Asianet Suvarna News Asianet Suvarna News

12 ತಿಂಗಳಲ್ಲಿ ಈ ದೇಶ ಸ್ವಚ್ಛಗೊಳಿಸಲು ಸಾಧ್ಯ; ಹೇಗೆ?

ಸ್ವಚ್ಛ ಭಾರತ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರ ಪಾತ್ರದಿಂದಾಚೆಗೆ ಇಂದು ತಂತ್ರಜ್ಞಾನವೂ ಸಾಕಷ್ಟುಅಭಿವೃದ್ಧಿ ಹೊಂದಿದೆ. ಅದು ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುತ್ತದೆ. ಇಲ್ಲಿ ತ್ಯಾಜ್ಯ ಎಂಬುದೇ ಇಲ್ಲ. ಎಲ್ಲವೂ ಮರುಬಳಕೆಗೆ ಯುಕ್ತ. ಆದರೆ ಅದನ್ನು ಹೇಗೆ ಬಳಸಿಕೊಳ್ಳಬೇಕೆಂಬುದೇ ಪ್ರಶ್ನೆ. ಒಂದು ವರ್ಷದಲ್ಲಿ ದೇಶವನ್ನು ಸ್ವಚ್ಚವಾಗಿಸಬಹುದು- ಜಗ್ಗಿ ವಾಸುದೇವ್ 

Sadguru Jaggi Vasudev talk about Swachh Bharat mission
Author
Bengaluru, First Published Oct 4, 2018, 6:06 PM IST

ಬೆಂಗಳೂರು (ಅ. 04): ಸೈನಿಕ ಪ್ರಾಣದ ಹಂಗು ತೊರೆದು ನಮಗಾಗಿ ಗಡಿ ಕಾಯುತ್ತಿದ್ದಾನೆ. ಕೃಷಿಕ ನಮಗಾಗಿ ಅನ್ನ ಬೆಳೆಯುತ್ತಿದ್ದಾನೆ. ದೇಶವನ್ನು ಶ್ರೀಮಂತಗೊಳಿಸಲು ಕಾರ್ಮಿಕರು ಕಾರ್ಖಾನೆಗಳಲ್ಲಿ ಬೆವರು ಹರಿಸುತ್ತಿದ್ದಾರೆ. ಇನ್ನು ನಾವು ನಮ್ಮ ದೇಶಪ್ರೇಮವನ್ನು ಸಾಬೀತುಮಾಡಲು ನಮ್ಮ ಸುತ್ತಮುತ್ತಲ ಸ್ಥಳಗಳನ್ನು ಸ್ವಚ್ಛಗೊಳಿಸಲು ಸಾಧ್ಯವಿಲ್ಲವೇ?

ಹಿಂದಿನಿಂದಲೂ ವೈಯಕ್ತಿಕ ಮತ್ತು ಸಾರ್ವಜನಿಕ ನೈರ್ಮಲ್ಯಕ್ಕಾಗಿಯೇ ಬಂಡವಾಳ ಹೂಡಿಕೆ ಮಾಡುವ ಸಂಪ್ರದಾಯವೊಂದು ಬೆಳೆದುಬಂದಿದೆ. ಇವತ್ತಿಗೂ ಸಹ ಸಾಕಷ್ಟುಮಹಿಳೆಯರು ಬೆಳಗ್ಗೆ ಸ್ನಾನ ಮಾಡದೆ ಅಡುಗೆ ಕೋಣೆಗೆ ಹೋಗುವುದಿಲ್ಲ. ಇನ್ನು ನೀರು ಮೈಮೇಲೆ ಸುರಿದುಕೊಳ್ಳದೆ ಯಾರೂ ದೇವಸ್ಥಾನ ಪ್ರವೇಶಿಸುವುದಿಲ್ಲ. ದೇಹವನ್ನು ಶುದ್ಧೀಕರಿಸಿಕೊಳ್ಳದೆ ಯಾರೂ ಯೋಗ ಮಾಡುವುದಿಲ್ಲ.

ದೇಶದ ಬಾಹ್ಯ ಮತ್ತು ಆಂತರಿಕ ಶುದ್ಧೀಕರಣದ ಕಾಳಜಿ ನಮ್ಮಲ್ಲಿ ಯಾವಾಗಲೂ ಇರುತ್ತದೆ. ಆದರೆ ಸದ್ಯ ಅರಿವು ಮೂಡಿಸಬೇಕಾಗಿರುವುದು ಸಾರ್ವಜನಿಕ ಸ್ಥಳವನ್ನು ಹೇಗೆ ಸ್ವಚ್ಛವಾಗಿಟ್ಟುಕೊಳ್ಳಬೇಕು ಎಂಬ ಬಗ್ಗೆ. ಯಾಕೆ ಇಂಥ ಅನಿವಾರ್ಯತೆ ಎದುರಾಗಿದೆ ಎಂದರೆ, 25 ದಶಕಗಳ ಹಿಂದೆ ಭೂಮಿಯ ಮೇಲಿನ ಅತಿದೊಡ್ಡ ಆರ್ಥಿಕತೆಯಾಗಿದ್ದ ಭಾರತ ನಂತರ ವಸಾಹತುಶಾಹಿಯ ದ್ರೋಹಕ್ಕೆ ಬಲಿಪಶುವಾಗಿ ತನ್ನೆಲ್ಲಾ ಸಮೃದ್ಧಿಯನ್ನೂ ಕಳೆದುಕೊಂಡಿತು.

ನಮ್ಮಲ್ಲಿನ ಉದ್ದಿಮೆಗಳು ನಾಶವಾದವು. ಬ್ರಿಟಿಷರ ತೆರಿಗೆ ವ್ಯವಸ್ಥೆಯಿಂದಾಗಿ ಭಾರತೀಯರ ಬೆನ್ನುಮೂಳೆ ಮುರಿಯಿತು. ಇವೆಲ್ಲಾ ನಿಧಾನವಾಗಿ ನಿರ್ಮಲೀಕರಣಕ್ಕೆ ನಮ್ಮಲ್ಲಿ ಶಕ್ತಿ ಹಾಗೂ ಸಂಪನ್ಮೂಲಗಳು ಇಲ್ಲದಂತಹ ಸ್ಥಳಕ್ಕೆ ಕರೆದೊಯ್ದು ನಿಲ್ಲಿಸಿದವು.

ಅರಿವಿನ ಕೊರತೆಯೇ ಸಮಸ್ಯೆ

ಬೇಸರದ ಸಂಗತಿ ಎಂದರೆ, ಸ್ವಾತಂತ್ರ್ಯಾನಂತರದಲ್ಲಿ ಕೂಡ ಸರ್ಕಾರ ಸಾರ್ವಜನಿಕ ಸ್ಥಳಗಳ ಸ್ವಚ್ಛತೆಗೆ ಕ್ರಮ ಕೈಗೊಳ್ಳಲು ಮುಂದಾಗಲಿಲ್ಲ. ಇದು ಸರ್ಕಾರದ ಬಗೆಗಿನ ದೂರು ಅಲ್ಲ. ಆದರೆ ಇಂದು ಸಾರ್ವಜನಿಕ ನೈರ್ಮಲ್ಯದ ಅರಿವಿನ ಕೊರತೆಯಿಂದಾಗಿಯೇ ಭಾರತ ಭಾರೀ ಬೆಲೆ ತೆರಬೇಕಾಗಿದೆ.

ಅಪೌಷ್ಟಿಕತೆ ಮತ್ತು ಸಾರ್ವಜನಿಕ ನೈರ್ಮಲ್ಯದ ಅರಿವಿನ ಕೊರತೆ ಇವೆರಡೂ ನಮ್ಮ ದೇಶಕ್ಕೆ ದೊಡ್ಡ ಸಮಸ್ಯೆ. ಪುನರಾವರ್ತಿತ ಬ್ಯಾಕ್ಟೀರಿಯಾಗಳ ದಾಳಿ, ಇವುಗಳಿಂದ ಉಂಟಾಗುವ ಸೋಂಕುಗಳು ನಮ್ಮ ದೇಹ ಪೌಷ್ಟಿಕಾಂಶವನ್ನು ಪಡೆದುಕೊಳ್ಳುವ ಅಥವಾ ಹೀರಿಕೊಳ್ಳುವ ಸಾಮರ್ಥ್ಯವನ್ನು ಕಡಿಮೆ ಮಾಡುತ್ತವೆ. ಇದೇ ಸಮಸ್ಯೆಯನ್ನು ಸದ್ಯ ದೇಶದ ಲಕ್ಷಾಂತರ ಮಕ್ಕಳಲ್ಲಿ ಕಾಣಬಹುದಾಗಿದೆ.

ಶೌಚಾಲಯಗಳ ಕೊರತೆ ಮಹಿಳೆಯರಿಗಿರುವ ಮತ್ತೊಂದು ಗಂಭೀರ ಸಮಸ್ಯೆ. ಕಳೆದ ಕೆಲ ದಶಕಗಳಿಂದ ಜನಸಂಖ್ಯೆ ಏರುಗತಿಯಲ್ಲಿದೆ. ಮಹಿಳೆಯರಿಗೆ ಶೌಚಕ್ಕೆ ಜಾಗವಿಲ್ಲದಂತಾಗಿದೆ. ಹಾಗಾಗಿಯೇ ದೇಶಾದ್ಯಂತ ಸರ್ಕಾರ ಕಳೆದ ನಾಲ್ಕು ವರ್ಷದಲ್ಲಿ ಲಕ್ಷಾಂತರ ಶೌಚಾಲಯಗಳನ್ನು ನಿರ್ಮಿಸಿದೆ. ಅದು ತೀರಾ ಅಗತ್ಯವಾಗಿತ್ತು ಕೂಡ. ಸದ್ಯ ಅಸಂಖ್ಯ ಭಾರತೀಯರು ಶೌಚಾಲಯಗಳ ಬಳಕೆಗೆ ಮುಂದಾಗುತ್ತಿದ್ದಾರೆ. ಆದರೆ ಇಂದಿಗೂ ಕೆಲ ಸಾಂಪ್ರದಾಯಿಕ ಮನಸ್ಥಿತಿಗಳು ಇದಕ್ಕೆ ತಡೆಯಾಗಿವೆ. ಸರ್ಕಾರವೂ ಕೂಡ ಈ ಬಗ್ಗೆ ಕಾಳಜಿ ವಹಿಸಿದೆ.

ಭಾವನಾತ್ಮಕ ಚಳವಳಿಯ ಅಗತ್ಯ

ಭಾರತದಂತಹ ರಾಷ್ಟ್ರದಲ್ಲಿ ಯೋಜನೆಗಳು ಬದಲಾದ ಹಾಗೇ ಎಲ್ಲವೂ ಒಂದೇ ಕ್ಷಣದಲ್ಲಿ ಬದಲಾಗದು ಎಂಬುದನ್ನು ಮೊದಲು ಅರ್ಥೈಸಿಕೊಳ್ಳಬೇಕು. ಇಲ್ಲಿ ಭಾವನಾತ್ಮಕ ಚಳವಳಿಗಳ ಅಗತ್ಯವಿದೆ. ಅದನ್ನು ಸ್ವಚ್ಛ ಭಾರತ ಹೆಸರಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾರಂಭಿಸಿದ್ದಾರೆ. ಭಾರತವನ್ನು ಸ್ವಚ್ಛಗೊಳಿಸುವ ಈ ಕ್ರಿಯೆ ರಾತ್ರೋರಾತ್ರಿ ನಡೆಯುವಂತಹದ್ದಲ್ಲ. ಇದೇ ವೇಳೆ ನಾವು ನಾಗರಿಕರನ್ನು ಪ್ರೇರೇಪಿಸುವಲ್ಲಿ ಸಫಲರಾದರೆ ನಾವು ಅಂದುಕೊಂಡದ್ದಕ್ಕಿಂತ ಬಹುಬೇಗ ಅದು ಸಾಧ್ಯವಾಗುವುದರಲ್ಲಿ ಎರಡು ಮಾತಿಲ್ಲ.

ಕೆಲ ವರ್ಷದ ಹಿಂದೆ ಪ್ರಧಾನಿ ನರೇಂದ್ರ ಮೋದಿ ಸ್ವಾತಂತ್ರ್ಯೋತ್ಸವದಂದು ಸ್ವಚ್ಛ ಭಾರತ ಘೋಷಿಸಿದಾಗ ಕೆಲವರು ‘ಭಾರತದಲ್ಲಿ ಮಾಡಬೇಕಾಗಿರುವುದು ಸಾಕಷ್ಟಿದೆ. ಹಾಗಿರುವಾಗ ನರೇಂದ್ರ ಮೋದಿ ಏಕೆ ಈ ಹಾದಿ ಹಿಡಿದಿದ್ದಾರೆ’ ಎಂದೂ ಟೀಕಿಸಿದ್ದರು. ಏಕೆಂದರೆ ಸ್ವಚ್ಛ ಭಾರತದ ಪರಿಕಲ್ಪನೆ ಬಗ್ಗೆ ಅವರಿಗೆ ಅರಿವೇ ಇರಲಿಲ್ಲ. ಸ್ವಚ್ಛ ಭಾರತ ಒಂದು ರಾಷ್ಟ್ರೀಯ ಆದ್ಯತೆ ಪಡೆಯಬೇಕಾದ ವಿಚಾರ. ಸ್ವಚ್ಛತೆ ಇಲ್ಲದೆ ಅಭಿವೃದ್ಧಿ ಹೊಂದುವ ಕನಸು ಕೇವಲ ಕನಸಾಗಿಯೇ ಉಳಿಯುತ್ತದೆ. ಕಾರಣ ಸೋಂಕನ್ನು ನಾವು ಜೊತೆಯಲ್ಲಿಯೇ ಇಟ್ಟುಕೊಂಡು ನಡೆದರೆ ಆರೋಗ್ಯವಂತ ಮಾನವರಾಗಲು ಸಾಧ್ಯವಿಲ್ಲ.

ಹೊಲಸನ್ನೂ ಸಂಪತ್ತಾಗಿಸಬಹುದು!

ಸ್ವಚ್ಛ ಭಾರತ ಪ್ರಕ್ರಿಯೆಯಲ್ಲಿ ಪ್ರತಿಯೊಬ್ಬರ ಪಾತ್ರದಿಂದಾಚೆಗೆ ಇಂದು ತಂತ್ರಜ್ಞಾನವೂ ಸಾಕಷ್ಟುಅಭಿವೃದ್ಧಿ ಹೊಂದಿದೆ. ಅದು ತ್ಯಾಜ್ಯವನ್ನು ಸಂಪನ್ಮೂಲವಾಗಿ ಪರಿವರ್ತಿಸುತ್ತದೆ. ಇಲ್ಲಿ ತ್ಯಾಜ್ಯ ಎಂಬುದೇ ಇಲ್ಲ. ಎಲ್ಲವೂ ಮರುಬಳಕೆಗೆ ಯುಕ್ತ. ಆದರೆ ಅದನ್ನು ಹೇಗೆ ಬಳಸಿಕೊಳ್ಳಬೇಕೆಂಬುದೇ ಪ್ರಶ್ನೆ. ಪ್ರತಿಯೊಂದನ್ನೂ ಪರಿವರ್ತಿಸಿ ಒಳ್ಳೆಯ ಕೆಲಸಕ್ಕೆ ಬಳಸಿಕೊಳ್ಳುವುದು ಹೇಗೆ ಎಂಬುದನ್ನು ಕಲಿಯುವ ಸಮಯ ಈಗ ಬಂದಿದೆ. ನಾವಿಂದು ಭೂಮಿಯನ್ನೇ ಹೊಲಸು ಮಾಡಿದ್ದೇವೆ.

ಕೊನೆಯಪಕ್ಷ ಅದನ್ನು ಮತ್ತೆ ಭೂಮಿಯಾಗಿಯಾದರೂ ಪರಿವರ್ತಿಸಬೇಕಾದ ಜವಾಬ್ದಾರಿ ನಮ್ಮ ಮೇಲಿದೆ. ಸಾಂಪ್ರದಾಯಿಕ ಮತ್ತು ಆಧುನಿಕ ಜ್ಞಾನವನ್ನು ಬಳಸಿಕೊಂಡು ಈ ಕಾರ್ಯ ಮಾಡಬೇಕಿದೆ. ರಾಷ್ಟ್ರೀಯ ತತ್ವದ ಭಾಗವಾಗಿಯಾದರೂ ಹೊಲಸನ್ನು ಸಂಪನ್ಮೂಲವಾಗಿ ಪರಿವರ್ತಿಸಲೇಬೇಕಿದೆ. ಪ್ರತಿಯೊಂದು ನಗರ ಪಾಲಿಕೆಗಳು ಮತ್ತು ಗ್ರಾಮ ಪಂಚಾಯಿತಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯಗತಗೊಳಿಸಬೇಕಿದೆ.

ಉದಾಹರಣೆಗೆ; ಮುಂಬೈ ನಗರದಲ್ಲಿ ಪ್ರತಿದಿನ 200 ಕೋಟಿ ಲೀಟರ್‌ಗೂ ಹೆಚ್ಚು ಚರಂಡಿ ನೀರು ಉತ್ಪತ್ತಿಯಾಗುತ್ತದೆ. ಅದರಲ್ಲಿ ಬಹುತೇಕ ಭಾಗ ಸಮುದ್ರ ಸೇರುತ್ತಿದೆ. ಆದರೆ ಇದನ್ನು ಸೂಕ್ಷ್ಮ ನೀರಾವರಿಯಾಗಿ ಬಳಕೆ ಮಾಡಿಕೊಂಡಲ್ಲಿ ಅದನ್ನು ಸಾವಿರಾರು ಅಥವಾ ಲಕ್ಷಾಂತರ ಎಕರೆ ಕೃಷಿ ಭೂಮಿಗೆ ಬಳಕೆಮಾಡಿಕೊಳ್ಳಬಹುದು.

ಭಾರತದ 200 ನಗರಗಳು ಮತ್ತು ಪಟ್ಟಣಗಳ ಚರಂಡಿ ನೀರನ್ನು ಸೇರಿಸಿದರೆ ಒಟ್ಟು 3600 ಕೋಟಿ ಲೀಟರ್‌ನಷ್ಟಾಗುತ್ತದೆ. ಸೂಕ್ಷ್ಮ ನೀರಾವರಿ ಅಥವಾ ಹನಿ ನೀರಾವರಿ ಮೂಲಕ ಬಳಕೆ ಮಾಡಿಕೊಂಡಲ್ಲಿ ಅದು 30-90 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಗೆ ನೀರುಣಿಸಬಲ್ಲದು. ಇನ್ನು ಪ್ಲಾಸ್ಟಿಕ್‌ ತ್ಯಾಜ್ಯ, ಗೃಹಬಳಕೆಯ ತ್ಯಾಜ್ಯಗಳನ್ನೂ ಕೂಡ ಮರುಬಳಕೆ ಮಾಡಿಕೊಳ್ಳಬಹುದು. ಆಗ ಎಲ್ಲೂ ಕೂಡ ಹೊಲಸು ತ್ಯಾಜ್ಯ ಇರುವುದಿಲ್ಲ.

ದೇಶಪ್ರೇಮದ ಸಾಬೀತಿಗಿರುವ ಹಾದಿ

ಅಂದಹಾಗೆ ಸ್ವಚ್ಛ ಭಾರತ ಕೇವಲ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಚಳವಳಿ ಅಲ್ಲ. ಭಾರತದ ಏಳಿಗೆಗೆ ಭಾರತ ಮಾಡಬೇಕಾಗ ಅತ್ಯಂತ ಪ್ರಮುಖ ಹೆಜ್ಜೆ. ನಮ್ಮ ಸೈನಿಕರು ಭಾರತದ ಗಡಿಯಲ್ಲಿ ನಮ್ಮ ರಕ್ಷಣೆಗೆ ಪತ್ರಿದಿನ ತಮ್ಮ ಜೀವವನ್ನೇ ಪಣಕ್ಕಿಟ್ಟು ನಿಂತಿದ್ದಾರೆ. ನಮ್ಮ ಅನ್ನದಾತರಾದ ರೈತರು ದೇಶದ ಜನರಿಗೆ ಅನ್ನ ನೀಡಲು ಶ್ರಮಪಡುತ್ತಿದ್ದಾರೆ. ವಿಶ್ವದೆದುರು ನಮ್ಮ ದೇಶದ ಹೆಗ್ಗುರುತು ಮೂಡಿಸಲು ಕಾರ್ಮಿಕರು ಕಾರ್ಖಾನೆಗಳಲ್ಲಿ ಶ್ರಮಪಡುತ್ತಿದ್ದಾರೆ. ಇನ್ನು ನಾವು ನಮ್ಮ ದೇಶಪ್ರೇಮವನ್ನು ಸಾಬೀತು ಮಾಡಲು ಇರುವ ಒಂದು ಸರಳ ದಾರಿ ಸ್ವಚ್ಛ ಭಾರತ ನಿರ್ಮಾಣ.

ನಮ್ಮೆಲ್ಲರಲ್ಲಿ ಇಚ್ಛಾಶಕ್ತಿ ಇದ್ದರೆ ಇನ್ನು ಹನ್ನೆರಡೇ ತಿಂಗಳುಗಳಲ್ಲಿ ಭಾರತ ಸಂಪೂರ್ಣವಾಗಿ ಸ್ವಚ್ಛ ರಾಷ್ಟ್ರವಾಗಿ ಪರಿವರ್ತನೆಯಾಗುತ್ತದೆ. 2019ರ ಮಹಾತ್ಮ ಗಾಂಧೀಜಿಯವರ 150ನೇ ಜನ್ಮ ಶತಮಾನೋತ್ಸವದ ಸಮಾರೋಪದ ಒಳಗೇ ಅದನ್ನು ಸಾಧಿಸೋಣ. ಪ್ರತಿ ಬೀದಿ, ಪ್ರತಿ ಮನೆ, ಮನಸ್ಸು, ಹೃದಯ, ಭ್ರಷ್ಟಾಚಾರ.. ಹೀಗೆ ಎಲ್ಲ ಹಂತದಲ್ಲೂ ಭಾರತವನ್ನು ಸ್ವಚ್ಛ ಮಾಡೋಣ.

-ಜಗ್ಗಿ ವಾಸುದೇವ್, ಅಧ್ಯಾತ್ಮ ಚಿಂತಕರು 

Follow Us:
Download App:
  • android
  • ios