ಕಾಂಗ್ರೆಸ್-ಜೆಡಿಎಸ್ ಮೈತ್ರಿ ಆಗುತ್ತಾ?  ಎರಡು ಪಕ್ಷಗಳು ಮೇಲ್ನೋಟಕ್ಕೆ ಮೈತ್ರಿ ವಿಚಾರವನ್ನ ತಳ್ಳಿ ಹಾಕುತ್ತಿದ್ದರೂ, ಒಳಗೊಳಗೆ ಮೈತ್ರಿ ಬಗ್ಗೆ ಆಸಕ್ತಿ ಹೊಂದಿವೆ. ಆದ್ರೆ, ಸದ್ಯಕ್ಕೆ ದೇವೇಗೌಡರು ಮೈತ್ರಿ ವಿಚಾರದ ಬಗ್ಗೆ ಚಕಾರ ಎತ್ತುತ್ತಿಲ್ಲ. ಕಾರಣ ಏನಿರಬಹುದು? ಸಮಯ ನೋಡಿ ಗೌಡ್ರು ಗ್ರೀನ್ ಸಿಗ್ನಲ್ ಕೊಡಬಹುದಾ? ಇಲ್ಲಿದೆ ಗೌಡರ ತಂತ್ರ ಫುಲ್ ಡಿಟೇಲ್ಸ್.

ಬೆಂಗಳೂರು(ಮೇ 03): ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಸಮಯ ಬಹಳವಿದೆ. ಆದ್ರೂ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಈಗಿನಿಂದಲೇ ಚುನಾವಣೆಗೆ ಭರದ ಸಿದ್ಧತೆ ನಡೆಸಿವೆ. ಬೈ ಎಲೆಕ್ಸನ್ ಗೆದ್ದಿರುವ ಕಾಂಗ್ರೆಸ್ ಮುಂದಿನ ಬಾರಿಯೂ ಅಧಿಕಾರ ತನ್ನದೇ ಎನ್ನುತ್ತಿದೆ.

ಬಿಜೆಪಿ ಮಿಷನ್ 150 ಲೆಕ್ಕಾಚಾರ
ಬಿಜೆಪಿ ಮೋದಿ ಹವಾದ ಮೇಲೆ ಗೆಲುವಿನ ಕನಸು ಕಾಣುತ್ತಿದೆ. ಮೋದಿ ಹವಾ 2018 ರಲ್ಲಿ ವರ್ಕೌಟ್ ಆಗುತ್ತೆ. ಮಿಷನ್ 150 ಸಾಧಿಸುತ್ತೇವೆ ಅನ್ನೋದು ಕಮಲ ಪಡೆ ಲೆಕ್ಕಾಚಾರ.

ದಳಪತಿಯಿಂದ ಮೈತ್ರಿ ಲೆಕ್ಕಾಚಾರ
ಸದ್ಯದ ಪರಿಸ್ಥಿತಿಯಲ್ಲಿ ಕಾಂಗ್ರೆಸ್, ಬಿಜೆಪಿ ಸ್ಪಷ್ಟ ಬಹುಮತ ಪಡೆಯೋಕೆ ಸಾಧ್ಯವೇ ಇಲ್ಲ.. ಜೆಡಿಎಸ್ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರೋಕೆ ಛಾನ್ಸೇ ಇಲ್ಲ.. ಹೀಗಾಗೇ ಜೆಡಿಎಸ್ ಪಕ್ಷದ ವರಿಷ್ಠ ದೇವೇಗೌಡರು ಹಾಗೂ ರಾಜ್ಯಾಧ್ಯಕ್ಷ ಹೆಚ್ ಡಿ ಕುಮಾರಸ್ವಾಮಿ ಮೈತ್ರಿ ಲಾಭ ನಷ್ಟದ ಲೆಕ್ಕಾಚಾರದಲ್ಲಿ ಬ್ಯುಸಿಯಾಗಿದ್ದಾರೆ.. ಅಷ್ಟಕ್ಕೂ ಕಾಂಗ್ರೆಸ್​ನತ್ತ ಜೆಡಿಎಸ್ ಒಲವು ಎನ್ನಲಾಗ್ತಿದೆಯಾದ್ರೂ ಸದ್ಯಕ್ಕೆ ದಳಪತಿಗಳು ಇದನ್ನ ಬಾಯ್ಬಿಟ್ಟು ಹೇಳ್ತಿಲ್ಲ.. ಕಾರಣ ರಾಷ್ಟ್ರಪತಿ ಎಲೆಕ್ಷನ್.

ಗೌಡರ ಗೇಮ್
ಜುಲೈನಲ್ಲಿ ರಾಷ್ಟ್ರಪತಿ ಹುದ್ದೆಗೆ ಚುನಾವಣೆ ನಡೆಯಲಿದೆ. ಬಿಜೆಪಿ ಹೊರತುಪಡಿಸಿ ಅನ್ಯ ಪಕ್ಷಗಳು ಅಭ್ಯರ್ಥಿ ಹಾಕೋದಕ್ಕೆ ತಯಾರಿ ನಡೆಸಿವೆ. ಒಳ್ಳೆಯ ಅಭ್ಯರ್ಥಿ ಕಣಕ್ಕಿಳಿಸಿದ್ರೆ ಅವರಿಗೆ ಸಪೋರ್ಟ್.. ಇಲ್ಲದಿದ್ರೆ ಬಿಜೆಪಿ ಅಭ್ಯರ್ಥಿಗೆ ಜೈ ಅನ್ನೋ ಮೂಲಕ ತಾವು ಬಿಜೆಪಿ ಜೊತೆಗಿದ್ದೇವೆ ಅನ್ನೋ ಸಂದೇಶ ರವಾನೆ ಮಾಡೋದು ಗೌಡರ ಲೆಕ್ಕಾಚಾರ.

ಬಿಎಸ್​ವೈ ದೂರ ಇಟ್ಟರೆ ಬಿಜೆಪಿ ಜೊತೆ ಮೈತ್ರಿ

ಡಿಕೆಶಿ ಮೂಲೆ ಗುಂಪು ಮಾಡಿದ್ರೆ ‘ಕೈ’ಗೆ ಜೈ

ಗೌಡರು ಇನ್ನೂ ಒಂದು ಮಾಸ್ಟರ್ ಪ್ಲಾನ್ ಮಾಡಿದ್ದಾರೆ. ಅದೇನಂದ್ರೆ ಬಿಜೆಪಿ ಯಡಿಯೂರಪ್ಪರನ್ನ ದೂರ ಇಟ್ಟಾಗ ಅಥವಾ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಫೇಸ್ ಮಾಡಿದ್ರೆ, ಬಿಜೆಪಿಗೆ ಜೈ ಅನ್ನೋದು.. ಇತ್ತ ಕಾಂಗ್ರೆಸ್ ಜೊತೆ ಸಖ್ಯ ಬಯಸಬೇಕಂದ್ರೆ ಇಲ್ಲೂ ಒಂದು ಕಂಡಿಷನ್. ೨೦೦೪ರಲ್ಲಿ ಜೆಡಿಎಸ್, ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು. ಗೌಡರು ಇತ್ತ ಷರತ್ತಿನಂತೆ ಕಾಂಗ್ರೆಸ್ ಡಿಕೆ ಶಿವಕುಮಾರರನ್ನು ಸಂಪುಟದಿಂದ ದೂರ ಇಟ್ಟಿತ್ತು.. ಅದೇ ರೀತಿ ಗೌಡರು ಈ ಬಾರಿಯೂ ಕಂಡಿಷನ್ ಮೇಲೆ ಮೈತ್ರಿ ಒಪ್ಪಿಕೊಳ್ಬಹುದು ಎನ್ನಲಾಗ್ತಿದೆ. ಆದ್ರೆ, ದಳಪತಿ ಗೇಮ್ ಪ್ಲಾನ್ ಏನು ಅನ್ನೋದು ರಾಷ್ಟ್ರಪತಿ ಎಲೆಕ್ಷನ್ ಮುಗಿಯೋವರೆಗೂ ಕಾಯಲೇಬೇಕು.

ಮೈತ್ರಿ ಸಾಧ್ಯವೇ ಇಲ್ಲವೆಂದ ಕುಮಾರಣ್ಣ:
ಇದೇ ವೇಳೆ, ಸುವರ್ಣನ್ಯೂಸ್ ಜೊತೆ ದೂರವಾಣಿಯಲ್ಲಿ ಮಾತನಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮೈತ್ರಿ ಸಾಧ್ಯತೆಯನ್ನು ತಳ್ಳಿಹಾಕಿದರು. ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಜೆಡಿಎಸ್ ಯಾವುದೇ ಕಾರಣಕ್ಕು ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದರು. "ರೈತರ ಸಮಸ್ಯೆಗೆ ಕೇಂದ್ರದ ಬಿಜೆಪಿ ಸರಕಾರ ಮತ್ತು ರಾಜ್ಯದ ಕಾಂಗ್ರೆಸ್ ಸರಕಾರಗಳೆರಡೂ ಸ್ಪಂದಿಸುತ್ತಿಲ್ಲ. ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅಗತ್ಯವಿದೆ. ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಅವಶ್ಯಕತೆ ತಮಗಿಲ್ಲ" ಎಂದು ಹೆಚ್'ಡಿಕೆ ಸ್ಪಷ್ಟಪಡಿಸಿದರು. ಒಂದು ವೇಳೆ, ಬಿಜೆಪಿ ಅಥವಾ ಕಾಂಗ್ರೆಸ್ ಜೊತೆ ಜೆಡಿಎಸ್ ಮೈತ್ರಿ ಮಾಡಿಕೊಂಡಿದ್ದೇ ಆದಲ್ಲಿ ತಾನು ರಾಜಕೀಯ ನಿವೃತ್ತಿ ತೆಗೆದುಕೊಳ್ಳುವುದಾಗಿಯೂ ಈ ಸಂದರ್ಭದಲ್ಲಿ ಕುಮಾರಣ್ಣ ಹೇಳಿದರು.

- ಶ್ರೀನಿವಾಸ ಹಳಕಟ್ಟಿ, ಪೊಲಿಟಿಕಲ್ ಬ್ಯೂರೋ, ಸುವರ್ಣ ನ್ಯೂಸ್