Asianet Suvarna News Asianet Suvarna News

ಗಣೇಶ ಕೂರಿಸಲು ಈ ನಿಯಮ ಅನುಸರಿಸುವುದು ಕಡ್ಡಾಯ

ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ನೆರವಾಗುವಂತೆ ಪ್ರತಿ ಪೆಂಡಾಲ್‌ನಲ್ಲೂ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ನಗರ ಪೊಲೀಸ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ. ಯಾವ ನಿಯಮ ಪಾಲಿಸಬೇಕು ಎನ್ನುವ ಬಗ್ಗೆ ಇಲ್ಲಿದೆ ಮಾಹಿತಿ. 

Rules And Regulation FOr Ganesh Festival
Author
Bengaluru, First Published Sep 12, 2018, 8:44 AM IST

ಬೆಂಗಳೂರು: ಭಾವೈಕ್ಯತೆ ಮತ್ತು ಸೌಹಾರ್ದದ ಸಂಕೇತವಾದ ಗಣೇಶ ಹಬ್ಬವನ್ನು ಶಾಂತಿಯುತವಾಗಿ ಆಚರಿಸಲು ನೆರವಾಗುವಂತೆ ಪ್ರತಿ ಪೆಂಡಾಲ್‌ನಲ್ಲೂ ಸಿಸಿಟಿವಿ ಕ್ಯಾಮರಾ ಅಳವಡಿಸುವಂತೆ ನಗರ ಪೊಲೀಸ ಆಯುಕ್ತರ ಕಚೇರಿ ಪ್ರಕಟಣೆ ತಿಳಿಸಿದೆ. ಗಣೇಶ ವಿಸರ್ಜನಾ ಮೆರವಣಿಗೆಯು ಸೂಕ್ಷ್ಮ ಸ್ಥಳ, ಅತೀ ಸೂಕ್ಷ್ಮ ಸ್ಥಳ, ಹಾಗೂ ಪ್ರಾರ್ಥನಾ ಸ್ಥಳಗಳ ಮುಂಭಾಗದಲ್ಲಿ ಸಾಗುವಾಗ ಸಿಡಿಮದ್ದು, ಪಟಾಕಿಗಳನ್ನು ಸಿಡಿಸಬಾರದು. ಧ್ವನಿವರ್ಧಕಗಳನ್ನು ಬೆಳಗ್ಗೆ 6 ರಿಂದ ರಾತ್ರಿ 10 ಗಂಟೆಯವರೆಗೆ ಮಾತ್ರ ಬಳಸುವಂತೆ ಸೂಚಿಸಲಾಗಿದೆ. ಗಣೇಶ ಪ್ರತಿಷ್ಠಾಪನೆ ಹಾಗೂ ಇತರೆ ಕಾರ್ಯಕ್ರಮಗಳ ಆಯೋಜನೆಗಾಗಿ ಬಲವಂತವಾಗಿ ಹಾಗೂ ಕಾನೂನು ಬಾಹಿರವಾಗಿ ವಂತಿಗೆಯನ್ನು ಸಂಗ್ರಹಿಸುವವರ ವಿರುದ್ಧ ಕಾನೂನು ಪ್ರಕಾರ ಕಠಿಣ ಕ್ರಮ ಕೈಗೊಳ್ಳಲಾಗುವುದು. ಸಂಭ್ರಮ ವೇಳೆ ಸಾರ್ವಜನಿಕರಿಗೆ ತೊಂದರೆಯಾಗದಂತೆ ಜಾಗೃತೆ ವಹಿಸಬೇಕೆಂದು ಎಚ್ಚರಿಕೆ ನೀಡಲಾಗಿದೆ.

ಪಾಲಿಕೆ ಪರವಾನಗಿ ಪಡೆಯಲೇಬೇಕು

ಚಪ್ಪರ ಶಾಮಿಯಾನಗಳನ್ನು ಹಾಕುವ ಬಗ್ಗೆ ಪಾಲಿಕೆಯಿಂದ ಪರವಾನಗಿ ಪಡೆದುಕೊಳ್ಳಬೇಕು. ಗಣೇಶ ಪ್ರತಿಷ್ಠಾಪನೆಯಿಂದ ವಿಸರ್ಜನೆ ಆಗುವವರೆಗೂ ಪ್ರತಿಷ್ಠಾಪನೆ ಸ್ಥಳದಲ್ಲಿ ಇಬ್ಬರು ಜವಾಬ್ದಾರಿಯುತ ಕಾರ್ಯಕರ್ತರು ಇರಬೇಕು. ದಿನದ 24 ಗಂಟೆಯೂ ಸ್ಥಳದಲ್ಲಿ ಆಯೋಜಕರ ಪರವಾದ ಕಾರ್ಯಕರ್ತರು ಇರಬೇಕು. ಪೆಂಡಾಲನ್ನು ಮತ್ತು ಗಣೇಶ ವಿಗ್ರಹವನ್ನು ಖಾಲಿ ಬಿಟ್ಟು ಹೋಗುವಂತಿಲ್ಲ. ವಿವಾದಿತ ಸ್ಥಳದಲ್ಲಿ ಪ್ರತಿಷ್ಠಾಪನೆ ಮಾಡುವಂತಿಲ್ಲ, ಸ್ಥಳದ ಮಾಲಿಕರ ಒಪ್ಪಿಗೆಯನ್ನು ಕಡ್ಡಾಯವಾಗಿ ಪಡೆದು ಆಯಾ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ಸೂಚಿಸಲಾಗಿದೆ.

ವಾಹನ ಸಂಚಾರ ಒತ್ತಡ ಇರುವ ಸ್ಥಳಗಳಲ್ಲಿ ಪ್ರತಿಷ್ಠಾಪನೆಗೆ ಅವಕಾಶ ಇಲ್ಲ. ವಾಹನ ಸಂಚಾರಕ್ಕೆ ತೊಂದರೆ ಆಗದಂತೆ ಪೆಂಡಾಲ್ ನಿರ್ಮಿಸಬೇಕು. ಚಪ್ಪರ, ಶಾಮಿಯಾನಗಳನ್ನು ಗಟ್ಟಿಮುಟ್ಟಾಗಿ ಇರುವಂತೆ ನೋಡಿಕೊಳ್ಳುವುದು.

ಚಪ್ಪರಗಳಲ್ಲಿ ಬೆಂಕಿ ನಂದಿಸುವ ಸಾಮಗ್ರಿಗಳನ್ನು ಇಟ್ಟುಕೊಂಡು, ಬೆಂಕಿ ಹರಡುವ ಉರುವಲು, ಸೀಮೆಎಣ್ಣೆ, ಸೌದೆ ಇತ್ಯಾದಿ ಸಾಧನಗಳನ್ನು ಇಡಬಾರದು. ಯಾವುದೇ ಕಾರಣಕ್ಕೂ ಪೆಂಡಾಲ್‌ನಲ್ಲಿ ಅಡುಗೆ ಮಾಡಬಾರದು. ವಿದ್ಯುತ್ ಸಂಪರ್ಕ ಮತ್ತು ವಿದ್ಯುತ್ ಅಲಂಕಾರಕ್ಕೆ ಸಂಬಂಧಪಟ್ಟಂತೆ ಬೆಸ್ಕಾಂನಿಂದ ಅನುಮತಿ ಪಡೆಯಬೇಕು. ಅಗ್ನಿಶಾಮಕ ದಳ ಮತ್ತು ಸಂಚಾರ ಪೊಲೀಸರಿಂದ ನಿರಪೇಕ್ಷಣಾ ಪತ್ರ ಪಡೆಯಬೇಕು. 

ಗಣೇಶ ದರ್ಶನಕ್ಕೆ ಬರುವ ಭಕ್ತರು ಮತ್ತು ಸಾರ್ವಜನಿಕರಿಗಾಗಿ ಆಗಮನ ಮತ್ತು ನಿರ್ಗಮನದ ವ್ಯವಸ್ಥೆಯನ್ನು ಸಮರ್ಪಕವಾಗಿ ಮಾಡಬೇಕು. ಜನಜಂಗುಳಿಗೆ ಆಸ್ಪದ ನೀಡದಂತೆ ಬ್ಯಾರಿಕೇಡ್ ಮತ್ತು  ಕಾರ್ಯಕರ್ತರ ನೇಮಿಸಬೇಕು, ಇದಕ್ಕೆ ಆಯೋಜಕರೆ ಜವಾಬ್ದಾರರು. ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಯಾವುದೇ ರೀತಿಯ ಅಪರಾಧ ನಡೆಯದಂತೆ, ಕಾನೂನು ಸುವ್ಯವಸ್ಥೆಗೆ ಭಂಗ ಆಗದಂತೆ ಎಚ್ಚರವಹಿಸಬೇಕು.

ಮೆರವಣಿಗೆ ವೇಳೆ ಏನೇ ಅಪರಾಧ ನಡೆದರೂ ಅದಕ್ಕೆ ಆಯೋಜಕರೆ ಜವಾಬ್ದಾರಿ. ಪೆಂಡಾಲ್, ಮೆರವಣಿಗೆ ಮತ್ತು ಮನರಂಜನಾ ಕಾರ್ಯಕ್ರಮದಲ್ಲಿ ಹುಡುಗಿಯರನ್ನು ಚುಡಾಯಿಸುವುದು, ಕೀಟಲೆ ಮಾಡದಂತೆ ಆಯೋಜಕರೆ ಎಚ್ಚರ ವಹಿಸಬೇಕು ಪ್ರತಿಷ್ಠಾಪನಾ ಮಂಡಳಿಯ ಸಂಘಟಕರು ತಮ್ಮ ಮಂಡಳಿಯ ಅಧ್ಯಕ್ಷ, ಕಾರ್ಯದರ್ಶಿ ಮತ್ತು ಇತರೆ ಪದಾಧಿಕಾರಿಗಳ ಹೆಸರು, ವಿಳಾಸ, ದೂರವಾಣಿ ಸಂಖ್ಯೆಗಳನ್ನು ಸಂಬಂಧಪಟ್ಟ ಠಾಣಾಧಿಕಾರಿಗೆ ಒದಗಿಸಿ ತುರ್ತು ಸಂದರ್ಭದಲ್ಲಿ ಸಂಪರ್ಕಿಸಲು ಸಹಕರಿಸಬೇಕು. 

ವಿಸರ್ಜನಾ ಮೆರವಣಿಗೆಯಲ್ಲಿ ಸ್ವಯಂಸೇವಕರಿಗೆ ಗುರುತಿನ ಚೀಟಿ, ಬ್ಯಾಡ್ಜ್, ಟೀ-ಶರ್ಟ್, ಕ್ಯಾಪ್ ನೀಡಿ ಶಾಂತರೀತಿಯಿಂದ ಮೆರವಣಿಗೆ ವಿಸರ್ಜನಾ ಸ್ಥಳ ತಲುಪುವಂತೆ ಸಹಕರಿಸಬೇಕು. ಸಾಂಸ್ಕೃತಿ ಕಾರ್ಯಕ್ರಮಗಳು ನಡೆಯುವುದಿದ್ದಲ್ಲಿ, ವ್ಯಾಪ್ತಿಯ ಠಾಣೆಗೆ ಮೊದಲೇ ಮಾಹಿತಿ ನೀಡಿ ಸಿಬ್ಬಂದಿ ನೇಮಕ ಮತ್ತು ಸೂಕ್ತ ಬಂದೋಬಸ್ತ್ ಮಾಡಿಕೊಳ್ಳಬೇಕು.

ಧ್ವನಿವರ್ಧಕಗಳ ಬಳಕೆಗೆ ನೀಡಿರುವ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲಿಸತಕ್ಕದ್ದು. ವಿಸರ್ಜನೆ ಮೆರವಣಿಗೆ ರಾತ್ರಿ 10 ರ ಒಳಗೆ ಮುಗಿಯುವಂತೆ ಆಯೋಜಕರು ನೋಡಿಕೊಳ್ಳಬೇಕು. ಮೆರವಣಿಗೆ ಸಮಯದಲ್ಲಿ ವಿದ್ಯುತ್ ವೈರ್‌ಗಳು, ಮರದ ಕೊಂಬೆಗಳ ಬಗ್ಗೆ ಗಮನಹರಿಸಬೇಕು. ಮೆರವಣಿಗೆ ಅಗತ್ಯವಾದ ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು

Follow Us:
Download App:
  • android
  • ios