ಮುಂಬೈ (ಡಿ. 10):  ಸಿನಿಮಾ ನಟ ನಟಿಯರು, ಕ್ರಿಕೆಟಿಗರು ರಾಜಕೀಯ ಕ್ಷೇತ್ರಕ್ಕೆ ಬರುವುದು ಸಾಮಾನ್ಯ. ಕೆಲವೊಮ್ಮೆ ಈ ರೀತಿಯ ಸುಳ್ಳುಸುದ್ದಿಯನ್ನೂ ಹರಡಲಾಗುತ್ತದೆ. ಸದ್ಯ ಖ್ಯಾತ ಮಾಜಿ ಕ್ರಿಕೆಟಿಗ ಸಚಿನ್‌ ತೆಂಡೂಲ್ಕರ್‌ ಭಾರತೀಯ ಜನತಾ ಪಾರ್ಟಿ (ಬಿಜೆಪಿ) ಸೇರಿದ್ದಾರೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಓಡಾಡುತ್ತಿದೆ.

ಸಚಿನ್‌ ತೆಂಡೂಲ್ಕರ್‌ ಹಳದಿ ಬಣ್ಣದ ಕುರ್ತಾ ಧರಿಸಿರುವ ಫೋಟೋವನ್ನು ಪೋಸ್ಟ್‌ ಮಾಡಿ, ‘ ಇಂಡಿಯಾ ವಿತ್‌ ನಮೋ’ ಫೇಸ್‌ಬುಕ್‌ ಪೇಜ್‌ ತೆಂಡೂಲ್ಕರ್‌ ಬಿಜೆಪಿ ಸೇರುತ್ತಿದ್ದಾರೆ ಎಂದು ಪೋಸ್ಟ್‌ ಮಾಡಿದೆ. ಅದು 2000 ಬಾರಿ ಶೇರ್‌ ಆಗಿದೆ. ಸಾವಿರಾರು ಜನರು ಸ್ವಾಗತ ಕೋರಿ ಕಾಮೆಂಟ್‌ ಕೂಡ ಮಾಡಿದ್ದಾರೆ. ಅನಂತರದಲ್ಲಿ ಈ ಪೋಸ್ಟ್‌ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಆದರೆ ಈ ಫೋಟೋದ ಸತ್ಯಾಸತ್ಯತೆ ಏನು ಎಂದು ಪರಿಶೀಲಿಸಿದಾಗ ಈ ಎಲ್ಲಾ ರಾಜಕೀಯ ಪಕ್ಷವೊಂದನ್ನು ಸೇರಿದ್ದಾರೆ ಎಂಬುದು ಸುಳ್ಳು ಎಂದು ಸಾಬೀತಾಗಿದೆ. ವಾಸ್ತವವಾಗಿ ಈ ಫೋಟೋ 3 ವರ್ಷ ಹಳೆಯದ್ದು. ಅಂದರೆ 2015 ಏಪ್ರಿಲ್‌ 24ರಂದು ತೆಂಡೂಲ್ಕರ್‌ ಹುಟ್ಟುಹಬ್ಬದ ದಿನ ಕುಟುಂಬ ಸಮೇತರಾಗಿ ಮುಂಬೈನ ಸಿದ್ಧಿ ವಿನಾಯಕ ದೇವಸ್ಥಾನಕ್ಕೆ ಭೇಟಿ ನೀಡಿದ್ದರು.

ಆಗ ತೆಗೆಸಿಕೊಂಡ ಫೋಟೋ ಇದು. ಅಲ್ಲದೆ ಬೂಮ್‌ ಸಚಿನ್‌ ತೆಂಡೂಲ್ಕರ್‌ ಆಪ್ತರೊಬ್ಬರ ಬಳಿ ಈ ಬಗ್ಗೆ ಸ್ಪಷ್ಟೀಕರಣ ಕೇಳಿದ್ದು, ಅವರು ‘ಸಚಿನ ತೆಂಡೂಲ್ಕರ್‌ ಬಿಜೆಪಿ ಸೇರಿದ್ದಾರೆ ಎಂಬ ಸುದ್ದಿ ಸುಳ್ಳು ’ ಎಂದಿದ್ದಾರೆ. ಅಲ್ಲದೆ ಇನ್ನೂ ಕೆಲವರ ಬಳಿ ಸ್ಪಷ್ಟನೆ ಕೇಳಿದ್ದು ಅವರೂ ಈ ಸುದ್ದಿಯನ್ನು ಅಲ್ಲಗಳೆದಿದ್ದಾರೆ.

-ವೈರಲ್ ಚೆಕ್