ತಿರುವನಂತಪುರಂ[ಡಿ.28]: ಮಹಿಳೆಯರ ಪ್ರವೇಶ ಕುರಿತು ಸೃಷ್ಟಿಯಾಗಿರುವ ಬಿಕ್ಕಟ್ಟಿನ ಪರಿಣಾಮವೋ ಏನೋ ಗೊತ್ತಿಲ್ಲ. ಕೇರಳದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಬರಿಮಲೆ ಅಯ್ಯಪ್ಪ ದೇಗುಲದ ಆದಾಯ ಈ ವರ್ಷ ಭಾರಿ ಪ್ರಮಾಣದಲ್ಲಿ ಕುಸಿತ ಕಂಡಿದೆ.

ಅಯ್ಯಪ್ಪ ಯಾತ್ರಾ ಸೀಸನ್‌ ಆರಂಭವಾಗಿ ಡಿ.25ಕ್ಕೆ 39 ದಿನಗಳು ಆಗಿದ್ದು, 105 ಕೋಟಿ ರು. ಆದಾಯ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 160 ಕೋಟಿ ರು. ಆದಾಯ ಬಂದಿತ್ತು. ಕಳೆದ ವರ್ಷಕ್ಕೆ ಹೋಲಿಸಿದರೆ 55 ಕೋಟಿ ರು. ಆದಾಯ ಖೋತಾ ಆಗಿದೆ ಎಂದು ತಿರುವಾಂಕೂರು ದೇವಸ್ವ ಮಂಡಳಿ ಅಧ್ಯಕ್ಷ ಎ. ಪದ್ಮಕುಮಾರ್‌ ಅವರು ಸುದ್ದಿಗಾರರಿಗೆ ತಿಳಿಸಿದರು.

ಇಲ್ಲಿವರೆಗೆ 32 ಲಕ್ಷ ಭಕ್ತರು ಅಯ್ಯಪ್ಪ ದೇಗುಲಕ್ಕೆ ಭೇಟಿ ನೀಡಿದ್ದಾರೆ. ಪ್ರತಿನಿತ್ಯ ಗರಿಷ್ಠ ಎಂದರೆ 1.2 ಲಕ್ಷ ಮಂದಿ ಅಯ್ಯಪ್ಪ ದೇಗುಲಕ್ಕೆ ಬರುತ್ತಾರೆ. 60 ದಿನಗಳ ಯಾತ್ರೆ ಅವಧಿಯಲ್ಲಿ ಒಟ್ಟಾರೆ 85 ಲಕ್ಷ ಮಂದಿ ಬರುತ್ತಾರೆ. ಶೀಘ್ರದಲ್ಲೇ ಈ ಕುರಿತು ನಿಖರ ಅಂಕಿ-ಅಂಶ ನೀಡುವುದಾಗಿ ತಿಳಿಸಿದರು. ಈ ಹಿಂದೆ ದೇವಸ್ವ ಮಂಡಳಿ ಅಧಿಕಾರಿಗಳು ಪ್ರತಿ ವರ್ಷ ಅಯ್ಯಪ್ಪ ದೇಗುಲಕ್ಕೆ 5ರಿಂದ 6 ಕೋಟಿ ರು. ಭಕ್ತರು ಬರುತ್ತಾರೆ ಎಂದು ಹೇಳಿಕೊಳ್ಳುತ್ತಾರೆ. ಅದಕ್ಕೆ ಅಧ್ಯಕ್ಷರ ಅಂಕಿ-ಅಂಶ ತದ್ವಿರುದ್ಧವಾಗಿರುವುದು ಗಮನಾರ್ಹ.