ಉಪಾಹಾರ ಎಲ್ಲಿಯ ದಾದರೇನು? ಯಾರ ಮನೆಯಲ್ಲಿ ಉಪಾಹಾರ ಮಾಡಲಾಗಿದೆ ಹಾಗೂ ನಮಗೆ ಅದನ್ನು ಕೊಟ್ಟರು ಯಾರು ಎನ್ನುವುದು ಮುಖ್ಯ. ದಲಿತರ ಮನೆಯ ತಟ್ಟೆಯಲ್ಲಿಯೇ ಸೇವನೆ ಮಾಡಿದ್ದೇವೆ
ಬೆಂಗಳೂರು(ಮೇ.21): ಚಿತ್ರದುರ್ಗದಲ್ಲಿ ದಲಿತರ ಮನೆಯಲ್ಲಿ ಹೊಟೇಲ್ ಉಪಾಹಾರ ಸೇವನೆ ಮಾಡಿರುವುದನ್ನು ಪರೋಕ್ಷವಾಗಿ ಸಮರ್ಥಿಸಿಕೊಂಡಿರುವ ಬಿಜೆಪಿ ನಾಯಕರು, ದಲಿತರ ಮನೆಯಲ್ಲಿ ಹಾಗೂ ಅವರ ತಟ್ಟೆಯಲ್ಲೇ ಉಪಾಹಾರ ಸೇವಿಸಿದ್ದೇವೆ ಎಂಬುದು ಮುಖ್ಯ ಎಂದು ಪ್ರತಿಪಕ್ಷಗಳಿಗೆ ತಿರು ಗೇಟು ನೀಡಿದ್ದಾರೆ. ‘ಅಡುಗೆ ಮಾಡಿದ್ದು ಭಟ್ಟರೋ, ಶೆಟ್ಟರೋ, ಗೌಡರೋ ಎಂಬುದು ಮುಖ್ಯವಲ್ಲ. ನಾವು ಯಾರ ಮನೆಯಲ್ಲಿ ಉಪಾಹಾರ ಸೇವನೆ ಮಾಡಿದ್ದೇವೆ ಹಾಗೂ ನಮಗೆ ಯಾರು ಕೊಟ್ಟರು ಎಂಬುದು ಮುಖ್ಯ' ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ತೀಕ್ಷ್ಣವಾಗಿ ಹೇಳಿದ್ದಾರೆ.

ಸುದ್ದಿಗಾರರ ಜತೆ ಮಾತನಾಡಿದ ಅವರು, ಉಪಾಹಾರ ಎಲ್ಲಿಯ ದಾದರೇನು? ಯಾರ ಮನೆಯಲ್ಲಿ ಉಪಾಹಾರ ಮಾಡಲಾಗಿದೆ ಹಾಗೂ ನಮಗೆ ಅದನ್ನು ಕೊಟ್ಟರು ಯಾರು ಎನ್ನುವುದು ಮುಖ್ಯ. ದಲಿತರ ಮನೆಯ ತಟ್ಟೆಯಲ್ಲಿಯೇ ಸೇವನೆ ಮಾಡಿದ್ದೇವೆ ಎಂದು ಹೇಳಿದರು. ಉಪಾಹಾರ ಸೇವನೆ ಮಾಡಿದ ದಲಿತರ ಮನೆಯು ಚಿಕ್ಕದಾಗಿತ್ತು. ಎಲ್ಲರಿಗೂ ಉಪಾಹಾರ ಒದಗಿಸು ವುದು ಕಷ್ಟವಾಗಿತ್ತು. ಹೀಗಾಗಿ ಅವರು ಹೊಟೇಲ್‌ನಿಂದ ತಂದು ಕೊಟ್ಟರು. ಅದೇನೇ ಇರಲಿ ದಲಿತರ ಮನೆಯಲ್ಲಿ ಊಟ ಮಾಡಿದ್ದು ನಿಜವಲ್ಲವೇ ಎಂದು ಪ್ರತಿಕ್ರಿಯಿಸಿದರು. ದಲಿತರ ಮನೆಯ ಅಣ್ಣ- ತಮ್ಮಂದಿರು ಕೊಟ್ಟಉಪಾಹಾರವನ್ನು ಅವರ ಮನೆಯ ತಟ್ಟೆಯಲ್ಲಿಯೇ ಸೇವನೆ ಮಾಡಲಾಗಿದೆ. ತುಂಬಾ ಜನ ದಲಿತರ ಮನೆಗೆ ಹೋಗಿದ್ದರಿಂದ ಅನಿವಾರ್ಯವಾಗಿ ಹೊಟೇಲ್‌ನಿಂದ ತರಿಸಿರಬಹುದಾಗಿದ್ದು, ಅದು ತಪ್ಪಲ್ಲ. ಆದರೆ, ದಲಿತರ ಮನೆಯಲ್ಲಿ ಉಪಾಹಾರ ಸೇವನೆ ಮಾಡುವ ಮೂಲಕ ನಾವು ಒಳ್ಳೆಯ ಸಂದೇಶವನ್ನು ನೀಡಿದ್ದೇವೆ ಎಂದರು. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸಹ ಸಮರ್ಥಿಸಿಕೊಂಡಿದ್ದು, ಜಾತಿ ರಹಿತ ಸಮಾಜ ನಿರ್ಮಾಣ ಮಾಡುವ ಉದ್ದೇಶ ನಮ್ಮದಾಗಿದೆ. ಸಮಾಜಕ್ಕೆ ಒಳ್ಳೆಯ ಸಂದೇಶ ಸಾರುವ ಸದುದ್ದೇಶದಿಂದ ದಲಿತರ ಮನೆಯಲ್ಲಿ ಉಪಾಹಾರ ಸೇವಿಸಲಾಗಿದೆ. ದಲಿತರ ಮನೆ ಚಿಕ್ಕದಾಗಿತ್ತು. ನಾವು ತುಂಬಾ ಮಂದಿ ಹೋಗಿದ್ದರಿಂದ ತರಿಸಿರಬಹುದೇನೋ ಎಂದರು.
