ಬೆಂಗಳೂರು(ಸೆ.08): ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದಲ್ಲಿ ದೇಶದ ನದಿಗಳನ್ನು ಉಳಿಸಲು ಆರಂಭವಾಗಿರುವ ಆಂದೋಲನ ಇಂದು ಮೈಸೂರು ಹಾಗೂ ಶನಿವಾರ ಬೆಂಗಳೂರಿನಲ್ಲಿ ನಡೆಯಲಿದೆ.

ದೇಶದಲ್ಲಿನ ನದಿಗಳ ಉಳಿವಿಗಾಗಿ ಅರಿವು ಮೂಡಿಸಲು ಸದ್ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಷನ್ ಹಮ್ಮಿಕೊಂಡಿರುವ ‘ನದಿಗಳಿಗಾಗಿ ರ್ಯಾಲಿ’ (ರ್ಯಾಲಿ ಫಾರ್ ರಿವರ್) ಅಭಿಯಾನವು ರಾಜ್ಯಕ್ಕೆ ಆಗಮಿಸಿದ್ದು, ಇಂದು ಮೈಸೂರಿನಲ್ಲಿ ಹಾಗೂ ಶನಿವಾರ  ಬೆಂಗಳೂರಿನಲ್ಲಿ ಬೃಹತ್ ಸಮಾವೇಶಗಳು ನಡೆಯಲಿವೆ.

ಸೆ.3ರಂದು ಕೊಯಮತ್ತೂರಿನ ಇಶಾ ಯೋಗ ಕೇಂದ್ರದಲ್ಲಿ ಚಾಲನೆಗೊಂಡ ಯಾನವು ಇಂದು ಮೈಸೂರು ತಲುಪಲಿದೆ.

ಇಂದು ಸಂಜೆ 6 ಗಂಟೆಯಿಂದ 8 ಗಂಟೆವರೆಗೆ ಸದ್ಗುರು ನೇತೃತ್ವದಲ್ಲಿ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಬೃಹತ್ ಸಮಾವೇಶ ನಡೆಯಲಿದೆ. ಈ ವೇಳೆ ಮುಖ್ಯ ಅತಿಥಿಯಾಗಿ ರಾಣಿ ಪ್ರಮೋದಾ ದೇವಿ ಒಡೆಯರ್ ಭಾಗವಹಿಸಲಿದ್ದಾರೆ. ಇದೇ ವೇಳೆ ಧರ್ಮಸ್ಥಳದ ಧರ್ಮಾಧ್ಯಕ್ಷ ವೀರೇಂದ್ರ ಹೆಗ್ಗಡೆ, ಸಂಸದ ಪ್ರತಾಪ್ ಸಿಂಹ, ಸ್ಥಳೀಯ ಶಾಸಕರು ಭಾಗವಹಿಸಲಿದ್ದು, 15 ಸಾವಿರಕ್ಕೂ ಹೆಚ್ಚು ಮಂದಿ ನೆರೆಯಲಿದಾರೆ ಎಂದು ಆಯೋಜಕರು ಮಾಹಿತಿ  ನೀಡಿದ್ದಾರೆ.