ಕಮ್ಯೂನಿಸ್ಟ್‌, ಕಾಂಗ್ರೆಸ್‌ ಎರಡಕ್ಕೂ ಮಹಿಳೆಯರ ಕಾಳಜಿಯಿಲ್ಲ| ಎಡ ಸರ್ಕಾರದಿಂದ ಕೇರಳ ಸಂಸ್ಕೃತಿಗೆ ಅಗೌರವ: ಮೋದಿ

ತ್ರಿಶೂರು[ಜ.28]: ಕೇರಳದ ಎಲ್ಲ ಸಂಸ್ಕೃತಿಗಳಿಗೂ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ನೇತೃತ್ವದ ಕಮ್ಯುನಿಸ್ಟ್‌ ಸರ್ಕಾರವು ಅಗೌರವ ತೋರುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಮೂಲಕ ಋುತುಮತಿ ಮಹಿಳೆಯರ ಶಬರಿಮಲೆ ಅಯ್ಯಪ್ಪ ದೇವಸ್ಥಾನ ಪ್ರವೇಶಕ್ಕೆ ಅವಕಾಶ ಕಲ್ಪಿಸಿದ ರಾಜ್ಯ ಸರ್ಕಾರದ ವಿರುದ್ಧ ಪರೋಕ್ಷ ವಾಗ್ದಾಳಿ ಮಾಡಿದ್ದಾರೆ.

ಇಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನುದ್ದೇಶಿಸಿ ಭಾನುವಾರ ಮಾತನಾಡಿದ ಪ್ರಧಾನಿ ಮೋದಿ ಅವರು, ‘ಮಹಿಳೆಯರ ಸಬಲೀಕರಣದ ಬಗ್ಗೆ ಕಾಂಗ್ರೆಸ್‌ ಮತ್ತು ಕಮ್ಯುನಿಸ್ಟ್‌ ಪಕ್ಷಗಳಿಗೆ ಯಾವುದೇ ಕಾಳಜಿ ಇಲ್ಲ. ಮುಸ್ಲಿಂ ಮಹಿಳೆಯರ ರಕ್ಷಣೆಗಾಗಿ ಎನ್‌ಡಿಎ ಸರ್ಕಾರ ತ್ರಿವಳಿ ತಲಾಖ್‌ ಜಾರಿ ಸಂದರ್ಭದಲ್ಲೇ ಈ ವಿಚಾರ ಸಾಬೀತಾಗಿದೆ,’ ಎಂದು ಹೇಳಿದರು.

‘ಕಾಂಗ್ರೆಸ್‌ ಮತ್ತು ಕಮ್ಯುನಿಸ್ಟರಿಗೆ ಮಹಿಳಾ ಸಬಲೀಕರಣದ ಬಗ್ಗೆ ಯಾವುದೇ ಕಾಳಜಿಯಿಲ್ಲ. ಒಂದು ವೇಳೆ ಅವರಿಗೆ ಇದ್ದದ್ದೇ ಆದರೆ, ಅವರು ತ್ರಿವಳಿ ತಲಾಖ್‌ ಅನ್ನು ವಿರೋಧಿಸುತ್ತಿರಲಿಲ್ಲ. ದೇಶದ ಹಲವು ರಾಜ್ಯಗಳು ಮಹಿಳಾ ಮುಖ್ಯಮಂತ್ರಿಗಳನ್ನು ಕಂಡಿವೆ. ಆದರೆ, ಕಮ್ಯೂನಿಸ್ಟ್‌ ಪಕ್ಷದಿಂದ ಯಾರಾದರೂ ಮಹಿಳೆ ಸಿಎಂ ಆಗಿದ್ದಾರೆಯೇ,’ ಎಂದು ಪ್ರಶ್ನಿಸಿದರು. ಕಮ್ಯೂನಿಸ್ಟ್‌ ಸರ್ಕಾರದ ಆಡಳಿತದಿಂದಾಗಿ ರಾಜ್ಯದ ಸಾಂಸ್ಕೃತಿಕ ಹಿನ್ನೆಲೆಯು ಅಪಾಯದ ಸ್ಥಿತಿಯಲ್ಲಿದೆ ಎಂದು ಶಬರಿಮಲೆ ವಿಚಾರವಾಗಿ ಪ್ರತಿಕ್ರಿಯಿಸಿದರು.