾಗರ್'ಗೆ ಗಾಯದಿಂದ ಇರಿದು ಗಾಯಗೊಳಿಸಿರುತ್ತಾರೆ.

ಆದರೆ, ವಾಸ್ತವದಲ್ಲಿ ಸಾಗರ್'ನೇ ಇಡೀ ಪ್ರಕರಣದ ಮಾಸ್ಟರ್'ಮೈಂಡ್ ಆಗಿರುತ್ತಾನೆ. ಪೀಣ್ಯ ಮಾರ್ಗವಾಗಿ ಜಾಲಹಳ್ಳಿ ಕ್ರಾಸ್'ನಲ್ಲಿನ ಎಟಿಎಂ ಹಣ ತುಂಬಿಸಲು 26 ಲಕ್ಷ ರೂಪಾಯಿ ಸಾಗಿಸುತ್ತಿರುವ ವಿಚಾರವನ್ನು ಇಬ್ಬರು ಆರೋಪಿಗಳಿಗೆ ತಿಳಿಸಿರುತ್ತಾನೆ. ಅಷ್ಟೂ ಹಣವನ್ನು ದೋಚಲು ಪ್ಲಾನ್ ರೂಪಿಸಿರುತ್ತಾನೆ. ಅದರಂತೆ, ಬೈಕ್'ನಲ್ಲಿ ಹೆಲ್ಮೆಟ್ ಧರಿಸಿದ ಇಬ್ಬರು ವ್ಯಕ್ತಿಗಳು ಪೀಣ್ಯದ ಸರ್ವಿಸ್ ರಸ್ತೆಯಲ್ಲಿ ವಾಹನ ತಡೆಯಲು ವಿಫಲಯತ್ನ ನಡೆಸುತ್ತಾರೆ. ಆ ನಂತರ ಜಾಲಹಳ್ಳಿ ಕ್ರಾಸ್ ಸಮೀಪದ ಬಾಗಲಗುಂಟೆಯ ಎಟಿಎಂ ಬಳಿ ದಾಳಿ ಮಾಡುತ್ತಾರೆ. ಮೊದಲೇ ಪ್ಲಾನ್ ಮಾಡಿಕೊಂಡಂತೆ ದುಷ್ಕರ್ಮಿಗಳು ಸಾಗರ್'ಗೆ ಚಾಕುವಿನಿಂದ ಇರಿಯುತ್ತಾರೆ. ತನ್ನ ಮೇಲೆ ಯಾರಿಗೂ ಅನುಮಾನ ಬಾರದಿರಲೆಂದು ಸಾಗರ್'ನೇ ಈ ಸೂಚನೆ ಕೊಟ್ಟಿರುತ್ತಾನೆ. ಆನಂತರ, ಆ ಇಬ್ಬರು ಆರೋಪಿಗಳು ಹಣದ ಬ್ಯಾಗೊಂದನ್ನು ಸೆಳೆದು ಪರಾರಿಯಾಗುತ್ತಾರೆ. ಆ ಬ್ಯಾಗಿನಲ್ಲಿ 18.5 ಲಕ್ಷ ರೂಪಾಯಿ ಇರುತ್ತದೆ.

ಮಂಡ್ಯದಲ್ಲಿ ನಿತಿನ್ ಮತ್ತು ಮಾರುತಿ ಎನ್ನಲಾಗಿರುವ ಇಬ್ಬರು ಆರೋಪಿಗಳಿರುವ ಸುಳಿವು ಪಡೆದ ಅಲ್ಲಿಯ ಪೊಲೀಸರು ಬಂಧಿಸಲು ಪ್ರಯತ್ನಿಸುತ್ತಾರೆ. ಆ ವೇಳೆ, ಮಾರುತಿ ತಪ್ಪಿಸಿಕೊಳ್ಳಲು ಯಶಸ್ವಿಯಾಗುತ್ತಾನೆ. ನಿತಿನ್ ಸಿಕ್ಕಿಬೀಳುತ್ತಾನೆ. ಈತನ ವಿಚಾರಣೆ ನಡೆಸಿದಾಗ ಸತ್ಯಾಂಶ ಬಯಲಾಗುತ್ತದೆ. ಇದೀಗ, ಪೀಣ್ಯ ಪೊಲೀಸರು ಸಾಗರ್'ನ ಬಂಧನಕ್ಕೆ ಬಲೆಬೀಸಿದ್ದಾರೆ.

Follow Us:
Download App:
  • android
  • ios