ಮಾಸ್ಕೋ(ಆ.15): ಭಾರೀ ಅಪಘಾತಕ್ಕೆ ತುತ್ತಾಗಲಿದ್ದ ವಿಮಾನವೊಂದು ಪೈಲೆಟ್’ನ ಸಮಯಪ್ರಜ್ಞೆಯಿಂದ ಸುರಕ್ಷಿತವಾಗಿ ಲ್ಯಾಂಡಿಂಗ್ ಆದ ಘಟನೆ ರಷ್ಯಾದಲ್ಲಿ ನಡೆದಿದೆ.

ವಿಮಾನ ಟೇಕ್ ಆಫ್ ಆಗುತ್ತಿದ್ದಂತೆ ಹಕ್ಕಿಗಳ ಹಿಂಡು ವಿಮಾನದ ಎಂಜಿನ್’ಗೆ ಬಡಿದಿದ್ದರಿಂದ ವಿಮಾನ ಬೆಂಕಿಗಾಹುತಿಯಾಗುವ ಸಾಧ್ಯತೆ ಹೆಚ್ಚಿದೆ. ಅನಾಹುತದ ಅರಿವಾದ ಪೈಲಟ್ ಕೂಡಲೇ ಜೋಳದ ಹೊಲದಲ್ಲಿ ವಿಮಾನವನ್ನು ತುರ್ತು ಭೂಸ್ಪರ್ಶ ಮಾಡಿಸಿ 233 ಜನರ ಪ್ರಾಣ ಉಳಿಸಿದ್ದಾರೆ.

ಉರಲ್ ಏರ್‌ಲೈನ್ಸ್ ಏರ್ ಬಸ್ 321 ನ ಪೈಲಟ್ ಡ್ಯಾಮಿರ್ ಯೂಸೂಫೋವ್ ಇದೀಗ ರಷ್ಯಾದಲ್ಲಿ ಹೀರೋ ಆಗಿದ್ದು, ಪ್ರಯಾಣಿಕರ ಜೀವ ಉಳಿಸಿದ ಅವರಿಗೆ ಎಲ್ಲೆಡೆಯಿಂದ ಪ್ರಶಂಸೆಯ ಸುರಿಮಳೆ.

ಮಾಸ್ಕೋದ ಹೊರವಲಯದಲ್ಲಿ ಈ ಘಟನೆ ನಡೆದಿದ್ದು, ವಿಮಾನ ತುರ್ತು ಭೂಸ್ಪರ್ಶ ಮಾಡಿದ್ದರಿಂದ 23 ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆದರೆ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ರಷ್ಯಾ ಅಧಿಕಾರಿಗಳು ತಿಳಿಸಿದ್ದಾರೆ.