ಅಮೆರಿಕ ಮೂಲದ ‘ಮೂಡಿಸ್’ ರೀತಿ ವಿಶ್ವದ ಮತ್ತೊಂದು ಪ್ರಮುಖ ರೇಟಿಂಗ್ ಏಜೆನ್ಸಿಯಾಗಿರುವ ಸ್ಟಾಂಡರ್ಡ್ ಆ್ಯಂಡ್ ಪೂರ್ (ಎಸ್ ಆ್ಯಂಡ್ ಪಿ) ಕೂಡ ಭಾರತದ ರೇಟಿಂಗ್ ಏರಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ನವದೆಹಲಿ (ನ.25): ಅಮೆರಿಕ ಮೂಲದ ‘ಮೂಡಿಸ್’ ರೀತಿ ವಿಶ್ವದ ಮತ್ತೊಂದು ಪ್ರಮುಖ ರೇಟಿಂಗ್ ಏಜೆನ್ಸಿಯಾಗಿರುವ ಸ್ಟಾಂಡರ್ಡ್ ಆ್ಯಂಡ್ ಪೂರ್ (ಎಸ್ ಆ್ಯಂಡ್ ಪಿ) ಕೂಡ ಭಾರತದ ರೇಟಿಂಗ್ ಏರಿಸಬಹುದು ಎಂಬ ನಿರೀಕ್ಷೆ ಹುಸಿಯಾಗಿದೆ.

ಭಾರತದ ರೇಟಿಂಗ್‌ನಲ್ಲಿ ಯಥಾಸ್ಥಿತಿಯನ್ನು ಆ ಸಂಸ್ಥೆ ಕಾಯ್ದುಕೊಂಡಿದೆ. ಆದರೆ ವಿತ್ತೀಯ ಸದೃಢತೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದೆ. 2007 ರ ಜನವರಿಯಲ್ಲಿ ಎಸ್ ಆ್ಯಂಡ್ ಪಿ ಭಾರತಕ್ಕೆ ‘ಬಿಬಿಬಿ-’ (ಆಆಆ) ರೇಟಿಂಗ್ ನೀಡಿತ್ತು. ಬಾಂಡ್ ಮಾರುಕಟ್ಟೆಯಲ್ಲಿ ಇದು ಅತ್ಯಂತ ಕನಿಷ್ಠ ಹೂಡಿಕೆ ಗ್ರೇಡ್. ಆಗ ಆರ್ಥಿಕ ಮುನ್ನೋಟದಲ್ಲಿ ‘ಸ್ಥಿರ’ ಎಂಬ ಪಟ್ಟ ನೀಡಿತ್ತು. 2009 ರಲ್ಲಿ ಅದನ್ನು ‘ಋಣ’ (ನೆಗೆಟಿವ್)ಕ್ಕೆ ಇಳಿಸಿ, 2010 ರಲ್ಲಿ ಮತ್ತೆ ‘ಸ್ಥಿರ’ಕ್ಕೇರಿಸಿತ್ತು. 2012 ರಲ್ಲಿ ‘ನೆಗೆಟಿವ್’ಗೆ ಇಳಿಸಿ, 2014 ರಲ್ಲಿ ಅಂದರೆ ಮೋದಿ ಅವರು ಪ್ರಧಾನಿಯಾದ ಬಳಿಕ ‘ಸ್ಥಿರ’ ಸ್ಥಾನ ನೀಡಿತ್ತು.

ಭಾರತದ ರೇಟಿಂಗ್ ಅನ್ನು 14 ವರ್ಷದ ಬಳಿಕ ಮೂಡಿಸ್ ಏರಿಕೆ ಮಾಡಿದ ಹಿನ್ನೆಲೆಯಲ್ಲಿ ಇತರೆ ರೇಟಿಂಗ್ ಏಜೆನ್ಸಿಗಳಾದ ಎಸ್ ಆ್ಯಂಡ್ ಪಿ ಹಾಗೂ ಫಿಚ್ ಕೂಡ ಅದೇ ಹಾದಿ ತುಳಿಯಲಿವೆ ಎಂದು ಊಹಿಸಲಾಗಿತ್ತು. ಆದರೆ ರೇಟಿಂಗ್‌ನಲ್ಲಿ ಬದಲಾವಣೆ ಮಾಡಲು ಎಸ್ ಆ್ಯಂಡ್ ಪಿ ನಿರಾಕರಿಸಿದೆಯಾದರೂ, ಭಾರತದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿದೆ. ಆರ್ಥಿಕ ಹಾಗೂ ಸಾಂಸ್ಥಿಕ ಸುಧಾರಣೆಗಳಿಂದಾಗಿ ಭಾರತದ ಅಭಿವೃದ್ಧಿ ಸಂಭಾವ್ಯತೆ ವೃದ್ಧಿಯಾಗಿದೆ. ಬಲಿಷ್ಠ ಜಿಡಿಪಿ ಬೆಳವಣಿಗೆ, ಸಮರ್ಥ ಬಾಹ್ಯ ಹೊರನೋಟ, ಆರ್ಥಿಕ ವಿಶ್ವಾಸಾರ್ಹತೆ ಸುಧಾರಣೆಯನ್ನು ಭಾರತ ಕುರಿತಾದ ರೇಟಿಂಗ್ ಪ್ರತಿಬಿಂಬಿಸುತ್ತದೆ. ಭಾರತದ ಬಲಿಷ್ಠ ಪ್ರಜಾಸತ್ತಾತ್ಮಕ ಸಂಸ್ಥೆಗಳು, ಮುಕ್ತ ಮಾಧ್ಯಮಗಳು ನೀತಿ ಸ್ಥಿರತೆ, ರಾಜೀ ಉತ್ತೇಜಿಸಿ, ರೇಟಿಂಗ್‌ಗೆ ಬೆಂಬಲವಾಗಿ ನಿಲ್ಲುತ್ತವೆ ಎಂದು ಹೇಳಿದೆ. ಈ ಸದೃಢತೆಯಿಂದಾಗಿಯೇ ದೇಶದ ತಲಾದಾಯ ಕಡಿಮೆ ಇದ್ದರೂ, ಸಾಲ ಹೆಚ್ಚು ಇದ್ದರೂ ಸಮತೋಲನವಾಗುತ್ತಿದೆ ಎಂದು ತಿಳಿಸಿದೆ.